ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

FIFA World Cup 2022 | ಉದ್ಘಾಟನಾ ಸಮಾರಂಭ; ತಾರಾ ಮೆರುಗು

20ರಂದು ದೋಹಾದ ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ಹಬ್ಬಕ್ಕೆ ಚಾಲನೆ
Published : 16 ನವೆಂಬರ್ 2022, 21:16 IST
ಫಾಲೋ ಮಾಡಿ
Comments

ದೋಹಾ: ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಸ್ಮರಣೀಯವನ್ನಾಗಿಸಲು ಸಂಘಟಕರು ಎಲ್ಲ ಸಿದ್ಧತೆ ಮಾಡಿದ್ದಾರೆ.

ನ.20ರಂದು ದೋಹಾದ ಅಲ್ ಬೈತ್‌ ಕ್ರೀಡಾಂಗಣದಲ್ಲಿ ಟೂರ್ನಿಗೆ ವರ್ಣರಂಜಿತ ಚಾಲನೆ ಲಭಿಸಲಿದೆ. ಕತಾರ್‌ನ ಸಂಸ್ಕೃತಿ ಯನ್ನು ಬಿಂಬಿಸುವುದೂ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋ ಜನೆಯಾಗಿವೆ.

ಸಮಾರಂಭದಲ್ಲಿ ಪ್ರದರ್ಶನ ನೀಡಲಿರುವ ಕಲಾವಿದರ ಪಟ್ಟಿಯನ್ನು ಫಿಫಾ ಇನ್ನೂ ಬಿಡುಗಡೆ ಮಾಡಿಲ್ಲ. ವಿವಿಧ ದೇಶಗಳ ಖ್ಯಾತ ಕಲಾವಿದರು ಕಾರ್ಯಕ್ರಮದ ಕಳೆ ಹೆಚ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕೊರಿಯಾದ ಬಿಟಿಎಸ್‌ ಸಂಗೀತ ತಂಡದ ಪ್ರದರ್ಶನ ಪ್ರಧಾನ ಆಕರ್ಷಣೆ ಎನಿಸಲಿದೆ. ‍‍ಪಾಪ್‌ ತಾರೆ ಕೊಲಂಬಿಯದ ಶಕೀರಾ ಅವರ ಪ್ರದರ್ಶನವೂ ಇರಲಿದೆ ಎಂದು ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ. ಆದರೆ ಶಕೀರಾ ಪಾಲ್ಗೊಳ್ಳುವುದಿಲ್ಲ ಎಂಬ ವರದಿಗಳೂ ಇವೆ.

ಅಲ್‌ ಬೈತ್‌ ಕ್ರೀಡಾಂಗಣ ದೋಹಾದ ಕೇಂದ್ರ ಭಾಗದಿಂದ ಉತ್ತರಕ್ಕೆ 40 ಕಿ.ಮೀ. ದೂರದಲ್ಲಿದ್ದು, 60 ಸಾವಿರ ಆಸನ ವ್ಯವಸ್ಥೆ ಹೊಂದಿದೆ. ಉದ್ಘಾಟನಾ ಸಮಾರಂಭ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಶುರು ವಾಗಲಿದೆ. ಅದೇ ದಿನ ರಾತ್ರಿ 9.30ಕ್ಕೆ ಆತಿಥೇಯ ಕತಾರ್‌ ಮತ್ತು ಈಕ್ವೆಡಾರ್‌ ಮಧ್ಯೆ ಮೊದಲ ಪಂದ್ಯ ನಡೆಯಲಿದೆ.

ಫ್ರಾನ್ಸ್‌ಗೆ ಕಿರೀಟ– ಬೆಂಜೆಮಾ ವಿಶ್ವಾಸ (ಪ್ಯಾರಿಸ್‌ ವರದಿ): ಹಾಲಿ ಚಾಂ‍ಪಿಯನ್‌ ಫ್ರಾನ್ಸ್‌, ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ತಂಡದ ಪ್ರಮುಖ ಆಟಗಾರ ಕರೀಂ ಬೆಂಜೆಮಾ ವ್ಯಕ್ತಪಡಿಸಿದ್ದಾರೆ.

ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಪ್ರತಿಷ್ಠಿತ ‘ಬ್ಯಾಲನ್‌ ಡಿಓರ್‌’ ಪ್ರಶಸ್ತಿಯನ್ನು ಈಚೆಗೆ ಗೆದ್ದಿರುವ ಬೆಂಜೆಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ಧಾರೆ. ಅವರು ಈ ಟೂರ್ನಿಯಲ್ಲಿ ಕಿಲಿಯಾನ್‌ ಎಂಬಪೆ ಮತ್ತು ಆಂಟೋನ್‌ ಗ್ರೀಸ್‌ಮಾನ್‌ ಅವರ ಜತೆ ಫ್ರಾನ್ಸ್‌ ತಂಡದ ಫಾರ್ವರ್ಡ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಅಭಿಮಾನಿಗಳಿಗೆ ಸಂಘಟಕರ ಬೆಂಬಲ
ದೋಹಾ: ವಿಶ್ವಕಪ್‌ ಟೂರ್ನಿಗೆ ಪ್ರಚಾರ ನೀಡುವ ಉದ್ಧೇಶದಿಂದ ದೋಹಾದಲ್ಲಿ ಮೆರವಣಿಗೆ ನಡೆಸಿದ ಫುಟ್‌ಬಾಲ್‌ ಅಭಿಮಾನಿಗಳ ಬೆಂಬಲಕ್ಕೆ ಸಂಘಟಕರು ನಿಂತಿದ್ದಾರೆ.

ಭಾರತ ಒಳಗೊಂಡಂತೆ ದಕ್ಷಿಣ ಏಷ್ಯಾದ ದೇಶಗಳ ನೂರಾರು ಫುಟ್‌ಬಾಲ್‌ ಪ್ರೇಮಿಗಳು ಅರ್ಜೆಂಟೀನಾ, ಬ್ರೆಜಿಲ್‌ ಮತ್ತು ಇಂಗ್ಲೆಂಡ್‌ ತಂಡಗಳ ಜೆರ್ಸಿಯನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೆಲವರು ಇವರನ್ನು ‘ನಕಲಿ ಅಭಿಮಾನಿಗಳು’ ಎಂದು ಲೇವಡಿ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.

ಆದರೆ ಅಭಿಮಾನಿಗಳ ಬೆಂಬಲಕ್ಕೆ ನಿಂತಿರುವ ಸಂಘಟಕರು, ‘ಇಂತಹ ಆರೋಪಗಳನ್ನು ನಾವು ತಳ್ಳಿಹಾಕುತ್ತೇವೆ. ಭಿನ್ನ ಸಂಸ್ಕೃತಿ ಮತ್ತು ಹಲವು ದೇಶಗಳಿಂದ ಬಂದಿರುವ ಫುಟ್‌ಬಾಲ್‌ ಪ್ರೇಮಿಗಳು ಇಲ್ಲಿದ್ದಾರೆ. ಅವರು ವಿವಿಧ ತಂಡಗಳನ್ನು ಬೆಂಬಲಿಸುತ್ತಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ಇಂಗ್ಲೆಂಡ್‌ ಆಟಗಾರರು ಮಂಗಳವಾರ ದೋಹಾದ ಹೋಟೆಲ್‌ಗೆ ಬಂದಾಗ ಅವರನ್ನು ಸ್ವಾಗತಿಸಲು ನೆರೆದಿದ್ದವರಲ್ಲಿ ಇಂಗ್ಲೆಂಡ್‌ನ ಪ್ರಜೆಗಳಿಗಿಂತ ಭಾರತದ ಫುಟ್‌ಬಾಲ್‌ ಪ್ರೇಮಿಗಳೇ ಹೆಚ್ಚಿನಸಂಖ್ಯೆಯಲ್ಲಿದ್ದರು.

ಎಸ್‌ಡಿಪಿಐ ಧ್ವಜ ಎಂದು ಪೋರ್ಚುಗಲ್ ಧ್ವಜ ಹರಿದ!
ಕಣ್ಣೂರು: ಫಿಫಾ ವಿಶ್ವಕಪ್‌ ಸಮೀಪಿಸುತ್ತಿರುವಂತೆ ಕೇರಳದಲ್ಲಿ ಫುಟ್‌ಬಾಲ್‌ ಕಾವು ಹೆಚ್ಚಿದೆ. ಈಗಾಗಲೇ ಹಲವು ನಗರಗಳಲ್ಲಿ ಮೆಸ್ಸಿ, ರೊನಾಲ್ಡೊ ಒಳಗೊಂಡಂತೆ ಪ್ರಮುಖ ಆಟಗಾರರ ಬೃಹತ್‌ ಕಟೌಟ್‌ಗಳು ತಲೆ ಎತ್ತಿವೆ. ಬ್ರೆಜಿಲ್‌, ಅರ್ಜೆಂಟೀನಾ, ಪೋರ್ಚುಗಲ್‌ ಸೇರಿದಂತೆ ವಿವಿಧ ದೇಶಗಳ ಧ್ವಜಗಳೂ ಅಲ್ಲಲ್ಲಿ ರಾರಾಜಿಸುತ್ತಿವೆ.

ಕಣ್ಣೂರು ನಗರದ ಪಾನೂರು ಪ್ರದೇಶದ ರಸ್ತೆ ಬದಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳು ಪೋರ್ಚುಗಲ್‌ನ ಧ್ವಜ ಕಟ್ಟಿದ್ದರು. ಆದರೆ ವ್ಯಕ್ತಿಯೊಬ್ಬ ಅದನ್ನು ಹರಿದು ಹಾಕಿದ್ದು, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ‘ಪೋರ್ಚುಗಲ್‌ ಧ್ವಜವನ್ನು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಧ್ವಜ ಎಂದು ಭಾವಿಸಿ ಹರಿದು ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತ ಆ ಕೆಲಸ ಮಾಡಿದ್ದಾನೆ‘ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.

ಧ್ವಜ ಹರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಠಾಣಾ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.

‘ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಅಲ್ಲ. ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಅಮಲೇರಿದ ಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT