ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Copa America| ತಂಡದಿಂದ ಹೊರಬೀಳಬೇಕಿದ್ದ ಆಟಗಾರನಿಂದಲೇ ಅರ್ಜೆಂಟೀನಾಗೆ ಪ್ರಶಸ್ತಿ

ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ಲಯೊನೆಲ್ ಮೆಸ್ಸಿ ಬಳಗಕ್ಕೆ ಮಣಿದ ಬ್ರೆಜಿಲ್‌ಗೆ ನಿರಾಸೆ
Last Updated 11 ಜುಲೈ 2021, 12:07 IST
ಅಕ್ಷರ ಗಾತ್ರ

ಬ್ಯೂನಸ್ ಏರ್ಸ್‌/ರಿಯೊ ಡಿ ಜನೈರೊ: ತಂಡದಿಂದ ಕೈಬಿಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದ ಅಂಗೆಲ್ ಡಿ ಮರಿಯಾ ಅವರು ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಪ್ರಶಸ್ತಿ ಗೆದ್ದುಕೊಟ್ಟರು.

ಶನಿವಾರ ರಾತ್ರಿ (ಭಾರತೀಯ ಕಾಲಮಾನ ಭಾನುವಾರ ಮುಂಜಾನೆ) ನಡೆದ ಫೈನಲ್‌ನಲ್ಲಿ ಅಂಗೆಲ್ ಗಳಿಸಿದ ಏಕೈಕ ಗೋಲು ಬ್ರೆಜಿಲ್ ವಿರುದ್ಧ ಅರ್ಜೆಂಟೀನಾಗೆ 1–0 ಅಂತರದ ಗೆಲುವು ತಂದುಕೊಟ್ಟಿತು. ಈ ಮೂಲಕ 28 ವರ್ಷಗಳ ನಂತರ ತಂಡ ಪ್ರಮುಖ ಟೂರ್ನಿಯೊಂದರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ನಾಯಕ ಲಯೊನೆಲ್ ಮೆಸ್ಸಿ ಅವರಿಗೆ ಪ್ರಮುಖ ಟೂರ್ನಿಯಲ್ಲಿ ಇದು ಮೊದಲ ಪ್ರಶಸ್ತಿಯಾಗಿದೆ.

ಫೈನಲ್‌ನಲ್ಲಿ ಆಡಲು ಸಾಧ್ಯವಾಗದೇ ಇರುವುದು ಮತ್ತು ಆಡಿದರೂ ಯಶಸ್ಸು ಕಾಣದೇ ಇರುವುದರಿಂದ ನೊಂದಿದ್ದ ಅಂಗೆಲ್ ಮನೋವಿಜ್ಞಾನಿಯನ್ನು ಭೇಟಿಯಾಗಿ ಖಿನ್ನತೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದರಂತೆ. ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಅವರನ್ನು ಕಣಕ್ಕೆ ಇಳಿಸಬಾರದು ಎಂದು ತಂಡದ ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ 33 ವರ್ಷದ ಸ್ಟ್ರೈಕರ್ 22ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ತಂದುಕೊಟ್ಟರು. ಇದನ್ನು ಕೊನೆಯ ವರೆಗೂ ಉಳಿಸಿಕೊಂಡ ತಂಡದ ಆಟಗಾರರು ಕಪ್ ಎತ್ತಿ ಹಿಡಿದು ಕುಣಿದಾಡಿದರು.

2014ರ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೇಂಟೀನಾ ಪರ ಆಡಿದ್ದ ಅಂಗೆಲ್‌, ಸ್ಟ್ರೈಕರ್ ಸರ್ಜಿಯೊ ಅಗೆರೊ ಮತ್ತು ನಾಯಕ ಲಯೊನೆಲ್ ಮೆಸ್ಸಿ ಮಾತ್ರ ಈಗ ತಂಡದಲ್ಲಿ ಉಳಿದಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ತಂಡ ಸೋತಿತ್ತು. 2015 ಮತ್ತು 2016ರ ಕೋಪಾ ಅಮೆರಿಕ ಟೂರ್ನಿಯಲ್ಲೂ ಈ ಮೂವರು ಆಡಿದ್ದರು.

ಈ ನಡುವೆ ಅಂಗೆಲೊ ಗಾಯದಿಂದಾಗಿ ಆಗಾಗ ಸಂಕಷ್ಟಕ್ಕೆ ಒಳಗಾಗಿದ್ದರು. 2014ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಲು ಅವರಿಗೆ ಸಾಧ್ಯವಾಗಲಿಲ್ಲ. ಮುಂದಿನ ವರ್ಷದ ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲೂ ಗಾಯದ ಸಮಸ್ಯೆ ಕಾಡಿತ್ತು. 2016ರ ಟೂರ್ನಿಯಲ್ಲಿ ಚಿಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವುದಕ್ಕೂ ಸಾಧ್ಯವಾಗಲಿಲ್ಲ.

ಆದರೆ ಮರಕಾನ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು ಮ್ಯಾಜಿಕ್ ಮಾಡಿದರು. ರೊಡ್ರಿಗೊ ಡಿ ಪಾಲ್ ದೂರದಿಂದ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿ ಅಂಗೆಲೊ ಮುನ್ನುಗ್ಗಿದಾಗ ಎದುರಾಳಿ ತಂಡದ ಡಿಫೆಂಡರ್‌ಗಳು ಇರಲಿಲ್ಲ. ಗೋಲ್‌ಕೀಪರ್ ತಮ್ಮತ್ತ ಧಾವಿಸಿ ಬರುವುದನ್ನು ಗಮನಿಸಿದ ಅಂಗೆಲೊ ದೂರದಿಂದಲೇ ಚೆಂಡನ್ನು ತುದಿಗಾಲಲ್ಲಿ ಎತ್ತಿ ಗೋಲ್‌ಕೀಪರ್ ತಲೆ ಮೇಲಿಂದ ಗೋಲುಪೆಟ್ಟಿಗೆಯ ಒಳಗೆ ಹಾಕಿದರು.

ಮೆಸ್ಸಿ, ಲೂಯಿಸ್‌ಗೆ ಹೆಚ್ಚು ಗೋಲು

ಲಯೊನೆಲ್ ಮೆಸ್ಸಿ ಮತ್ತು ಕೊಲಂಬಿಯಾದ ಲೂಯಿಸ್ ಡಯಾಸ್ ಅವರು ಕೋಪಾ ಅಮೆರಿಕದಲ್ಲಿ ಈ ಬಾರಿ ಗರಿಷ್ಠ ಗೋಲು ಗಳಿಸಿದ ಶ್ರೇಯಸ್ಸು ತಮ್ಮದಾಗಿಸಿಕೊಂಡರು. ಇಬ್ಬರೂ ತಲಾ ನಾಲ್ಕು ಗೋಲು ಗಳಿಸಿದ್ದಾರೆ. ಮೆಸ್ಸಿ ಫೈನಲ್‌ನಲ್ಲಿ ಗೋಲು ಗಳಿಸಲಿಲ್ಲ. ಮೂರನೇ ಸ್ಥಾನಕ್ಕಾಗಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಡಯಾಸ್ ಎರಡು ಗೋಲು ಗಳಿಸಿದ್ದರು. ತಂಡ 3–2ರಲ್ಲಿ ಪೆರು ವಿರುದ್ಧ ಜಯ ಗಳಿಸಿತ್ತು.

ತಂಡದ ಮೊದಲ ಪಂದ್ಯದಲ್ಲಿ ಚಿಲಿ ವಿರುದ್ಧ ಮೆಸ್ಸಿ ಫ್ರೀ ಕಿಕ್ ಮೂಲಕ ಒಂದು ಗೋಲು ಗಳಿಸಿದ್ದರು. ಆ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು. ಬೊಲಿವಿಯಾ ಎದುರಿನ 4–1 ಗೆಲುವಿನಲ್ಲಿ ಮೆಸ್ಸಿ ಎರಡು ಬಾರಿ ಚೆಂಡನ್ನು ಗುರಿಸೇರಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಇಕ್ವಡೊರ್‌ ವಿರುದ್ಧ ಒಂದು ಗೋಲು ಗಳಿಸಿದ್ದರು.

ಗಾಯವಿದ್ದರೂ ಆಡಿದ ಮೆಸ್ಸಿ

ಲಯೊನೆಲ್ ಮೆಸ್ಸಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಫೈನಲ್ ಪಂದ್ಯದಲ್ಲಿ ಆಡಿದ್ದರು ಎಂದು ಕೋಚ್ ಲಯೊನೆಲ್ ಸ್ಕಾಲೊನಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಅವರು ಹೆಚ್ಚು ಅಭಿನಂದನೆಗೆ ಅರ್ಹರು ಎಂದು ಅಭಿಪ್ರಾಯಪಟ್ಟರು.

ಮೆಸ್ಸಿ ಯಾವ ಬಗೆಯ ಗಾಯದಿಂದ ಬಳಲುತ್ತಿದ್ದಾರೆ ಎಂಬುದನ್ನು ಕೋಚ್‌ ವಿವರಿಸಲಿಲ್ಲ. ಆದರೆ ಅವರ ಮೇಲೆ ಅವರು ಅಭಿನಂದನೆಯ ಮಳೆಗರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT