ಬುಧವಾರ, ಜೂನ್ 3, 2020
27 °C
ಸ್ನೇಹಿತನೊಂದಿಗಿನ ಒಡನಾಟದ ನೆನಪಿನಲ್ಲಿ ತೇಲಾಡಿದ ಅರುಮೈನಾಯಗಮ್

ಚುನಿ ಗೋಸ್ವಾಮಿ ಎಂದರೆ ಜೀನಿಯಸ್ ಎಂದರ್ಥ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ಚುನಿ ಗೋಸ್ವಾಮಿ ಹೆಸರಿನ ಇನ್ನೊಂದು ಅರ್ಥವೆಂದರೆ ಜೀನಿಯಸ್‌..‘

ಈಚೆಗೆ ನಿಧನರಾದರ ಫುಟ್‌ಬಾಲ್ ದಿಗ್ಗಜ ಬಂಗಾಳದ ಚುನಿ ಗೋಸ್ವಾಮಿ ಅವರ ಬಗ್ಗೆ ಬೆಂಗಳೂರಿನ ಹಿರಿಯ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಅರುಮೈನಾಯಗಮ್ ಹೇಳುವ ಮಾತಿದು.


ಚುನಿ ಗೋಸ್ವಾಮಿ

1962ರ ಜಕಾರ್ತಾ ಏಷ್ಯನ್ ಕ್ರೀಡೆಗಳಲ್ಲಿ ಫುಟ್‌ಬಾಲ್‌ನಲ್ಲಿ ಚಿನ್ನ ಗೆದ್ದಿದ್ದ ಚುನಿ ಗೋಸ್ವಾಮಿ ನಾಯಕತ್ವದ ಭಾರತ ತಂಡದಲ್ಲಿ ಅರುಮೈ ನಾಯಗಮ್ ಆಡಿದ್ದರು. ಇದಲ್ಲದೇ 1960ರಿಂದಲೂ ಚುನಿ ಅವರೊಂದಿಗೆ ಬಂಗಾಳ ಮತ್ತು ಮೋಹನ್ ಬಾಗನ್ ತಂಡಗಳಲ್ಲಿಯೂ ಆಡಿದ್ದರು. ಸುಮಾರು ಹತ್ತು ವರ್ಷಗಳ ಒಡನಾಟ ಇವರದ್ದಾಗಿತ್ತು. ಆಟದಿಂದ ನಿವೃತ್ತರಾದ ನಂತರವೂ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ತಿಂಗಳು ನಿಧನರಾಗಿದ್ದ ಪಿ.ಕೆ. ಬ್ಯಾನರ್ಜಿ  ಅವರೂ ಆಗ ತಂಡದಲ್ಲಿದ್ದರು.  ಚುನಿ ಅವರೊಡನೆ ಕಳೆದ ಕೆಲವು ಮಹತ್ವದ ಕ್ಷಣಗಳನ್ನು ಅರುಮೈ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ನೀವೆಲ್ಲ ಗೋಲು ಗಳಿಸಿದಿರಿ. ನಾನೂ ಹೊಡೆಯಬೇಕು. ಒಂದು ಒಳ್ಳೆಯ ಪಾಸ್ ಕೊಡಿ ನೋಡೋಣ ಎಂಬ ಅವರ ವಾಕ್ಯ ಈಗಲೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತದೆ. ನಾಯಕನಾಗಿ ತಂಡವನ್ನು ಮುನ್ನಡೆಸುವುದರ ಜೊತೆಗೆ ಆಟದಲ್ಲಿಯೂ ಅವರು ಕಾಲ್ಚಳಕ ತೋರುತ್ತಿದ್ದ ರೀತಿ ಸ್ಪೂರ್ತಿದಾಯಕವಾಗಿತ್ತು. ನಾನು ಮತ್ತು ಬ್ಯಾನರ್ಜಿ ಅವರ ಪಾಸ್ ಕೊಟ್ಟರೆ ಅವರು ಗೋಲು ಹೊಡೆದು ಮುಗಿಸುತ್ತಿದ್ದ ರೀತಿ ಆಕರ್ಷಕವಾಗಿತ್ತು. ಮಿಂಚಿನ ಸಂಚಲನ ಅವರದ್ದು.

‘ನಾವು 1962ರಲ್ಲಿ ಏಷ್ಯನ್ ಗೇಮ್ಸ್‌ಗೆ ಹೋಗುವ ಸಾಧ್ಯತೆಗಳು ಕಡಿಮೆ ಇದ್ದವು. ಸರ್ಕಾರದ ಮಟ್ಟದಲ್ಲಿ ಆಗಿದ್ದ ಕೆಲವು ಆಡಳಿತಾತ್ಮಕ ತೊಂದರೆಗಳಿಂದ ಪ್ರಯಾಣಕ್ಕೆ ಅನುಮತಿ ದೊರೆತಿರಲಿಲ್ಲ. ನಾವು ಜಕಾರ್ತಾಗೆ ಹೋಗುವುದಿಲ್ಲವೆಂದೇ ಅಂದುಕೊಂಡಿದ್ದೆವು. ಆದರೆ ಚುನಿಗೆ ಮಾತ್ರ ಅಚಲ ವಿಶ್ವಾಸವಿತ್ತು. ನೀವೆಲ್ಲ ಪ್ರಯಾಣಕ್ಕೆ ಸಿದ್ಧರಾಗಿ. ನಾವು ಹೋಗಿಯೇ ಹೋಗುತ್ತೇವೆ ಅಂದಿದ್ದರು. ಅವರಂದಂತೆಯೇ ಆಯಿತು. ಆ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಬಂದ ಮೇಲೆ ಭಾರತ ಸರ್ಕಾರದಿಂದ ಮೆಚ್ಚುಗೆ ಲಭಿಸಿತ್ತು’ ಎಂದು ನೆನಪಿಸಿಕೊಂಡರು.


ಅರುಮೈನಾಯಗಮ್

ಚುನಿ ನಾಯಕತ್ವದಲ್ಲಿ ಭಾರತದ ಫುಟ್‌ಬಾಲ್ ಕ್ಷೇತ್ರವು ಸುವರ್ಣ ಯುಗವನ್ನು ಕಂಡಿತ್ತು. ಹಲವಾರು ಸಾಧನೆಗಳನ್ನೂ ಮಾಡಿತ್ತು.

‘ಮೋಹನ್ ಬಾಗನ್ ತಂಡದಲ್ಲಿ ಚುನಿ ಜೊತೆಗೆ ಎಂಟು ವರ್ಷಗಳ ಕಾಲ ಆಡಿದೆ. ಮೂರು ಬಾರಿ ಡುರಾಂಡ್ ಕಪ್ ಗೆದ್ದ ಸಾಧನೆಯಲ್ಲಿ ಅವರ ಪಾತ್ರ ದೊಡ್ಡದು. ರೋವರ್ಸ್ ಕಪ್ ಗೆಲುವಿನಲ್ಲಿಯೂ ಚುನಿ ಮತ್ತು ಬ್ಯಾನರ್ಜಿ ಅವರ ಶ್ರಮ ದೊಡ್ಡದು. ಕೆಲವೇ ದಿನಗಳ ಅಂತರದಲ್ಲಿ ಅವರಿಬ್ಬರನ್ನು ಕಳೆದುಕೊಂಡಿದ್ದೇವೆ. ಚುನಿ ಇಲ್ಲದ ಫುಟ್‌ಬಾಲ್ ಜಗತ್ತು ಖಾಲಿ ಖಾಲಿಯಾಗಿದೆ’ ಎಂದು ಅರುಮೈ ಗದ್ಗದಿತರಾದರು.

ಚುನಿ ಗೋಸ್ವಾಮಿ ಅವರು ಅಪ್ಪಟ ಕ್ರೀಡಾಪ್ರೇಮಿಯಾಗಿದ್ದವು. ಫುಟ್‌ಬಾಲ್‌ ಜೊತೆಗೆ ಕ್ರಿಕೆಟ್‌ನಲ್ಲಿಯೂ ಮಿಂಚಿದವರು. ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು. ಭಾರತದ ಫುಟ್‌ಬಾಲ್‌ಗೆ ಮತ್ತೆ ಒಳ್ಳೆಯ ಕಾಲ ಬರಬಹುದು. ಆದರೆ, ಚುನಿ ಅವರಂತಹ ನಾಯಕ ಸಿಗುವುದು ಕಷ್ಟ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು