ಭಾನುವಾರ, ಮಾರ್ಚ್ 29, 2020
19 °C

ಐಎಸ್‌ಎಲ್: ಚೆನ್ನೈಯಿನ್‌ಗೆ ಮೊದಲ ಜಯದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ 6ನೇ ಆವೃತ್ತಿಯಲ್ಲಿ ಚೆನ್ನೈಯಿನ್ ಎಫ್‌ಸಿ ತಂಡದ ಜಯದ ಆಸೆ ಕೊನೆಗೂ ಕೈಗೂಡಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ನಡೆದ ಹೈದರಾಬಾದ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಆತಿಥೇಯರು 2–1 ಗೋಲುಗಳಿಂದ ಗೆಲುವು ಸಾಧಿಸಿದರು.

ಗೋಲು ರಹಿತ ಡ್ರಾದತ್ತ ಸಾಗಿದ್ದ ಪಂದ್ಯದ ಇಂಜುರಿ ಅವಧಿ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. 90 ನಿಮಿಷಗಳ ನಂತರ ಒಂದರ ಮೇಲೆ ಒಂದು ಗೋಲು ದಾಖಲಾಗುತ್ತಿದ್ದಂತೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಗೆಲುವಿನ ಗೋಲು ಗಳಿಸಿದ ನಂತರ ಚೆನ್ನೈಯಿನ್ ಎಫ್‌ಸಿ ಆಟಗಾರರು ‍‍ಪರಸ್ಪರ ತಬ್ಬಿಕೊಂಡು ಸಂಭ್ರಮಪಟ್ಟರು. ಸತತ ಸೋಲಿನಿಂದ ನಿರಾಸೆಗೊಂಡು ಕಳೆದ ಪಂದ್ಯದ ನಂತರ ರಾಜೀನಾಮೆಗೆ ಮುಂದಾಗಿದ್ದ ಕೋಚ್ ಜಾನ್ ಗ್ರೆಗರಿ ಅವರ ಸಂತಸಕ್ಕೆ ಪಾರವೇ ಇರಲಿಲ್ಲ.

ಶೆಂಬ್ರಿ ಮೊದಲ ಗೋಲು ಗಳಿಸಿ ಚೆನ್ನೈಯಿನ್‌ಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ಮರು ನಿಮಿಷದಲ್ಲೇ ಕಿಲ್ಗಲಾನ್ ಗಳಿಸಿದ ಗೋಲಿನ ಮೂಲಕ ಹೈದರಾಬಾದ್ ಸಮಬಲ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ ಕ್ಷಣಗಣನೆ ನಡೆಯುತ್ತಿದ್ದಾಗ ವಲ್‌ಸ್ಕಿಸ್ ಚೆಂಡನ್ನು ಗುರಿ ಮುಟ್ಟಿಸಿ ಚೆನ್ನೈಯಿನ್‌ಗೆ ಜಯ ತಂದುಕೊಟ್ಟರು.

ಈ ಗೆಲುವಿನ ಮೂಲಕ ಚೆನ್ನೈಯಿನ್ 5 ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು ಡ್ರಾ, 3 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿತು. ಹೈದರಾಬಾದ್ 5 ಪಂದ್ಯಗಳಲ್ಲಿ 1 ಜಯ, 4 ಸೋಲಿನೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು