ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜಯದ ಭರವಸೆಯಲ್ಲಿ ಬೆಂಗಳೂರು ಎಫ್‌ಸಿ

ಎಫ್‌ಸಿ ಗೋವಾ ತಂಡ ಎದುರಾಳಿ
Last Updated 22 ಜನವರಿ 2022, 14:54 IST
ಅಕ್ಷರ ಗಾತ್ರ

ಬೆಂಗಳೂರು: ನೀರಸ ಪ್ರದರ್ಶನದ ಮೂಲಕ ನಿರಾಶೆ ಮೂಡಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಎಫ್‌ಸಿ ಗೋವಾ ತಂಡಗಳು ಗೆಲುವಿನ ನಿರೀಕ್ಷೆಯೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿವೆ. ಗೋವಾದ ಬ್ಯಾಂಬೊಲಿಮ್‌ನ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯ ಜಯ ಮುಂದಿನ ಹಂತಕ್ಕೆ ಸಾಗುವ ಹಾದಿಯಲ್ಲಿ ಉಭಯ ತಂಡಗಳಿಗೂ ಅನಿವಾರ್ಯವಾಗಿದೆ.

ಮೂರು ಡ್ರಾ ಸೇರಿದಂತೆ ಸತತ ಐದು ಪಂದ್ಯಗಳಲ್ಲಿ ಸೋಲರಿಯದ ಬೆಂಗಳೂರು ಎಫ್‌ಸಿ ಸದ್ಯ ಭರವಸೆಯಲ್ಲಿದೆ. 11 ತಂಡಗಳು ಪಾಲ್ಗೊಂಡಿರುವ ಟೂರ್ನಿಯ ಪಾಯಿಂಟ್ ಪಟ್ಟಿಯ 10ನೇ ಸ್ಥಾನದಲ್ಲಿದ್ದ ಬಿಎಫ್‌ಸಿ ಡಿಸೆಂಬರ್‌ ಮಧ್ಯದಿಂದ ಉತ್ತಮ ಸಾಮರ್ಥ್ಯ ತೋರುತ್ತಿದೆ. ಹೀಗಾಗಿ ಸದ್ಯ ಎಂಟನೇ ಸ್ಥಾನಕ್ಕೆ ಜಿಗಿದಿದೆ. ಗೋವಾ ಎದುರು ಗೆದ್ದರೆ 16 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೇರಲಿದೆ.

ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ 3–0 ಅಂತರದ ಜಯ ಗಳಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಾರ್ಕೊ ಪೆಜೊವೊಲಿ ಕೋಚ್ ಆಗಿರುವ ತಂಡದಲ್ಲಿ ಪ್ರಿನ್ಸ್ ಇಬಾರ ಮಿಂಚುತ್ತಿದ್ದಾರೆ. ಅವರಿಗೆ ರೋಷನ್ ಸಿಂಗ್‌ ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಬಾರ ಗಳಿಸಿರುವ ಒಟ್ಟು ನಾಲ್ಕು ಗೋಲುಗಳ ಪೈಕಿ ಮೂರಕ್ಕೆ ರೋಷನ್ ’ಅಸಿಸ್ಟ್‌’ ಮಾಡಿದ್ದರು.

ನಿರಾಶೆಯಲ್ಲಿ ಗೋವಾ

ಗೋವಾ ತಂಡ ಈ ಬಾರಿ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಬಲಿಷ್ಠವಲ್ಲದ ತಂಡಗಳ ವಿರುದ್ಧ ಜಯ ಗಳಿಸಲು ತಂಡಕ್ಕೆ ಸಾಧ್ಯವಾಗಿಲ್ಲ. ಒಟ್ಟು 12 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಗೆದ್ದಿರುವ ತಂಡ ಐದರಲ್ಲಿ ಸೋತಿದೆ. ಅದರ ಖಾತೆಯಲ್ಲಿ ಇರುವುದು 13 ಪಾಯಿಂಟ್ ಮಾತ್ರ.

ಬೆಂಗಳೂರು ಕೂಡ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ನಾಲ್ಕರಲ್ಲಿ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿದೆ. ಹಿಂದಿನ ಬಾರಿ ಎರಡು ತಂಡಗಳು ಮುಖಾಮುಖಿಯಾದಾಗ ಗೋವಾ 2–1ರಲ್ಲಿ ಗೆದ್ದಿತ್ತು.

ಇಂದಿನ ಪಂದ್ಯಗಳು

ಬೆಂಗಳೂರು ಎಫ್‌ಸಿ–ಎಫ್‌ಸಿ ಗೋವಾ

ಸ್ಥಳ: ಬ್ಯಾಂಬೊಲಿಮ್

ಆರಂಭ: ರಾತ್ರಿ 7.30

ಎಟಿಕೆ ಮೋಹನ್ ಬಾಗನ್‌–ಒಡಿಶಾ ಎಫ್‌ಸಿ

ಸ್ಥಳ: ಫತೋರ್ಡ

ಆರಂಭ: ರಾತ್ರಿ 9.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT