ಶನಿವಾರ, ಏಪ್ರಿಲ್ 4, 2020
19 °C
ಇಂದು ಬಿಎಫ್‌ಸಿ–ಎಟಿಕೆ ನಡುವಣ ಎರಡನೇ ಲೆಗ್‌ನ ಹಣಾಹಣಿ

ಐಎಸ್‌ಎಲ್‌ ಸೆಮಿಫೈನಲ್‌: ಯಾರಿಗೆ ಫೈನಲ್‌ ಟಿಕೆಟ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಒಂದೆಡೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ). ಮತ್ತೊಂದೆಡೆ ಎಟಿಕೆ ಎಫ್‌ಸಿ. ಈ ತಂಡಗಳ ಪೈಕಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವವರು ಯಾರು?

ಹೀಗೊಂದು ಪ್ರಶ್ನೆ ಈಗ ಫುಟ್‌ಬಾಲ್‌ ಪ್ರಿಯರನ್ನು ಕಾಡುತ್ತಿದೆ.

ಉಭಯ ತಂಡಗಳ ನಡುವಣ ಸೆಮಿಫೈನಲ್‌ ಪಂದ್ಯದ ಎರಡನೇ ಲೆಗ್‌ನ ಹಣಾಹಣಿ ಇಲ್ಲಿನ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಲೆಗ್‌ನ ಪೈಪೋಟಿಯಲ್ಲಿ 1–0 ಗೋಲಿನಿಂದ ಎಟಿಕೆ ತಂಡವನ್ನು ಮಣಿಸಿದ್ದ ಹಾಲಿ ಚಾಂಪಿಯನ್‌ ಬಿಎಫ್‌ಸಿ ಮತ್ತೊಮ್ಮೆ ಪ್ರಶಸ್ತಿ ಸುತ್ತು ಪ್ರವೇಶಿಸುವ ವಿಶ್ವಾಸದಲ್ಲಿದೆ.

ಈ ಕನಸು ಕೈಗೂಡಬೇಕಾದರೆ, ಭಾನುವಾರದ ಪೈಪೋಟಿಯಲ್ಲಿ ಸುನಿಲ್‌ ಚೆಟ್ರಿ ಪಡೆಯು ರಾಯ್‌ ಕೃಷ್ಣ ಸಾರಥ್ಯದ ಎಟಿಕೆ ವಿರುದ್ಧ ಕನಿಷ್ಠ ಗೋಲು ರಹಿತ (0–0) ಡ್ರಾ ಮಾಡಿಕೊಳ್ಳಬೇಕು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಲೆಗ್‌ನ ಹೋರಾಟದಲ್ಲಿ ಕಾಲ್ಚಳಕ ತೋರಿದ್ದ ದೇಶಾನ್‌ ಬ್ರೌನ್‌, ಬಿಎಫ್‌ಸಿ ಮೇಲಿನ ಒತ್ತಡವನ್ನು ಕೊಂಚ ತಗ್ಗಿಸಿದ್ದರು. ಸಾಲ್ಟ್‌ಲೇಕ್‌ ಮೈದಾನದಲ್ಲೂ ಇವರು ಮೋಡಿ ಮಾಡುವ ನಿರೀಕ್ಷೆ ಇದೆ.

ಸುನಿಲ್‌ ಚೆಟ್ರಿ, ಬಿಎಫ್‌ಸಿಯ ಆಧಾರಸ್ಥಂಭವಾಗಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ಬೆಂಗಳೂರಿನ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಹಿರಿಮೆ ಅವರದ್ದಾಗಿದೆ.

ಹಿಂದಿನ ಪಂದ್ಯದಲ್ಲಿ ಚೆಟ್ರಿ ಬಳಿ ಚೆಂಡು ಸುಳಿಯದಂತೆ ಎಚ್ಚರ ವಹಿಸಿದ್ದ ಎಟಿಕೆ, ಭಾನುವಾರವೂ ಇದೇ ತಂತ್ರ ಅನುಸರಿಸುವುದು ನಿಶ್ಚಿತ. ಒಂದೊಮ್ಮೆ ಎದುರಾಳಿಗಳು ಚೆಟ್ರಿ ಅವರನ್ನು ಕಟ್ಟಿಹಾಕಿದರೆ, ಎರಿಕ್‌ ಪಾರ್ಟಲು ಅಥವಾ ದಿಮಾಸ್‌ ಡೆಲ್ಗಾಡೊ ಕಾಲ್ಚಳಕ ತೋರುವುದು ಅವಶ್ಯ. ಇವರಿಗೆ ಕೆವಾನ್‌ ಫ್ರಾಟರ್‌, ಲಯನ್ ಅಗಸ್ಟಿನ್‌, ಆಶಿಕ್‌ ಕುರುಣಿಯನ್‌ ಮತ್ತು ಉದಾಂತ ಸಿಂಗ್‌ ಅವರಿಂದ ಅಗತ್ಯ ಬೆಂಬಲವೂ ಸಿಗಬೇಕು.

ಬೆಂಗಳೂರಿನ ತಂಡದ ರಕ್ಷಣಾ ಕೋಟೆ ಬಲಿಷ್ಠವಾಗಿದೆ. ಮೊದಲ ಲೆಗ್‌ನ ಹಣಾಹಣಿಯಲ್ಲಿ ಒರಟು ಆಟ ಆಡಿ ‘ಕೆಂಪು ಕಾರ್ಡ್‌’ ಪಡೆದಿರುವ ನಿಶುಕುಮಾರ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ. ಗಾಯಗೊಂಡಿರುವ ಅಲ್ಬರ್ಟ್‌ ಸೆರಾನ್‌ ಕೂಡ ಆಡುವುದು ಅನುಮಾನ. ಇವರ ಅನುಪಸ್ಥಿತಿಯಲ್ಲಿ ಇತರ ಆಟಗಾರರು ಜವಾಬ್ದಾರಿಯಿಂದ ಹೋರಾಡಬೇಕು.

ವಿಶ್ವಾಸದಲ್ಲಿ ಎಟಿಕೆ: ರಾಯ್‌ ಕೃಷ್ಣ ಬಳಗವು ತವರಿನ ಅಂಗಳದಲ್ಲಿ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಸಾಲ್ಟ್‌ಲೇಕ್‌ನಲ್ಲಿ ಆಡಿರುವ ಹಿಂದಿನ ಒಂಬತ್ತು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದಿರುವ ತಂಡ 18 ಗೋಲುಗಳನ್ನೂ ಗಳಿಸಿದೆ.

ನಾಯಕ ಕೃಷ್ಣ, ಡೇವಿಡ್‌ ವಿಲಿಯಮ್ಸ್‌ ಮತ್ತು ಎಡು ಗಾರ್ಸಿಯಾ ಅವರು ಬಿಎಫ್‌ಸಿಯ ರಕ್ಷಣಾ ಕೋಟೆಗೆ ಸವಾಲಾಗುವ ಸಾಮರ್ಥ್ಯ ಹೊಂದಿದ್ದಾರೆ. ಇವರನ್ನು ನಿಯಂತ್ರಿಸಲು ಬೆಂಗಳೂರಿನ ತಂಡ ವಿಶೇಷ ಯೋಜನೆಯೊಂದಿಗೆ ಅಂಗಳಕ್ಕಿಳಿಯುವುದು ಅಗತ್ಯ.\

*
ಫೈನಲ್‌ ಪ್ರವೇಶಿಸುವುದು ನಮ್ಮ ಗುರಿ. ಈ ಹಣಾಹಣಿಯಲ್ಲಿ ಹೆಚ್ಚು ಗೋಲು ಗಳಿಸುವ ಜೊತೆಗೆ ಎದುರಾಳಿಗಳ ಗೋಲು ಗಳಿಕೆಯನ್ನು ವಿಫಲಗೊಳಿಸಬೇಕು. ಈ ಸವಾಲನ್ನು ದಿಟ್ಟತನದಿಂದ ಮೆಟ್ಟಿನಿಲ್ಲುತ್ತೇವೆ.
-ಆ್ಯಂಟೋನಿಯೊ ಹಬಾಸ್‌, ಎಟಿಕೆ ಕೋಚ್‌ 

*
ಎಟಿಕೆ ಬಲಿಷ್ಠ ತಂಡ ಎಂಬುದರ ಅರಿವು ಇದೆ. ಈ ಪಂದ್ಯದಲ್ಲಿ ಗೆದ್ದರೆ ಪ್ರಶಸ್ತಿ ಸುತ್ತು ತಲುಪಬಹುದು. ಹೀಗಾಗಿ ಎದುರಾಳಿಗಳನ್ನು ಮಣಿಸಲು ಆಟಗಾರರೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಲಿದ್ದಾರೆ.
-ಕಾರ್ಲಸ್‌ ಕ್ವದ್ರತ್‌, ಬಿಎಫ್‌ಸಿ ಕೋಚ್‌ 

ಪಂದ್ಯದ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ಸ್ಟಾರ್‌.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು