ಚೆಟ್ರಿ ಮೋಡಿ: ಭಾರತ ಜಯಭೇರಿ

7
ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌: ತಲಾ ಒಂದು ಗೋಲು ಗಳಿಸಿದ ಅನಿರುದ್ಧ್‌, ಜೆಜೆ

ಚೆಟ್ರಿ ಮೋಡಿ: ಭಾರತ ಜಯಭೇರಿ

Published:
Updated:
Prajavani

ಅಬುಧಾಬಿ: ಎಎಫ್‌ಸಿ ಏಷ್ಯಾಕಪ್‌ನಲ್ಲಿ ಚೊಚ್ಚಲ ಕಿರೀಟದ ಮೇಲೆ ಕಣ್ಣಿಟ್ಟಿರುವ ಭಾರತ ಫುಟ್‌ಬಾಲ್‌ ತಂಡ ಈ ಹಾದಿಯಲ್ಲಿ ಗೆಲುವಿನ ಹೆಜ್ಜೆ ಇಟ್ಟಿದೆ.

ಅಲ್‌ ನಹಯಾನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’‍ ಗುಂಪಿನ ಹಣಾಹಣಿಯಲ್ಲಿ ಭಾರತ 4–1 ಗೋಲುಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಮೂರು ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

4–4–2 ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದ ಭಾರತ ತಂಡ ಶುರುವಿನಲ್ಲಿ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿತು. 27ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಸುನಿಲ್‌ ಚೆಟ್ರಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ಈ ಖುಷಿ ಭಾರತದ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಥಾಯ್ಲೆಂಡ್‌ ತಂಡದ ತೀರಾಸಿಲ್‌ ಡಾಂಗ್ಡಾ ಅವಕಾಶ ನೀಡಲಿಲ್ಲ. 33ನೇ ನಿಮಿಷದಲ್ಲಿ ಗೋಲು ಹೊಡೆದ ಅವರು 1–1 ಸಮಬಲಕ್ಕೆ ಕಾರಣರಾದರು.

46ನೇ ನಿಮಿಷದಲ್ಲಿ ಚೆಟ್ರಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ಆಶಿಕ್‌ ಕುರುನಿಯನ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಚೆಟ್ರಿ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ದ್ವಿತೀಯಾರ್ಧದಲ್ಲಿ ಭಾರತದ ಆಟ ಇನ್ನಷ್ಟು ರಂಗು ಪಡೆದುಕೊಂಡಿತು. ಸತತವಾಗಿ ಥಾಯ್ಲೆಂಡ್‌ ರಕ್ಷಣಾ ಕೋಟೆಯ ಮೇಲೆ ದಾಳಿ ನಡೆಸುವ ತಂತ್ರಕ್ಕೆ 68ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ಮಿಡ್‌ಫೀಲ್ಡರ್‌ ಅನಿರುದ್ಧ್‌ ಥಾಪಾ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು.

78ನೇ ನಿಮಿಷದಲ್ಲಿ ಕೋಚ್‌ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ಅವರು ಆಶಿಕ್‌ ಕುರುನಿಯನ್‌ ಅವರ ಬದಲು ಜೆಜೆ ಲಾಲ್‌ಪೆಕ್ಲುವಾ ಅವರನ್ನು ಕಣಕ್ಕಿಳಿಸಿದ್ದು ಫಲ ನೀಡಿತು. ಮೈದಾನಕ್ಕಿಳಿದ ಎರಡೇ ನಿಮಿಷದಲ್ಲಿ ಜೆಜೆ ಮೋಡಿ ಮಾಡಿದರು.

80ನೇ ನಿಮಿಷದಲ್ಲಿ ಹಾಲಿಚರಣ್‌ ನರ್ಜರಿ ತಮ್ಮತ್ತ ತಳ್ಳಿದ ಚೆಂಡನ್ನು ಜೆಜೆ, ಎದುರಾಳಿ ಆವರಣದ 30 ಗಜ ದೂರದಿಂದ ಒದ್ದು ಗುರಿ ಮುಟ್ಟಿಸಿದ ರೀತಿ ಅಭಿಮಾನಿಗಳ ಮನ ಸೆಳೆಯುವಂತಿತ್ತು. ಈ ಗೋಲಿನೊಂದಿಗೆ ಭಾರತದ ಗೆಲುವಿನ ಹಾದಿ ಸುಗಮವಾಯಿತು. 

ನಂತರದ ಹತ್ತು ನಿಮಿಷಗಳ ಆಟದಲ್ಲಿ ಭಾರತ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಹೆಚ್ಚುವರಿ ಅವಧಿಯಲ್ಲೂ ಎಚ್ಚರಿಕೆಯಿಂದ ಆಡಿ ಗೆಲುವಿನ ತೋರಣ ಕಟ್ಟಿತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !