ಭಾನುವಾರ, ಜುಲೈ 3, 2022
27 °C
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ನಾರ್ತ್ ಈಸ್ಟ್ ವಿರುದ್ಧ ಹಣಾಹಣಿ

ಎರಡನೇ ಲೆಗ್‌ನಲ್ಲಿ ಪುಟಿದೇಳುವುದೇ ಬಿಎಫ್‌ಸಿ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ನೀರಸ ಆಟವಾಡಿ ನಿರಾಸೆಗೆ ಒಳಗಾಗಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಲೆಗ್‌ನ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ತಿಲಕ್ ಮೈದಾನ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿಗೆ ನಾರ್ತ್ ಈಸ್ಟ್ ಯುನೈಟೆಡ್ ಎದುರಾಳಿ. 

ಎರಡೂ ತಂಡಗಳು ಈ ಬಾರಿ ಉತ್ತಮ ಆರಂಭ ಕಂಡಿದ್ದವು. ಹೀಗಾಗಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನೂ ಗಳಿಸಿದ್ದವು. ಆದರೆ ನಂತರ ದಿಢೀರ್ ಪತನ ಕಂಡಿದ್ದವು. ಈಗ ಎರಡೂ ತಂಡಗಳು ಸಮಾನ ದುಃಖಿಗಳು. ಬಿಎಫ್‌ಸಿಯ ನೀರಸ ಪ್ರದರ್ಶನದಿಂದಾಗಿ ಕೋಚ್ ಕಾರ್ಲಸ್ ಕ್ವದ್ರತ್ ಅವರು ತಂಡ ತೊರೆಯುವಂತಾಗಿದೆ. ಹಂಗಾಮಿ ಕೋಚ್ ನೌಶಾದ್ ಮೂಸಾ ಅವರ ಮಾರ್ಗದರ್ಶನದಲ್ಲೂ ತಂಡಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್ ಎದುರಿನ ಪಂದ್ಯದಲ್ಲಿ ಕೂಡ ಬಿಎಫ್‌ಸಿ ಮುಗ್ಗರಿಸಿತ್ತು. 

ಈ ಎರಡೂ ತಂಡಗಳು ಏಳನೇ ಆವೃತ್ತಿಯಲ್ಲಿ ಗಳಿಸಿದ ಗೋಲುಗಳಿಗಿಂತ ಹೆಚ್ಚು ಗೋಲುಗಳನ್ನು ಬಿಟ್ಟುಕೊಟ್ಟಿವೆ. ಬೆಂಗಳೂರು ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದರೆ, ನಾರ್ತ್ ಈಸ್ಟ್ ಯುನೈಟೆಡ್ ಆರು ಪಂದ್ಯಗಳಲ್ಲಿ ಜಯ ಕಾಣಲಿಲ್ಲ. ಈ ಪೈಕಿ ಮೂರು ಪಂದ್ಯಗಳನ್ನು ಅದು ಸೋತಿದೆ.

ಮೊದಲ ಲೆಗ್‌ನಲ್ಲಿ ಮುಖಾಮುಖಿಯಾದಾಗ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ನಾರ್ತ್ ಈಸ್ಟ್ 2–2ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮಂಗಳವಾರ ಕೋಚ್ ಜೆರಾರ್ಡ್ ನೂಸ್ ಅವರ ಅನುಪಸ್ಥಿತಿಯಲ್ಲಿ ನಾರ್ತ್ ಈಸ್ಟ್ ಕಣಕ್ಕೆ ಇಳಿಯಲಿದೆ. ಅಮಾನತಿನಲ್ಲಿರುವ ನೂಸ್ ಬದಲಿಗೆ ಸಹಾಯಕ ಕೋಚ್ ಅಲಿಸನ್ ಕರ್ಸಂಟೀವ್ ಅವರು ಈ ಪಂದ್ಯದಲ್ಲಿ ತಂಡದೊಂದಿಗೆ ಇರುತ್ತಾರೆ.

ಈಸ್ಟ್ ಬೆಂಗಾಲ್ ಎದುರಿನ ಪಂದ್ಯದಲ್ಲಿ 0–1ರ ಸೋಲು ಕಂಡಿರುವ ತಂಡ ಈ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಆಟಗಾರರು ಪೂರ್ಣಸಾಮರ್ಥ್ಯದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ. 

‘ನಾರ್ತ್ ಈಸ್ಟ್ ತಂಡದ ಆಟವನ್ನು ಆರಂಭದಿಂದಲೇ ಗಮನಿಸುತ್ತಿದ್ದೇನೆ. ಹಿನ್ನಡೆಯಲ್ಲಿದ್ದರೂ ಚೇತರಿಸಿಕೊಳ್ಳುವ ಗುಣ ಆ ತಂಡಕ್ಕೆ ಇದೆ. ಆದರೆ ಇದಕ್ಕೆ ನಮ್ಮ ತಂಡ ಆತಂಕಗೊಂಡಿಲ್ಲ. ತಂಡದ ಆಟಗಾರರಿಗೆ ಅವರ ಜವಾಬ್ದಾರಿಯ ಅರಿವಿದೆ. ಹೀಗಾಗಿ ಈ ಪಂದ್ಯದಲ್ಲಿ ಉತ್ತಮ ಹೋರಾಟ ಪ್ರದರ್ಶಿಸುವ ಭರವಸೆ ಇದೆ’ ಎಂದು ಮೂಸಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು