ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup: ಜಪಾನ್‌ಗೆ ಅನಿರೀಕ್ಷಿತ ಆಘಾತ

ಫುಲೆರ್‌ ಗೋಲು; ಕೋಸ್ಟರಿಕಾ ಗೆಲುವು
Last Updated 27 ನವೆಂಬರ್ 2022, 13:42 IST
ಅಕ್ಷರ ಗಾತ್ರ

ಅಲ್‌ ರಯ್ಯಾನ್‌, ಕತಾರ್‌ : ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ಹಾದಿಯಲ್ಲಿದ್ದ ಜಪಾನ್‌ ತಂಡಕ್ಕೆ ಕೋಸ್ಟರಿಕಾ ಅನಿರೀಕ್ಷಿತ ಆಘಾತ ನೀಡಿತು.

ಭಾನುವಾರ ನಡೆದ ‘ಇ’ ಪಂದ್ಯದಲ್ಲಿ ಕೀಶರ್‌ ಫುಲೆರ್‌ ಅವರು 81ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಕೋಸ್ಟರಿಕಾ 1–0 ರಲ್ಲಿ ಗೆದ್ದು, ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶದ ಸಾಧ್ಯತೆನ್ನು ಜೀವಂತವಾಗಿರಿಸಿಕೊಂಡಿತು.

ಜಪಾನ್‌ ತನ್ನ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಐತಿಹಾಸಿಕ ಗೆಲುವು ಪಡೆದಿದ್ದರೆ, ಕೋಸ್ಟರಿಕಾ ತಂಡ ಸ್ಪೇನ್‌ ಕೈಯಲ್ಲಿ 0–7 ರಲ್ಲಿ ಸೋತಿತ್ತು. ಆದ್ದರಿಂದ ಈ ಪಂದ್ಯ ಗೆದ್ದು ಜಪಾನ್‌, 16ರ ಘಟ್ಟದಲ್ಲಿ ಸ್ಥಾನ ಖಚಿತಪಡಿಸಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಕೆಚ್ಚೆದೆಯಿಂದ ಹೋರಾಡಿದ ಕೋಸ್ಟರಿಕಾ ಅದಕ್ಕೆ ಅವಕಾಶ ನೀಡಲಿಲ್ಲ.

ಇದೀಗ ಜಪಾನ್‌ ತಂಡದ ನಾಕೌಟ್‌ ಪ್ರವೇಶದ ಸಾಧ್ಯತೆಯು ಸ್ಪೇನ್‌ ವಿರುದ್ಧ ನಡೆಯುವ ಕೊನೆಯ ಲೀಗ್‌ ಪಂದ್ಯದ ಮೇಲೆ ಅವಲಂಬಿತವಾಗಿದೆ. ಜಪಾನ್‌ ತಂಡ ಸೋತದ್ದು, ನಾಲ್ಕು ಬಾರಿಯ ಚಾಂಪಿಯನ್‌ ಜರ್ಮನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶದ ಆಸೆಗೆ ಜೀವ ನೀಡಿದೆ.

ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಹೆಚ್ಚಿನ ಅವಧಿಯಲ್ಲೂ ಜಪಾನ್‌ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರು. ಆದರೆ ಕೋಸ್ಟರಿಕಾ ತನಗೆ ದೊರೆತ ಅತ್ಯುತ್ತಮ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಗೆಲುವಿನ ನಗು ಬೀರಿತು.

ಆರಂಭದ ಕೆಲವು ನಿಮಿಷಗಳಲ್ಲಿ ಜಪಾನ್‌, ಗೋಲು ಗಳಿಸಲು ಮೇಲಿಂದ ಮೇಲೆ ಪ್ರಯತ್ನ ನಡೆಸಿದ್ದನ್ನು ಬಿಟ್ಟರೆ, ಪ್ರಥಮಾರ್ಧದಲ್ಲಿ ಉಭಯ ತಂಡಗಳು ನಿಧಾನಗತಿಯ ಆಟದ ಮೊರೆಹೋದವು.

ಜಪಾನ್‌ ಕೋಚ್‌ ಹಜಿಮೆ ಮೊರಿಯಸು, ಆಕ್ರಮಣದ ವೇಗ ಹೆಚ್ಚಿಸಲು ಎರಡನೇ ಅವಧಿಯ ಆರಂಭದಲ್ಲೇ ಡಿಫೆಂಡರ್‌ ಯುಟೊ ನಗಟೊಮೊ ಅವರ ಬದಲು ಸ್ಟ್ರೈಕರ್‌ ಟಕುಮ ಅಸಾನೊ ಅವರನ್ನು ಕಣಕ್ಕಿಳಿಸಿದರು.

ದ್ವಿತೀಯಾರ್ಧದ ಬಹುತೇಕ ಸಮಯವೂ ಚೆಂಡು ಕೋಸ್ಟರಿಕಾ ಗೋಲು ಪೆಟ್ಟಿಗೆಯ ಬಳಿಯಲ್ಲೇ ಇತ್ತು. ಆದರೆ ಗೋಲ್‌ಕೀಪರ್‌ ಮತ್ತು ಡಿಫೆಂಡರ್‌ಗಳ ಉತ್ತಮ ಆಟದಿಂದ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡಲಿಲ್ಲ. ಹಿದೆಮಸ ಮೊರಿಟಾ ಅವರ ಉತ್ತಮ ಪ್ರಯತ್ನವನ್ನು ಗೋಲ್‌ಕೀಪರ್‌ ಕೀಲರ್‌ ನವಾಸ್‌ ತಡೆದರು.

ಜಪಾನ್‌ ತಂಡದ ಆಕ್ರಮಣಕಾರಿ ಆಟ ನೋಡುವಾಗ ಯಾವುದೇ ಕ್ಷಣದಲ್ಲಾದರೂ ಮುನ್ನಡೆ ಸಾಧಿಸುವರು ಎಂದೇ ಭಾವಿಸಲಾಗಿತ್ತು. ಆದರೆ ಫುಲೆರ್‌ ಗಳಿಸಿದ ಗೋಲು ಕೋಸ್ಟರಿಕಾ ತಂಡಕ್ಕೆ ಮೂರು ಪಾಯಿಂಟ್ಸ್ ತಂದುಕೊಟ್ಟಿತು. ಅವರು ಒದ್ದ ಚೆಂಡನ್ನು ಜಪಾನ್‌ ಗೋಲ್‌ಕೀಪರ್‌ ಶುಯಿಚಿ ಗೊಂಡಾ ಹೊರಕ್ಕೆ ಅಟ್ಟಲು ಪ್ರಯತ್ನಿಸಿದರೂ, ಕೈ ಬೆರಳುಗಳನ್ನು ಸವರಿಕೊಂಡು ಗೋಲುಪೆಟ್ಟಿಗೆ ಸೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT