ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ‘ನಮ್ಮವರು’...

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌...

ಆರು ವರ್ಷಗಳ ಹಿಂದೆ ಶುರುವಾದ ಈ ಕ್ಲಬ್‌, ಭಾರತದ ಫುಟ್‌ಬಾಲ್‌ನಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದೆ.

2013ರಲ್ಲಿ ಐ ಲೀಗ್‌ಗೆ ಪದಾರ್ಪಣೆ ಮಾಡಿ, ಅದೇ ವರ್ಷ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡ ಹಿರಿಮೆ ಬಿಎಫ್‌ಸಿ ತಂಡದ್ದು. ಮರು ವರ್ಷ ರನ್ನರ್ಸ್‌ ಅಪ್‌ ಆಗಿದ್ದ ಸುನಿಲ್‌ ಚೆಟ್ರಿ ಬಳಗವು 2015–16ನೇ ಋತುವಿನಲ್ಲಿ ಮತ್ತೊಮ್ಮೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಫೆಡರೇಷನ್‌ ಕಪ್‌ನಲ್ಲಿ ಎರಡು ಮತ್ತು ಇಂಡಿಯನ್‌ ಸೂಪರ್‌ ಕ‍ಪ್‌ನಲ್ಲಿ ಒಮ್ಮೆ ಕಿರೀಟ ಮುಡಿಗೇರಿಸಿಕೊಂಡಿದ್ದ ಬೆಂಗಳೂರಿನ ತಂಡ, ಪ್ರತಿಷ್ಠಿತ ಎಎಫ್‌ಸಿ ಕಪ್‌ನಲ್ಲಿ (2016) ರನ್ನರ್ಸ್‌ ಅಪ್‌ ಸಾಧನೆಯನ್ನೂ ಮಾಡಿತ್ತು. ಈ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾಜನವಾಗಿತ್ತು. ಇಂಡಿಯನ್‌ ಸೂಪರ್‌ ಲೀಗ್‌ನಲ್ಲೂ (ಐಎಸ್‌ಎಲ್‌) ಹೆಜ್ಜೆಗುರುತು ಮೂಡಿಸಿರುವ ಬಿಎಫ್‌ಸಿ ‘ದೇಶಿ’ ಫುಟ್‌ಬಾಲ್‌ನ ದೊರೆಯಾಗಿ ಮೆರೆಯುತ್ತಿದೆ.

ಬೆಂಗಳೂರಿನ ತಂಡದ ಈ ಸಾಧನೆಯಲ್ಲಿ ಭಾರತದವರ ಜೊತೆಗೆ ವಿದೇಶಿ ಆಟಗಾರರ ಪಾತ್ರವೂ ಮಹತ್ವದ್ದಾಗಿದೆ. ಬಿಎಫ್‌ಸಿ ಮೊದಲು ಒಪ್ಪಂದ ಮಾಡಿಕೊಂಡ ವಿದೇಶಿ ಆಟಗಾರರು ಇಂಗ್ಲೆಂಡ್‌ನ ಜಾನ್‌ ಜಾನ್ಸನ್‌ ಮತ್ತು ಕೀನ್ಯಾದ ಕರ್ಟಿಸ್‌ ಒಸಾನೊ. ಬಳಿಕ ಸೀನ್‌ ರೂನಿ, ಅಲೆಕ್ಸ್‌ ಬರೆರಾ, ಸಿಸ್ಕೊ ಹರ್ನಾಂಡೆಜ್‌, ಲೂಯಿಸ್‌ ಮ್ಯಾನುಯೆಲ್‌ ವಿಲ್ಲಾ, ಮಿಕು ಹೀಗೆ ಅನೇಕರು ಅಮೋಘ ಆಟದ ಮೂಲಕ ಬೆಂಗಳೂರಿನ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪ್ರಸ್ತುತ ಏಳು ಮಂದಿ ತಂಡದಲ್ಲಿದ್ದು, ಅವರೂ ಕಾಲ್ಚಳಕದ ಮೂಲಕ ಉದ್ಯಾನನಗರಿಯ ಫುಟ್‌ಬಾಲ್‌ ಪ್ರಿಯರನ್ನು ಪುಳಕಿತರನ್ನಾಗಿಸುತ್ತಿದ್ದಾರೆ.

ಪ್ರಸ್ತುತ ಬಿಎಫ್‌ಸಿ ತಂಡದಲ್ಲಿರುವ ಸ್ಪೇನ್‌ನ ನಾಲ್ಕು ಮಂದಿ ಆಟಗಾರರಲ್ಲಿ 32ರ ಹರೆಯದ ಒನ್ವು ಕೂಡ ಒಬ್ಬರು. ಇವರ ಜೊತೆ ಬೆಂಗಳೂರಿನ ತಂಡ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

2006ರಲ್ಲಿ ಸೀನಿಯರ್‌ ವಿಭಾಗಕ್ಕೆ ಪದಾರ್ಪಣೆ ಮಾಡಿದ್ದ ಒನ್ವು, ಜಾರ್ಜಿಯಾದ ಎಫ್‌ಸಿ ಡಿನಾಮೊ ಬಿಲಿಸಿ, ಲೆಯಿಡಾ ಎಸ್ಪೊರ್ಟಿಯು ಮತ್ತು ಲೊರ್ಕಾ ಎಫ್‌ಸಿ ತಂಡಗಳ ಪರ ಆಡಿದ್ದರು. ಸೆಗುಂಡಾ ‘ಬಿ’ ಡಿವಿಷನ್‌ ಲೀಗ್‌ನಲ್ಲಿ ಯುಕಾಮ್ ಕ್ಲಬ್‌ ಪ್ರತಿನಿಧಿಸಿದ್ದರು. ಬಿಎಫ್‌ಸಿ ಪರ ನಾಲ್ಕು ಪಂದ್ಯಗಳನ್ನು ಆಡಿರುವ ಇವರು ಇನ್ನೂ ಗೋಲಿನ ಖಾತೆ ತೆರೆದಿಲ್ಲ.

ಸ್ಪೇನ್‌ನ ಅನುಭವಿ ಆಟಗಾರ ದಿಮಾಸ್‌, ಮಿಡ್‌ಫೀಲ್ಡ್‌ ವಿಭಾಗದಲ್ಲಿ ಬಿಎಫ್‌ಸಿಯ ಬೆನ್ನೆಲುಬಾಗಿದ್ದಾರೆ.

36 ವರ್ಷದ ದಿಮಾಸ್‌, ಈ ವಯಸ್ಸಿನಲ್ಲೂ ಪಾದರಸದಂತಹ ಚಲನೆಯ ಮೂಲಕ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸೆಗುಂಡಾ ‘ಬಿ’ ಡಿವಿಷನ್‌ ಲೀಗ್‌ನಲ್ಲಿ ಎಫ್‌ಸಿ ಬಾರ್ಸಿಲೋನಾ ತಂಡದ ಪರ ಆಡಿದ್ದ ಇವರು ನಂತರ ಲಾ ಲಿಗಾ ಟೂರ್ನಿಯಲ್ಲಿ ಸಿ.ಡಿ.ನುಮಾನ್ಸಿಯಾ ಕ್ಲಬ್‌ ಅನ್ನು ಪ್ರತಿನಿಧಿಸಿದ್ದರು.

2017, ಜುಲೈ 11ರಂದು ಬಿಎಫ್‌ಸಿ ಸೇರಿದ್ದ ಇವರು ಈ ಬಾರಿಯ ಐಎಸ್‌ಎಲ್‌ನಲ್ಲಿ ಚೆಂಡನ್ನು ಅತಿ ಹೆಚ್ಚು ಬಾರಿ ಪಾಸ್‌ (863) ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 61 ಟ್ಯಾಕಲ್‌ಗಳನ್ನೂ ಮಾಡಿದ್ದಾರೆ.

ಆಸ್ಟ್ರೇಲಿಯಾದ ಈ ಆಟಗಾರ ಬಿಎಫ್‌ಸಿ ಸೇರಿದ್ದು 2017ರಲ್ಲಿ. ಆ ಋತುವಿ ನಲ್ಲಿ ಬೆಂಗಳೂರಿನ ತಂಡದ ಪರ 32 ಪಂದ್ಯಗಳನ್ನು ಆಡಿ ಐದು ಗೋಲು ಗಳಿಸಿದ್ದರು. ಸಹ ಆಟಗಾರರ ಗೋಲು ಗಳಿಕೆಗೂ (ಅಸಿಸ್ಟ್‌) ನೆರವಾಗಿದ್ದರು. ಹೀಗಾಗಿ ಬಿಎಫ್‌ಸಿ ಫ್ರಾಂಚೈಸ್‌, 33 ವರ್ಷದ ಈ ಆಟಗಾರನ ಒಪ್ಪಂದವನ್ನು ನವೀಕರಿಸಿ ಮತ್ತೆರಡು ವರ್ಷ ತಂಡದಲ್ಲೇ ಉಳಿಸಿಕೊಂಡಿದೆ. ಮಿಡ್‌ಫೀಲ್ಡ್‌ ಜೊತೆಗೆ ರಕ್ಷಣಾ ವಿಭಾಗದಲ್ಲೂ ತಂಡಕ್ಕೆ ಆಧಾರವಾಗಿರುವ ಪಾರ್ಟಲು, ಈ ಆವೃತ್ತಿಯ ಐಎಸ್‌ಎಲ್‌ನಲ್ಲಿ 11 ಪಂದ್ಯಗಳಿಂದ ಎರಡು ಗೋಲು ಹೊಡೆದಿದ್ದಾರೆ. 485 ಬಾರಿ ಚೆಂಡನ್ನು ಸಹ ಆಟಗಾರರಿಗೆ ವರ್ಗಾಯಿಸಿರುವ (‍ಪಾಸ್‌) ಅವರು 29 ಟ್ಯಾಕಲ್‌ಗಳನ್ನೂ ಮಾಡಿ ಎದುರಾಳಿಗಳ ಗೋಲು ಗಳಿಕೆಯ ಪ್ರಯತ್ನಗಳಿಗೆ ಅಡ್ಡಿಯಾಗಿದ್ದಾರೆ.

ಸಾಂಬಾ ನಾಡಿನ (ಬ್ರೆಜಿಲ್‌) ಪ್ರತಿಭೆ ರಾಫೆಲ್‌, ಐಎಸ್‌ಎಲ್‌ನಲ್ಲಿ ಮೊದಲು ಆಡಿದ್ದು ಚೆನ್ನೈಯಿನ್‌ ಎಫ್‌ಸಿ ಪರ. 2015ರಲ್ಲಿ ಚೆನ್ನೈನ ತಂಡ ಸೇರಿದ್ದ ಅವರು ಎಟಿಕೆ ವಿರುದ್ಧ ಗೋಲು ಹೊಡೆದಿದ್ದರು. ಐಎಸ್‌ಎಲ್‌ನಲ್ಲಿ ಬಾರಿಸಿದ ಚೊಚ್ಚಲ ಗೋಲು ಅದಾಗಿತ್ತು. ಬಳಿಕ ಬ್ರೆಜಿಲ್‌ನ ಬಾಂಗು ಕ್ಲಬ್‌ ಪರ ಕಣಕ್ಕಿಳಿದು ಗಮನ ಸೆಳೆದಿದ್ದ ಇವರೊಂದಿಗೆ ಹೋದ ವರ್ಷ ಬಿಎಫ್‌ಸಿ ಒಪ್ಪಂದ ಮಾಡಿಕೊಂಡಿತ್ತು.

ಬೆಂಗಳೂರಿನ ತಂಡದ ಪರ ಹತ್ತು ಪಂದ್ಯಗಳನ್ನು ಆಡಿರುವ ಇವರು ಇನ್ನೂ ಗೋಲಿನ ಖಾತೆ ತೆರೆದಿಲ್ಲ. ಮಿಡ್‌ಫೀಲ್ಡ್‌ನಲ್ಲಿ ಆಡುವ ರಾಫೆಲ್‌, ಅಮೋಘ ಪಾಸ್‌ಗಳು ಮತ್ತು ‘ಬ್ಲಾಕ್‌’ಗಳ ಮೂಲಕ ಬೆಂಗಳೂರಿನ ತಂಡಕ್ಕೆ ಬಲ ತುಂಬುತ್ತಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ಬಿಎಫ್‌ಸಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿಕು, ಈ ಬಾರಿ ತಂಡ ತೊರೆದಿದ್ದರು. ಇದರಿಂದಾಗಿ ಮುಂಚೂಣಿ ವಿಭಾಗದಲ್ಲಿ ಬಿಎಫ್‌ಸಿ ಸೊರಗಿದಂತೆ ಕಾಣುತ್ತಿತ್ತು. ನಾಯಕ ಸುನಿಲ್‌ ಚೆಟ್ರಿ ಮೇಲೆ ಅಧಿಕ ಒತ್ತಡವೂ ಬಿದ್ದಿತ್ತು. ಹೀಗಾಗಿ ಈ ಸಲ ತಂಡ ಹೆಚ್ಚು ಗೋಲುಗಳನ್ನು ಗಳಿಸಲು ಆಗಿರಲಿಲ್ಲ.

ಜಮೈಕಾದ ದೆಶೋರ್ನ್‌ ಬ್ರೌನ್‌ ತಂಡ ಸೇರಿದ ಮೇಲೆ ಬಿಎಫ್‌ಸಿಗೆ ಕಾಡುತ್ತಿದ್ದ ಚಿಂತೆಯೊಂದು ದೂರವಾಗಿದೆ. ನೀಳಕಾಯಕದ ಈ ಆಟಗಾರ ಹೋದ ವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಒಡಿಶಾ ಎಫ್‌ಸಿ ಎದುರಿನ ಪಂದ್ಯದಲ್ಲಿ ಕಾಲ್ಚಳಕ ತೋರಿ ತವರಿನ ಅಭಿಮಾನಿಗಳನ್ನು ರಂಜಿಸಿದ್ದರು. ಇವರು ಇತರ ಪಂದ್ಯಗಳಲ್ಲೂ ಮಿಂಚುವ ಭರವಸೆ ಇದೆ.

ಆರು ಅಡಿ ಮೂರು ಇಂಚು ಎತ್ತರದ ಆಜಾನುಬಾಹು ಆಟಗಾರ ಜುನಾನ್‌. ಇವರು ಜನಿಸಿದ್ದು ಸ್ಪೇನ್‌ನಲ್ಲಿ.

ಸೆಂಟರ್‌ ಬ್ಯಾಕ್‌ ವಿಭಾಗದಲ್ಲಿ ಆಡುವ ಈ ಆಟಗಾರನೊಂದಿಗೆ ಬಿಎಫ್‌ಸಿ, ಏಳು ವರ್ಷಗಳ ಸುದೀರ್ಘ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಜುನಾನ್‌ ಅವರು ಬುಂಡೆಸ್‌ ಲಿಗಾ, ಲಾ ಲಿಗಾ, ಸೆಗುಂಡಾ ಲೀಗ್‌ಗಳಲ್ಲಿ ಆಡಿರುವ ಅನುಭವಿ. 32 ವರ್ಷದ ಈ ಆಟಗಾರ ಆರನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ 14 ಪಂದ್ಯಗಳಿಂದ 1 ಗೋಲು ಗಳಿಸಿದ್ದಾರೆ. 384 ಪಾಸ್‌ ಹಾಗೂ 16 ಬ್ಲಾಕ್‌ಗಳನ್ನೂ ಮಾಡಿ ಬಿಎಫ್‌ಸಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಸ್ಪೇನ್‌ನ ಬಾರ್ಸಿಲೋನಾದಲ್ಲಿ ಹುಟ್ಟಿ ಬೆಳೆದ ಅಲ್ಬರ್ಟ್‌, ಎಳವೆಯಿಂದಲೇ ಫುಟ್‌ಬಾಲ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದವರು. 2007ರಲ್ಲಿ ಫುಟ್‌ಬಾಲ್‌ ಲೋಕಕ್ಕೆ ಅಡಿ ಇಟ್ಟ ಇವರು ಲಾ ಲಿಗಾ ಸೇರಿದಂತೆ ವಿವಿಧ ಲೀಗ್‌ಗಳಲ್ಲಿ ಆಡಿ ಗಮನ ಸೆಳೆದಿದ್ದಾರೆ. 2018ರಲ್ಲಿ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡ ಈ ತಾರೆ, ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಆರನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ 12 ಪಂದ್ಯಗಳನ್ನು ಆಡಿರುವ 33 ವರ್ಷದ ಈ ಆಟಗಾರ 293 ಪಾಸ್‌ಗಳನ್ನು ಮಾಡಿದ್ದು, ಒಂದು ಗೋಲು ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT