ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಸಾಟಿಯಾಗದ ಸೆನೆಗಲ್

ಹ್ಯಾರಿ ಕೇನ್‌ ಬಳಗಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ಎದುರಾಳಿ
Last Updated 5 ಡಿಸೆಂಬರ್ 2022, 13:04 IST
ಅಕ್ಷರ ಗಾತ್ರ

ಅಲ್‌ಖೊರ್‌, ಕತಾರ್‌: ಸೆನೆಗಲ್‌ ತಂಡದ ಗೋಲ್‌ಪೋಸ್ಟ್‌ ಗುರಿಯಾಗಿಸಿ ದಂಡೆತ್ತಿ ಹೋದ ಇಂಗ್ಲೆಂಡ್‌ ತಂಡದವರು ಭರ್ಜರಿ ಗೆಲುವಿನ ಮೂಲಕ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಭಾನುವಾರ ತಡ ರಾತ್ರಿ ನಡೆದ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ 3–0 ಗೋಲುಗಳಿಂದ ಗೆದ್ದಿತು. ಜೋರ್ಡನ್‌ ಹೆಂಡರ್‌ಸನ್‌, ನಾಯಕ ಹ್ಯಾರಿ ಕೇನ್‌ ಮತ್ತು ಬುಕಾಯೊ ಸಾಕಾ ಅವರು ಗೋಲು ಗಳಿಸಿ ಗೆಲುವಿಗೆ ಕಾರಣರಾದರು.

ಭಾನುವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವನ್ನು ಎದುರಿಸಲಿದ್ದು, ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.

ಇದೇ ಮೊದಲ ಬಾರಿ ಸೆನೆಗಲ್‌ ತಂಡವನ್ನು ಎದುರಿಸಿದ ಇಂಗ್ಲೆಂಡ್‌, ಅಮೋಘ ಆಟವಾಡಿತು. ಆಟದ ಮೇಲೆ ನಿಯಂತ್ರಣ ಸಾಧಿಸಲು ಇಂಗ್ಲೆಂಡ್‌ ಕೆಲವು ನಿಮಿಷಗಳನ್ನು ತೆಗೆದುಕೊಂಡಿತಾದರೂ, ಬಳಿಕ ಪೂರ್ಣ ಪಾರಮ್ಯ ಮೆರೆಯಿತು.

ಸೆನೆಗಲ್‌ ಆರಂಭದಲ್ಲಿ ಗೋಲು ಗಳಿಸುವ ಒಂದೆರಡು ಉತ್ತಮ ಪ್ರಯತ್ನಗಳನ್ನು ನಡೆಸಿದರೂ ಯಶಸ್ಸು ದೊರೆಯಲಿಲ್ಲ. ಬೊಲಾಯೆ ದಿಯಾ ಅವರು ಗುರಿಯತ್ತ ಒದ್ದ ಚೆಂಡನ್ನು ಗೋಲ್‌ಕೀಪರ್‌ ಜೋರ್ಡನ್‌ ಪಿಕ್‌ಫೋರ್ಡ್‌ ಸೊಗಸಾಗಿ ತಡೆದರು.

ಸತತ ಪ್ರಯತ್ನದ ಬಳಿಕ ಇಂಗ್ಲೆಂಡ್‌ 38ನೇ ನಿಮಿಷದಲ್ಲಿ ಮುನ್ನಡೆ ಗಳಿಸಿತು. ಫಿಲ್‌ ಫಾಡೆನ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಜೂಡ್‌ ಬೆಲಿಂಗ್‌ಹ್ಯಾಂ, ಅದನ್ನು ಜೋರ್ಡನ್‌ ಹೆಂಡರ್‌ಸನ್‌ ಅವರತ್ತ ಕ್ರಾಸ್‌ ಮಾಡಿದರು. ಗೋಲ್‌ಪೋಸ್ಟ್‌ ಬಳಿಯಲ್ಲೇ ಇದ್ದ ಜೋರ್ಡನ್‌ ಗುರಿ ಸೇರಿಸಿದರು.

ಮೊದಲಾರ್ಧದ ಇಂಜುರಿ ಅವಧಿಯಲ್ಲಿ ಹ್ಯಾರಿ ಕೇನ್‌ ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಟೂರ್ನಿಯಲ್ಲಿ ಅವರು ಗಳಿಸಿದ ಮೊದಲ ಗೋಲು ಇದು. ಇಂಗ್ಲೆಂಡ್‌ ಪರ ಅತ್ಯಧಿಕ ಗೋಲು ಗಳಿಸಿರುವ ವೇಯ್ನ್‌ ರೂನಿ (53 ಗೋಲು) ದಾಖಲೆಯನ್ನು ಸರಿಗಟ್ಟಲು ಕೇನ್‌ ಅವರಿಗೆ ಇನ್ನೊಂದು ಗೋಲು ಬೇಕು.

ಎರಡು ಗೋಲುಗಳ ಮುನ್ನಡೆ ಸಾಧಿಸಿದ ಇಂಗ್ಲೆಂಡ್‌ ಎರಡನೇ ಅವಧಿಯಲ್ಲಿ ಆತ್ಮವಿಶ್ವಾಸದೊಂದಿಗೆ ಆಡಿತು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೂ, ಆಗಿಂದಾಗ್ಗೆ ಗೋಲು ಗಳಿಸುವ ಪ್ರಯತ್ನವನ್ನೂ ನಡೆಸಿತು. 57ನೇ ನಿಮಿಷದಲ್ಲಿ ಬುಕಾಯೊ ಅವರು ಗೋಲು ಗಳಿಸಿ, ಸೆನೆಗಲ್‌ ತಂಡದ ಮರುಹೋರಾಟದ ಎಲ್ಲ ಸಾಧ್ಯತೆಗಳನ್ನೂ ದೂರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT