ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಕೇಂದ್ರದಿಂದ ಹೊರ ಹೋದ ಚೀನಾ ಜೂನಿಯರ್ ಫುಟ್‌ಬಾಲ್ ತಂಡದ 6 ಆಟಗಾರರ ಅಮಾನತು

Last Updated 7 ಜೂನ್ 2020, 7:19 IST
ಅಕ್ಷರ ಗಾತ್ರ

ಬೀಜಿಂಗ್: ಅನುಮತಿ ಇಲ್ಲದೇ ತರಬೇತಿ ಕೇಂದ್ರದಿಂದ ಹೊರಗೆ ಹೋದ ಜೂನಿಯರ್ ಫುಟ್‌ಬಾಲ್ ತಂಡದ ಆರು ಮಂದಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಹೇರಿದ್ದ ಕರ್ಫ್ಯೂ ಉಲ್ಲಂಘಿಸಿದ ಆರೋಪವೂ ಇವರ ಮೇಲೆ ಇದೆ. ಅಮಾನತು ಆದ ಎಲ್ಲರೂ 19 ವರ್ಷದೊಳಗಿನವರ ರಾಷ್ಟ್ರೀಯ ತಂಡದ ಸದಸ್ಯರಾಗಿದ್ದು ಚೀನಾ ಫುಟ್‌ಬಾಲ್ ಸಂಸ್ಥೆ ಇವರ ಮೇಲೆ ಕ್ರಮಕೈಗೊಂಡಿದೆ. ಈ ಮಾಹಿತಿಯನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದೆ.

35 ಮಂದಿ ಆಟಗಾರರ ತರಬೇತಿ ಶಿಬಿರ ಶಾಂಘೈನಲ್ಲಿ ಮೇ 17ರಂದು ಆರಂಭಗೊಂಡಿತ್ತು. ಇದು ಜೂನ್ ಆರರಂದು ಕೊನೆಗೊಂಡಿತ್ತು.

‘ತಂಡವು ಕೊರೊನಾ ಹಾವಳಿ ನಿಯಂತ್ರಣ ಕಾರ್ಯದಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡಿದೆ. ಇಂಥ ವೇಳೆ ಆಟಗಾರರು ಎಸಗಿದ್ದು ಅಕ್ಷಮ್ಯ ತಪ್ಪು. ಅವರ ಈ ಕೃತ್ಯವು ಇಡೀ ತಂಡದ ಮೇಲೆ ಕಪ್ಪು ಚುಕ್ಕೆ ಬೀಳುವಂತೆ ಮಾಡಿದೆ’ ಎಂದು ಚೀನಾ ಫುಟ್‌ಬಾಲ್ ಸಂಸ್ಥೆ ಹೇಳಿರುವುದಾಗಿ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ತಿಳಿಸಿದೆ.

ಮೊದಲ ಹಂತದಲ್ಲಿ ಈ ಆರು ಆಟಗಾರರು ನವೆಂಬರ್ 30ರ ವರೆಗೆ ತಂಡದ ಎಲ್ಲ ಪಂದ್ಯಗಳಿಂದ ಹೊರಗೆ ಉಳಿಯಬೇಕಾಗಿದೆ. ಅವರು ಪ್ರತಿನಿಧಿಸುವ ಸ್ಥಳೀಯ ಕ್ಲಬ್‌ಗಳಿಂದಲೂ ಶಿಕ್ಷೆಗೆ ಗುರಿಯಾಗಲಿದ್ದಾರೆ. ಚೀನಾದಲ್ಲಿ ಆಟಗಾರರನ್ನು ಪ್ರತಿನಿಧಿಸುವ ಯಾವುದೇ ಅಧಿಕೃತ ಸಂಸ್ಥೆ ಇಲ್ಲ. ಆದ್ದರಿಂದ ಈ ಆಟಗಾರರಿಗೆ ಮೇಲ್ಮನವಿ ಸಲ್ಲಿಸಲು ಸಾಧ್ಯ ಇದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲ.

‘ಆಟಗಾರರಿಗೆ ತಾವು ಎಸಗಿದ್ದು ದೊಡ್ಡ ತಪ್ಪು ಎಂಬುದು ಅರಿವಾಗಿದೆ. ಈ ಘಟನೆಯು ತಂಡಕ್ಕೆ ದೊಡ್ಡ ನಷ್ಟ. ಆಟಗಾರರ ವೈಯಕ್ತಿಕ ವೃತ್ತಿಜೀವನದ ಮೇಲೆಯೂ ಇದು ಕೆಟ್ಟ ಪರಿಣಾಮ ಬೀರಲಿದೆ’ ಎಂದು ಮುಖ್ಯ ಕೊಚ್ ಚೆಂಗ್ ಯಡೋಂಗ್ ಅಭಿಪ್ರಾಯಪಟ್ಟಿರುವುದಾಗಿ ಕ್ಸಿನ್‌ಹುವಾ ವಿವರಿಸಿದೆ.

19 ವರ್ಷದೊಳಗಿನವರ ತಂಡವು ಮುಂದಿನ ಋತುವಿನಲ್ಲಿ ಚೀನಾದ ಮೂರನೇ ಡಿವಿಷನ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಮುಂದಿನ ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಲು ಆ ಟೂರ್ನಿ ನೆರವಾಗಲಿದೆ ಎಂಬುದು ಚೀನಾ ಫುಟ್‌ಬಾಲ್ ಸಂಸ್ಥೆಯ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT