ಶನಿವಾರ, ಏಪ್ರಿಲ್ 4, 2020
19 °C
ಎಎಫ್‌ಸಿ ಕಪ್‌ ಫುಟ್‌ಬಾಲ್‌: ಇಂದು ಮಝಿಯಾ ವಿರುದ್ಧದ ಹಣಾಹಣಿ

ತಿರುಗೇಟು ನೀಡುವ ಛಲದಲ್ಲಿ ಬಿಎಫ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂಟು ದಿನಗಳ ಹಿಂದೆ (ಫೆಬ್ರುವರಿ 19) ಮಾಲ್ಡೀವ್ಸ್‌ನಲ್ಲಿ ನಡೆದಿದ್ದ ಎಎಫ್‌ಸಿ ಕಪ್‌ ‘ಪ್ಲೇ ಆಫ್‌’ ಹಂತದ ಮೊದಲ ಲೆಗ್‌ನ ಪಂದ್ಯದಲ್ಲಿ ಆತಿಥೇಯ ಮಝಿಯಾ ಸ್ಪೋರ್ಟ್ಸ್‌ ರಿಕ್ರಿಯೇಷನ್‌ ಕ್ಲಬ್‌ ವಿರುದ್ಧ ಮಣಿದಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ, ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.

ಬುಧವಾರ ನಡೆಯುವ ಉಭಯ ತಂಡಗಳ ನಡುವಣ ಎರಡನೇ ಲೆಗ್‌ನ ಹಣಾಹಣಿಗೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದೆ. ಬಿಎಫ್‌ಸಿ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ. ಬೆಂಗಳೂರಿನ ತಂಡವು ಗುಂಪು ಹಂತಕ್ಕೆ ಅರ್ಹತೆ ಗಳಿಸಬೇಕಾದರೆ ಕನಿಷ್ಠ 1–0 ಗೋಲಿನಿಂದ ಮಝಿಯಾ ತಂಡವನ್ನು ಮಣಿಸಬೇಕು.

ಹೀಗಾಗಿ ಬಿಎಫ್‌ಸಿ ಕೋಚ್‌ ಕಾರ್ಲಸ್‌ ಕ್ವದ್ರತ್‌, ಈ ಪೈಪೋಟಿಯಲ್ಲಿ ಪ್ರಮುಖ ಆಟಗಾರರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.

ಮೊದಲ ಲೆಗ್‌ನ ಪಂದ್ಯದಲ್ಲಿ ಕ್ವದ್ರತ್‌ ಅವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ‘ಬಿ’ ತಂಡದ ಆಟಗಾರರನ್ನು ಕಣಕ್ಕಿಳಿಸಿದ್ದರು. ಆ ಹಣಾಹಣಿಯಲ್ಲಿ ಬೆಂಗಳೂರಿನ ತಂಡ 1–2 ಗೋಲುಗಳಿಂದ ಪರಾಭವಗೊಂಡಿತ್ತು.

ಭಾರತದ ‘ಫುಟ್‌ಬಾಲ್‌ ಮಾಂತ್ರಿಕ’ ಸುನಿಲ್‌ ಚೆಟ್ರಿ, ಮಂಡಿ ನೋವಿನ ಕಾರಣ ಮೂರು ವಾರಗಳ ಕಾಲ ಅಂಗಳದಿಂದ ದೂರ ಉಳಿದಿದ್ದರು. ಇದರಿಂದ ಗುಣಮುಖವಾಗಿರುವ ಅವರು ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಸಹ ಆಟಗಾರರ ಜೊತೆ ಅಭ್ಯಾಸ ನಡೆಸಿದ್ದಾರೆ. ಬುಧವಾರ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಒಂದೊಮ್ಮೆ ಚೆಟ್ರಿ ಕಣಕ್ಕಿಳಿದರೆ ಆತಿಥೇಯರ ಬಲ ಹೆಚ್ಚಲಿದೆ.

ಮೊದಲ ಲೆಗ್‌ನ ಹಣಾಹಣಿಯಲ್ಲಿ ಗೋಲು ಗಳಿಸಿದ್ದ ಮಿಡ್‌ಫೀಲ್ಡರ್‌ ನೀಲಿ ಪೆರ್ಡೊಮೊ ಅವರು ಮತ್ತೊಮ್ಮೆ ಮೋಡಿ ಮಾಡುವ ಉತ್ಸಾಹದಲ್ಲಿದ್ದಾರೆ. ಇವರಿಗೆ ಸುರೇಶ್‌ ವಾಂಗ್‌ಜಮ್‌ರಿಂದ ಸೂಕ್ತ ಬೆಂಬಲ ಸಿಗುವ ನಿರೀಕ್ಷೆ ಇದೆ.

ಎಟಿಕೆ ವಿರುದ್ಧದ ಐಎಸ್‌ಎಲ್‌ ಪಂದ್ಯದ ವೇಳೆ ಗಾಯಗೊಂಡಿದ್ದ ಮುಂಚೂಣಿ ವಿಭಾಗದ ಆಟಗಾರ ಥಾಂಗ್‌ಕೋಸಿಯೆಮ್‌ ಹಾವೊಕಿಪ್‌ ಅವರು ಬುಧವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ದಿಮಾಸ್‌ ಡೆಲ್ಗಾಡೊ, ಅಲ್ಬರ್ಟ್‌ ಸೆರಾನ್‌ ಹಾಗೂ ಹರ್ಮನ್‌ಜ್ಯೋತ್‌ ಖಾಬ್ರಾ ಅವರೂ ಆಡುತ್ತಿಲ್ಲ. ಇವರ ಅನುಪಸ್ಥಿತಿಯಲ್ಲಿ ಉಳಿದ ಆಟಗಾರರು ಕಾಲ್ಚಳಕ ತೋರಬೇಕಿದೆ.

ವಿಶ್ವಾಸದಲ್ಲಿ ಮಝಿಯಾ: ಮಝಿಯಾ ತಂಡವೂ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದು ಸಾಧ್ಯವಾಗದಿದ್ದರೆ ಕನಿಷ್ಠ ಡ್ರಾ ಮಾಡಿಕೊಂಡಾದರೂ ಗುಂಪು ಹಂತಕ್ಕೆ ಅರ್ಹತೆ ಗಳಿಸುವ ಆಲೋಚನೆಯಲ್ಲಿ ಪ್ರವಾಸಿ ಪಡೆ ಇದೆ.

ಮುಂಚೂಣಿ ವಿಭಾಗದ ಆಟಗಾರರಾದ ಇಬ್ರಾಹಿಂ ಮಹುಧಿ ಮತ್ತು ಕಾರ್ನೆಲಿಯಸ್‌ ಸ್ಟೀವರ್ಟ್‌ ಅವರು ಈ ತಂಡದ ಆಧಾರಸ್ಥಂಭಗಳಾಗಿದ್ದಾರೆ. ಇವರನ್ನು ಕಟ್ಟಿಹಾಕಲು ಬಿಎಫ್‌ಸಿ ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯಲಿದೆ ಎಂಬುದು ಸದ್ಯದ ಕುತೂಹಲ.

ಪಂದ್ಯದ ಆರಂಭ: ರಾತ್ರಿ 7.30

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು