ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಡೋನಾ ನೆನಪಿನಲ್ಲಿ ಕಂಬನಿಯ ಧಾರೆ

Last Updated 26 ನವೆಂಬರ್ 2020, 13:55 IST
ಅಕ್ಷರ ಗಾತ್ರ

ಬ್ಯೂನಸ್ ಐರಿಸ್‌: ಕ್ರೀಡಾಂಗಣದಲ್ಲಿ ಕಾಲ್ಚಳಕದ ಮೂಲಕ ಪುಳಕ ಮೂಡಿಸಿದ ಫುಟ್‌ಬಾಲ್ ದಿಗ್ಗಜ, ಡ್ರಿಬ್ಲಿಂಗ್ ಮಾಂತ್ರಿಕ ಡಿಯೆಗೊ ಮರಡೋನಾ ಅವರ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಮತ್ತು ಫುಟ್‌ಬಾಲ್ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ಅವರು ಜನಿಸಿ ಬೆಳೆದ ಅರ್ಜೆಂಟೀನಾದಲ್ಲಂತೂ ಗುರುವಾರ ದುಃಖ ಮಡುಗಟ್ಟಿ ನಿಂತಿತ್ತು.

ಭಾರತದಲ್ಲೂ ಅವರನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆದವು. ಕೋಲ್ಕತ್ತದಲ್ಲಿ ಜಮಾಯಿಸಿದ ಫುಟ್‌ಬಾಲ್ ಪ್ರಿಯರು ಮರಡೋನಾ ಅಲ್ಲಿಗೆ ಭೇಟಿ ನೀಡಿದ ಗಳಿಗೆಯ ನೆನಪಿನಲ್ಲಿ ಮಿಂದರೆ, ‘ದೇವರ ನಾಡು’ ಕೇರಳದಲ್ಲಿ ಮರಡೋನಾ ಅವರನ್ನು ’ನಮ್ಮ ದೇವರು’ ಎಂದು ಕರೆದು ಕೊಂಡಾಡಲಾಯಿತು. ಅರ್ಜೇಂಟೀನಾಗೆ ಫುಟ್‌ಬಾಲ್ ವಿಶ್ವಕಪ್ ಪ್ರಶಸ್ತಿ ದೊರಕಿಸಿಕೊಟ್ಟ, ‘ಶತಮಾನದ ಗೋಲಿ’ನ ಮೂಲಕ ಇತಿಹಾಸ ಬರೆದಿದ್ದ 60 ವರ್ಷದ ಮರಡೋನಾ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಅರ್ಜೇಂಟೀನಾದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ.

1964ರ ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿ ಚಾಂ‍ಪಿಯನ್ ಪಟ್ಟವನ್ನು ದೊರಕಿಸಿಕೊಟ್ಟಿದ್ದ ಮರಡೋನಾ ಅವರ 10ನೇ ಸಂಖ್ಯೆಯ ಜೆರ್ಸಿಯನ್ನು ಹೋಲುವ ಟಿ–ಶರ್ಟ್ ಹಿಡಿದುಕೊಂಡು ಕಣ್ಣೀರು ಹಾಕುತ್ತ, ಘೋಷಣೆಗಳನ್ನು ಕೂಗುತ್ತ ಬ್ಯೂನಸ್ ಐರಿಸ್‌ನ ವಿವಿಧ ಕ್ರೀಡಾಂಗಣಗಳು ಮತ್ತು ಇತರ ಕಡೆಗಳಲ್ಲಿ ಜನರು ಸೇರಿದರು. ರಾಜಧಾನಿ ನಗರದ ಉತ್ತರದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಸಂಬಂಧಿಕರು ಮತ್ತು ಸಮೀಪವರ್ತಿಗಳು ಕಣ್ಣೀರು ಹಾಕಿದರು. ಅರ್ಜೆಂಟೀನಾದ ಈಗಿನ ಹೀರೊ ಲಯೊನೆಲ್ ಮೆಸ್ಸಿ ‘ಮರಡೋನಾ ಭೌತಿಕವಾಗಿ ಇಲ್ಲದಾಗಿರಬಹುದು. ಆದರೆ ಅವರು ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ. ಯಾಕೆಂದರೆ ಮರಡೋನಾ ನಶ್ವರ’ ಎಂದು ಭಾವುಕವಾಗಿ ನುಡಿದರು.

ಅರ್ಜೆಂಟೀನಾದಲ್ಲಿ ಫುಟ್‌ಬಾಲ್‌ ಧರ್ಮವಾಗಿದ್ದರೆ ಆ ಧರ್ಮದ ದೇವರು ಮರಡೋನಾ. ಮರಡೋನಿಯನ್ ಚರ್ಚ್‌ ಸ್ಥಾಪಕರ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ಚರ್ಚ್ ಕರೆಗೆ ಓಗೊಟ್ಟ ನೂರಾರು ಮಂದಿ ಅಕ್ಟೋಬರ್ 30ರಂದು 60ನೇ ಜನ್ಮದಿನ ಆಚರಿಸಿದ ಸಂಭ್ರಮವನ್ನು ನೆನೆದು ಭಾವುಕರಾದರು.

ದಕ್ಷಿಣ ಅಮೆರಿಕದಿಂದ ಯೂರೋಪ್‌ನ ಹಲವು ಭಾಗ, ಏಷ್ಯಾದ ಮೂಲೆಮೂಲೆಗಳಲ್ಲೂ ಮರಡೋನಾ ಸ್ಮರಣೆ ನಡೆಯಿತು. ‘ನಾವು ಎಂದಾದರೊಮ್ಮೆ ಸ್ವರ್ಗದಲ್ಲಿ ಜೊತೆಯಾಗಿ ಫುಟ್‌ಬಾಲ್ ಆಡುತ್ತೇವೆ’ ಎಂದು ಬ್ರೆಜಿಲ್‌ನ ಫುಟ್‌ಬಾಲ್ ದಂತಕತೆ, 80 ವರ್ಷದ ಪೆಲೆ ಹೇಳಿದರು. ಭಾರತದಲ್ಲಿ ಕಂಬನಿ ಮಿಡಿದ ಪ್ರಮುಖರಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ತಾರೆ ಶಾರೂಖ್ ಖಾನ್ ಕೂಡ ಇದ್ದಾರೆ.

ಫುಟ್‌ಬಾಲ್‌ ಮಾದರಿಯ ಕೇಕ್ ಕತ್ತರಿಸಲು ಹಿಂದೇಟು

‘ಫುಟ್‌ಬಾಲ್ ಮಾದರಿಯಲ್ಲಿದ್ದ ಕೇಕ್ ಕತ್ತರಿಸಲು ಹಿಂದೇಟು ಹಾಕಿದ ಮರಡೋನಾ, ತಮಗೆ ಫುಟ್‌ಬಾಲ್ ಮೇಲಿರುವ ಪ್ರೀತಿ–ಅಭಿಮಾನವನ್ನು ಪ್ರಕಟಿಸಿದ್ದರು. ಅವರ ಆ ನಿಷ್ಠೆ ನನ್ನನ್ನು ಭಾವುಕನನ್ನಾಗಿಸಿತ್ತು...’ ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಕೇರಳದ ಐ.ಎಂ.ವಿಜಯನ್ ಆಡಿದ ಮಾತು ಇದು.

’2012ರಲ್ಲಿ ಮರಡೋನಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಣ್ಣೂರಿಗೆ ಬಂದಿದ್ದರು. ಸಂಭ್ರಮದ ಭಾಗವಾಗಿ ಕ್ರೀಡಾಂಗಣ ಮತ್ತು ಅದರೊಳಗೆ ಫುಟ್‌ಬಾಲ್ ಇರಿಸಿದಂತೆ ವಿನ್ಯಾಸಗೊಳಿಸಲಾದ ಕೇಕ್‌ ಅವರ ಮುಂದೆ ಇರಿಸಲಾಯಿತು. ಆದರೆ ಅದನ್ನು ಕತ್ತರಿಸಲು ಅವರು ಒಪ್ಪಲಿಲ್ಲ. ಕೇಕ್‌ನ ಹೊರಭಾಗವನ್ನು ಮಾತ್ರ ಅವರು ಕತ್ತರಿಸಿದರು’ ಎಂದು ವಿಜಯನ್ ಹೇಳಿದರು.

‘ಅಂದು ಅವರೊಂದಿಗೆ ಎರಡು ನಿಮಿಷ ಫುಟ್‌ಬಾಲ್ ಆಡಿದ್ದೆ. ಅದು, ನನ್ನ ಬದುಕಿನ ಅವಿಸ್ಮರಣೀಯ ಗಳಿಗೆ. ಮುಕ್ತವಾಗಿ ಮಾತನಾಡುವ ಮತ್ತು ಮುಗ್ದತೆಯಿಂದ ವರ್ತಿಸುವ ಅವರ ರೀತಿ ನನಗೆ ತುಂಬ ಇಷ್ಟ’ ಎಂದು ಅವರು ನುಡಿದರು.

ಗೋವಾದಲ್ಲಿ ಮರಡೋನಾ ಪ್ರತಿಮೆ

ಫುಟ್‌ಬಾಲ್ ಪ್ರಿಯರ ನಾಡು ರಾಜ್ಯ ಗೋವಾದಲ್ಲಿ 2018ರಿಂದಲೇ ಮರಡೋನಾ ಅವರ ಪ್ರತಿಮೆ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಕರಾವಳಿ ಭಾಗದ ಉತ್ತರ ಜಿಲ್ಲೆಯಲ್ಲಿ ಸ್ಥಾಪಿಸುವ ಪ್ರತಿಮೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಸಚಿವ ಮೈಕೆಲ್ ಲೋಬೊ ಅವರು 2018ರಲ್ಲಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಮಹಾರಾಷ್ಟ್ರದ ಕಲಾವಿದರು ಇದರ ಕೆಲಸದಲ್ಲಿ ನಿರತರಾಗಿದ್ದಾರೆ.

‘10ನೇ ಸಂಖ್ಯೆಯ ಜೆರ್ಸಿಗೆ ‌ನಿವೃತ್ತಿ ಘೋಷಿಸಿ’

ಮರಡೋನಾ ಅವರು ಧರಿಸುತ್ತಿದ್ದ 10ನೇ ಸಂಖ್ಯೆಯ ಜೆರ್ಸಿಗೆ ನಿವೃತ್ತಿ ಘೋಷಿಸಬೇಕು ಎಂದು ಮಾರ್ಸೆಲಿ ತಂಡದ ಕೋಚ್ ಆ್ಯಂಡ್ರೆ ವಿಲಾಸ್ ಬೋಸ್‌ ಅವರು ಫಿಫಾವನ್ನು ಕೋರಿದ್ದಾರೆ. ಮರಡೋನಾ ಅವರು ಆಡಿದ್ದ ನೆಪೋಲಿ ತಂಡವು 2000ನೇ ಇಸವಿಯಿಂದ 10ನೇ ಸಂಖ್ಯೆಯ ಜೆರ್ಸಿಯನ್ನು ಬಳಸುತ್ತಿಲ್ಲ. ಆ ಕ್ಲಬ್‌ಗೆ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಟ್ಟ ಆಟಗಾರ ಎಂಬ ಗೌರವದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಜಾಗತಿಕ ಫುಟ್‌ಬಾಲ್‌ಗೆ ಮರಡೋನಾ ನೀಡಿದ ಕಾಣಿಕೆಯನ್ನು ಮನ್ನಿಸಿ ಜೆರ್ಸಿ ಸಂಖ್ಯೆ 10ಕ್ಕೆ ಎಲ್ಲ ಕಡೆಯಲ್ಲೂ ನಿವೃತ್ತಿ ಘೋಷಿಸಬೇಕು ಎಂದು ಬೋಸ್ ಆಗ್ರಹಿಸಿದ್ದಾರೆ.

ಮರಡೋನಾ ಬದುಕಿನ 10 ಪ್ರಮುಖ ದಿನಗಳು

* 1960ರ ಅಕ್ಟೋಬರ್ 30: ಬ್ಯೂನಸ್ ಐರಿಸ್‌ನ ಲಾನಸ್‌ನಲ್ಲಿ ಜನನ

* 1977ರ ಫೆಬ್ರುವರಿ 27: ಹಂಗರಿ ವಿರುದ್ಧ ರಾಷ್ಟ್ರೀಯ ತಂಡದಲ್ಲಿ ಪದಾರ್ಪಣೆ

* 1979 ಜೂನ್‌ 2: ಅರ್ಜೇಂಟೀನಾ ಪರ ಮೊದಲ ಗೋಲು; ಸ್ಕಾಟ್ಲೆಂಟ್‌ ವಿರುದ್ಧ, ಗ್ಲಾಸ್ಗೊ

* 1982: ಬೆಲ್ಜಿಯಂ ವಿರುದ್ಧ ಮೊದಲ ವಿಶ್ವಕಪ್‌ ಪಂದ್ಯದಲ್ಲಿ ಕಣಕ್ಕೆ

* 1986: ವಿಶ್ವಕಪ್‌ನಲ್ಲಿ ಮೊದಲ ಬಾರಿ ನಾಯಕ; ಚಾಂಪಿಯನ್ ಪಟ್ಟ

* 1990: ವಿಶ್ವಕಪ್‌ನಲ್ಲಿ ಎರಡನೇ ಬಾರಿ ನಾಯಕತ್ವ‌

* 1994: ವಿಶ್ವಕಪ್‌ನಲ್ಲಿ ಉದ್ದೀಪನ ಮದ್ದು ಸೇವನೆ ಸಾಬೀತು; ವಾಪಸ್‌, ವೃತ್ತಿಜೀವನಕ್ಕೆ ತೆರೆ

* 2020ರ ನವೆಂಬರ್‌ 25: ಹೃದಯಾಘಾತದಿಂದ ಸಾವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT