ಶುಕ್ರವಾರ, ಫೆಬ್ರವರಿ 21, 2020
18 °C
ಎಎಫ್‌ಸಿ ಕಪ್ ಪೂರ್ವಭಾವಿ ಸುತ್ತಿನ ಮೊದಲ ಲೆಗ್‌ ಪಂದ್ಯ: ಹಾಕಿಪ್ ಗಳಿಸಿದ ಗೋಲು

ಪಾರೊ ಸವಾಲು ಗೆದ್ದ ಬಿಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಥಿಂಪು, ಭೂತಾನ್: ಆತಿಥೇಯರ ಪ್ರಬಲ ಪ್ರತಿರೋಧವನ್ನು ಮೆಟ್ಟಿನಿಂತ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಎಎಫ್‌ಸಿ ಕಪ್ ಪೂರ್ವಭಾವಿ ಸುತ್ತಿನ ಮೊದಲ ಲೆಗ್‌ ಪಂದ್ಯದಲ್ಲಿ ಜಯ ಗಳಿಸಿತು. 

ಚಾಂಗ್ಲಿಮೈಥಾಂಗ್ ಕ್ರೀಡಾಂಗಣದಲ್ಲಿ ಥೊಂಕೊಸಿಮ್ ಹಾಕಿಪ್ ಗಳಿಸಿದ ಏಕೈಕ ಗೋಲಿನ ಬಲದಿಂದ ಬಿಎಫ್‌ಸಿ ಸ್ಥಳೀಯ ತಂಡ ಪಾರೊ ಎಫ್‌ಸಿಯನ್ನು 1–0ಯಿಂದ ಮಣಿಸಿತು.

ಐಎಸ್‌ಎಲ್‌ನಲ್ಲಿ ಆಡುವ ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ  ಕಣಕ್ಕೆ ಇಳಿದ ಬಿಎಫ್‌ಸಿ ಹೊಸಮುಖ ನೀಲಿ ಪೆರ್ಡೊಮೊ ಮತ್ತು ‘ಬಿ’ ತಂಡದ ರೋಷನ್ ಸಿಂಗ್‌ಗೆ ಅವಕಾಶ ನೀಡಿತ್ತು. ಆರಂಭದಿಂದಲೇ ಆಕ್ರಮಣಕ್ಕೆ ಒತ್ತು ನೀಡಿದ ತಂಡಕ್ಕೆ 15ನೇ ನಿಮಿಷದಲ್ಲಿ ಗೋಲು ಗಳಿಸುವ ಅಪೂರ್ವ ಅವಕಾಶ ಲಭಿಸಿತ್ತು. ಆದರೆ ಕೀನ್ ಲ್ಯೂಯಿಸ್ ಒದ್ದ ಚೆಂಡನ್ನು ಎದುರಾಳಿ ತಂಡದ ಗೋಲ್‌ಕೀಪರ್ ತೊಬ್‌ಗೇ ತಡೆದು ಆತಿಥೇಯ ತಂಡ ನಿಟ್ಟುಸಿರು ಬಿಡುವಂತೆ ಮಾಡಿದರು. 20ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲೂ ಗುರಿ ಕಾಣಲು ಬಿಎಫ್‌ಸಿಗೆ ಸಾಧ್ಯವಾಗಲಿಲ್ಲ.

ನಂತರ ಪಾರೊ ತಂಡ ಆಧಿಪತ್ಯ ಸ್ಥಾಪಿಸಿತು. ಚೆಂಚೊ ಗೆಲ್ತ್‌ಸೆನ್ ಮತ್ತು ಫುರ್ಪಾ ವಾಂಗ್‌ಚುಕ್ ಕೆಲಕಾಲ ಬಿಎಫ್‌ಸಿ ಪಾಳಯಕ್ಕೆ ತಲೆನೋವು ಉಂಟುಮಾಡಿದರು. ಆದರೆ ಬಿಎಫ್‌ಸಿ ಛಲ ಬಿಡಲಿಲ್ಲ. 32ನೇ ನಿಮಿಷದಲ್ಲಿ ಶೆಂಬೊಯ್ ಮತ್ತು ರೋಷನ್ ಆಕ್ರಮಣದ ಮೂಲಕ ಪಾರೊ ಪಾಳಯದಲ್ಲಿ ಆತಂಕ ಉಂಟುಮಾಡಿದರು.

ಗೋಲು ಗಳಿಸದೆ ವಿರಾಮಕ್ಕೆ ತೆರಳಿದ ಉಭಯ ತಂಡಗಳ ಆಟಗಾರರು ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕ್ಕೆ ಮುಂದಾದರು. 53ನೇ ನಿಮಿಷದಲ್ಲಿ ಹಾಕಿಪ್ ಯಶಸ್ಸು ಕಂಡರು. ತಿರುಗೇಟು ನೀಡಲು ಪಾರೊ ನಡೆಸಿದ ಪ್ರಯತ್ನ ಫಲಿಸಲಿಲ್ಲ.

ಎರಡನೇ ಲೆಗ್ ಪಂದ್ಯ ಇದೇ 12ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಎರಡೂ ಲೆಗ್‌ಗಳಲ್ಲಿ ಪಾರಮ್ಯ ಮೆರೆಯುವ ತಂಡ ಮುಖ್ಯ ಸುತ್ತಿಗೆ ಪ್ರವೇಶಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು