ಬುಧವಾರ, ನವೆಂಬರ್ 13, 2019
23 °C
ಇಂಗ್ಲೆಂಡ್‌ ವಿರುದ್ಧದ ಯುಟೊ 2020 ಅರ್ಹತಾ ಪಂದ್ಯದ ವೇಳೆ ಜನಾಂಗೀಯ ನಿಂದನೆ

ಬಲ್ಗೇರಿಯಾದ ಇನ್ನೂ ಐವರು ಫುಟ್‌ಬಾಲ್‌ ಪ್ರಿಯರು ಪೊಲೀಸ್‌ ವಶಕ್ಕೆ

Published:
Updated:

ಸೋಫಿಯಾ (ಎಎಫ್‌ಪಿ): ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಯೂರೊ 2020 ಅರ್ಹತಾ ಪಂದ್ಯದಲ್ಲಿ ಜನಾಂಗೀಯ ನಿಂದನೆಯಲ್ಲಿ ಭಾಗಿಯಾದ ಇನ್ನೂ ಐವರು ಫುಟ್‌ಬಾಲ್‌ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ. ಬಲ್ಗೇರಿಯಾ ಅಭಿಮಾನಿಗಳ ವರ್ತನೆ ವಿವಾದದ ಬಿರುಗಾಳಿಗೆ ಕಾರಣವಾಗಿತ್ತು.

ಇಂಗ್ಲೆಂಡ್‌ ಆ ಪಂದ್ಯದಲ್ಲಿ 6–0 ಗೆಲುವು ಸಾಧಿಸಿತ್ತು. ಪಂದ್ಯದ ವೇಳೆ ಪದೇ ಹೀಯಾಳಿಕೆ, ನಾಜಿ ಸಲ್ಯೂಟ್‌ಗಳಿಂದಾಗಿ ವಿವಾದ ಎದ್ದಿದ್ದು, ಅಂತಿಮವಾಗಿ ಬಲ್ಗೇರಿಯಾ ಫುಟ್‌ಬಾಲ್‌ ಮುಖ್ಯಸ್ಥರು ರಾಜೀನಾಮೆ ನೀಡಬೇಕಾಯಿತು. ಪೊಲೀಸರು ಈ ನಿಂದನೆಯಲ್ಲಿ ಭಾಗಿಯಾಗಿದ್ದ 16 ಮಂದಿಯನ್ನು ಗುರುತಿಸಿದ್ದಾರೆ. ಇನ್ನೂ ಐದು ಮಂದಿಯ ಶೋಧದಲ್ಲಿ ತೊಡಗಿದ್ದಾರೆ.

ಹದಿಹರೆಯದ ಬಾಲಕನೊಬ್ಬ ಸೇರಿದಂತೆ ಐದು ಮಂದಿಗೆ ದಂಡ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಲಾಗಿದೆ. ದಾದಾಗಿರಿ ತೋರಿಸಿದ ಇನ್ನೊಬ್ಬ ಬಾಲಕನಿಗೆ ಶಿಕ್ಷೆ ವಿಧಿಸಲಾಗಿದ್ದು, ಐದು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಬಲ್ಗೇರಿಯಾದ ಪ್ರಧಾನಿ ಬೊಯ್ಕೊ ಬೊರಿಸೊವ್ ಒಳಗೊಂಡಂತೆ ಗಣ್ಯರು  ಘಟನೆಯನ್ನು ಖಂಡಿಸಿದ್ದಾರೆ.

 

ತಂಡದ ನಿರ್ವಹಣೆಯಿಂದ ಟೀಕೆಗೊಳಗಾಗಿರುವ ಬಲ್ಗೇರಿಯಾದ ಕೋಚ್‌ ಕ್ರಾಸಿಮಿರ್‌ ಬಾಲಕೋವ್‌ ಅವರು ಇಂಗ್ಲೆಂಡ್‌ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.

 

 

ಪ್ರತಿಕ್ರಿಯಿಸಿ (+)