ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ವಿಶ್ವಕಪ್ ಫುಟ್‌ಬಾಲ್: ಸೆಮಿಫೈನಲ್‌ನಲ್ಲಿ ಸ್ವೀಡನ್‌ಗೆ ಸ್ಪೇನ್ ಸವಾಲು

ಇಂದು
Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಆಕ್ಲೆಂಡ್‌: ಮಹಿಳೆಯರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಂಗಳವಾರ, ಸ್ಪೇನ್‌ ಮತ್ತು ಸ್ವೀಡನ್‌ ತಂಡಗಳು ಹಣಾಹಣಿ ನಡೆಸಲಿವೆ.

ಇದೇ ಮೊದಲ ಬಾರಿ ನಾಲ್ಕರಘಟ್ಟದಲ್ಲಿ ಆಡುತ್ತಿರುವ ಸ್ಪೇನ್‌, ಬಲಿಷ್ಠ ಎದುರಾಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಸ್ವೀಡನ್‌ ತಂಡ ವಿಶ್ವಕಪ್‌ ಟ್ರೋಫಿ ಜಯಿಸದಿದ್ದರೂ, ಸೆಮಿಫೈನಲ್‌ನಲ್ಲಿ ಆಡಿದ ಅನುಭವ ಹೊಂದಿದೆ. ಆದರೆ ಸ್ಪೇನ್‌ ತಂಡಕ್ಕೆ ಇದು ಚೊಚ್ಚಲ ಸೆಮಿ ಪಂದ್ಯ ಎನಿಸಿದೆ.

ಮಹತ್ವದ ಪಂದ್ಯಕ್ಕೆ ಮುನ್ನ ತಂಡದ ಆಟಗಾರ್ತಿಯರು ‘ನರ್ವಸ್‌’ ಆಗಿದ್ದಾರೆ ಎಂಬುದನ್ನು ಸ್ಪೇನ್‌ನ ಫಾರ್ವರ್ಡ್‌ ಆಟಗಾರ್ತಿ ಜೆನಿಫರ್‌ ಹೆರ್ಮೊಸೊ ಒಪ್ಪಿಕೊಂಡಿದ್ಧಾರೆ.

‘ಇಂತಹ ಪಂದ್ಯಕ್ಕೆ ಮುನ್ನ ನೀವು ನರ್ವಸ್ ಆಗದೇ ಇರಲು ಸಾಧ್ಯವಿಲ್ಲ’ ಎಂದು 33 ವರ್ಷದ ಹೆರ್ಮೊಸೊ ಪಂದ್ಯದ ಮುನ್ನಾ ದಿನವಾದ ಸೋಮವಾರ ತಿಳಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇವೆರಡು ತಂಡಗಳ ಮಧ್ಯೆ ನಡೆದಿದ್ದ ‘ಸ್ನೇಹಪರ’ ಪಂದ್ಯ 1–1 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತ್ತು.

ಈ ಹಿಂದೆ ಪ್ರಮುಖ ಟೂರ್ನಿಗಳಲ್ಲಿ ಆಡಿರುವ ಅನುಭವವು ನೆರವಿಗೆ ಬರಲಿದೆ ಎಂದು ಸ್ವೀಡನ್‌ ತಂಡದ ನಾಯಕಿ ಕೊಸೊವಾರೆ ಅಸ್ಲಾನಿ ಹೇಳಿದ್ದಾರೆ.

‘ಅನುಭವವು ನಮಗೆ ನೆರವಾಗಲಿದೆ. ಈ ಮುನ್ನ ಹಲವು ಸಲ ನಾಕೌಟ್‌ ಹಂತದಲ್ಲಿ ಆಡಿದ್ದೇವೆ. ಮಾತ್ರವಲ್ಲ, ಈ ಟೂರ್ನಿಯಲ್ಲೂ ಇದುವರೆಗೆ ನಮ್ಮಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ’ ಎಂದಿದ್ದಾರೆ.

ಸ್ವೀಡನ್‌ ತಂಡ 2019ರ ವಿಶ್ವಕಪ್‌ ಮತ್ತು ಕಳೆದ ವರ್ಷ ನಡೆದಿದ್ದ ಯೂರೋಪಿಯನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಆಡಿತ್ತು. ಟೋಕಿಯೊ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಕೆನಡಾ ಎದುರು ಸೋತು ಬೆಳ್ಳಿ ಜಯಿಸಿತ್ತು.

ಕಳೆದ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ಮೂರನೇ ಬಾರಿ ಸೆಮಿ ಆಡುತ್ತಿರುವ ಸ್ವೀಡನ್‌, ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಲೀಗ್‌ ಹಂತದ ಎಲ್ಲ ಮೂರು ಪಂದ್ಯಗಳನ್ನು ಜಯಿಸಿದ್ದ ಅಸ್ಲಾನಿ ಬಳಗ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್‌ ಅಮೆರಿಕ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಹೊರದಬ್ಬಿತ್ತು. ಕ್ವಾರ್ಟರ್‌ನಲ್ಲಿ 2–1ರಿಂದ ಜಪಾನ್‌ ವಿರುದ್ಧ ಗೆದ್ದಿತ್ತು.

ಇಂದಿನ ಪಂದ್ಯ: ಸ್ಪೇನ್‌–ಸ್ವೀಡನ್ (ಆರಂಭ: ಮಧ್ಯಾಹ್ನ 1.30)

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT