ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ‘ಮಾಂತ್ರಿಕ’ನ ಮಾತು...

Last Updated 19 ಏಪ್ರಿಲ್ 2020, 19:34 IST
ಅಕ್ಷರ ಗಾತ್ರ
ADVERTISEMENT
""

ಭಾರತದ ಫುಟ್‌ಬಾಲ್‌ನ ‘ಮಾಂತ್ರಿಕ’, ಕಾಲ್ಚೆಂಡಿನಾಟದ ಚತುರ, ಲಾರ್ಡ್‌ ಆಫ್ ದಿ 90 ಮಿನಟ್ಸ್‌, ಇಂಡಿಯಾಸ್‌ ಮಿಸ್ಟರ್‌ ಫುಟ್‌ಬಾಲ್‌... ಹೀಗೆ ಹಲವು ಬಿರುದುಗಳ ಮೂಲಕ ಫುಟ್‌ಬಾಲ್‌ ಪ್ರೇಮಿಗಳ ಮನದಲ್ಲಿ ಶಾಶ್ವತ ನೆಲೆ ಕಂಡುಕೊಂಡಿರುವ ತಾರೆ ಸುನಿಲ್‌ ಚೆಟ್ರಿ.

ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ (ಇನ್ನೂ ನಿವೃತ್ತಿ ಪ್ರಕಟಿಸದವರು) ಅತೀ ಹೆಚ್ಚು ಗೋಲು ಗಳಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಈ ಹಾದಿಯಲ್ಲಿ ಅರ್ಜೆಂಟೀನಾದ ದಿಗ್ಗಜ ಆಟಗಾರ ಲಯೊನೆಲ್‌ ಮೆಸ್ಸಿ ಅವರನ್ನೇ ಹಿಂದಿಕ್ಕಿರುವ ಅವರು, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (99 ಗೋಲು) ಹೆಸರಿನಲ್ಲಿರುವ ದಾಖಲೆ ಮೀರಿ ನಿಲ್ಲುವತ್ತ ದಾಪುಗಾಲಿಟ್ಟಿದ್ದಾರೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತೀ ಹೆಚ್ಚು ಪಂದ್ಯ ಆಡಿದ ಹಾಗೂ ಅತೀ ಹೆಚ್ಚು ಗೋಲು ಹೊಡೆದ ಭಾರತದ ಏಕೈಕ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2007, 2009 ಹಾಗೂ 2012ರ ನೆಹರೂ ಕಪ್‌ ಟೂರ್ನಿಗಳಲ್ಲಿ ಭಾರತ ಟ್ರೋಫಿ ಜಯಿಸುವಲ್ಲಿ ಚೆಟ್ರಿ ಪಾತ್ರ ನಿರ್ಣಾಯಕವಾಗಿತ್ತು.

2008ರ ಎಎಫ್‌ಸಿ ಚಾಲೆಂಜ್‌ ಕಪ್‌, 2011ರ ಎಎಫ್‌ಸಿ ಏಷ್ಯಾಕಪ್‌ ಹಾಗೂ ಅದೇ ವರ್ಷ ನಡೆದಿದ್ದ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲೂ ಚೆಟ್ರಿ ‘ಮ್ಯಾಜಿಕ್‌’ ಮಾಡಿದ್ದರು.

2013ರಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಸೇರಿದ ಚೆಟ್ರಿ, ಬೆಂಗಳೂರಿನ ತಂಡವು ಐ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡಿದ ವರ್ಷವೇ (2013–14) ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. 2015–16ನೇ ಋತುವಿನಲ್ಲೂ ಬಿಎಫ್‌ಸಿ, ಐ ಲೀಗ್‌ ಚಾಂಪಿಯನ್‌ ಆಗಿತ್ತು. ಫೆಡರೇಷನ್‌ ಕಪ್‌, ಸೂಪರ್‌ ಕಪ್‌ ಹಾಗೂ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಗಳಲ್ಲೂ ಬಿಎಫ್‌ಸಿ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಚೆಟ್ರಿ ಪಾತ್ರ ಮಹತ್ವದ್ದೆನಿಸಿತ್ತು.

ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ‘ಪಾಸ್‌ ದಿ ಮೆಸೆಜ್‌ ಟು ಕಿಕ್‌ ಔಟ್‌ ಕೊರೊನಾ ವೈರಸ್‌’ ಎಂಬ ಅಭಿಯಾನ ಆರಂಭಿಸಿರುವ ಫಿಫಾ, ಇದಕ್ಕಾಗಿ ಲಯೊನೆಲ್ ಮೆಸ್ಸಿ ಸೇರಿದಂತೆ ವಿಶ್ವದ ಪ್ರಮುಖ 28 ಆಟಗಾರರನ್ನು ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಚೆಟ್ರಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಈ ಸಲದ ಐಎಸ್‌ಎಲ್‌ ಟೂರ್ನಿಯಲ್ಲಿ ಬಿಎಫ್‌ಸಿ, ಫೈನಲ್‌ ಪ್ರವೇಶಿಸಲು ವಿಫಲವಾಯಿತು. ಇದಕ್ಕೆ ಕಾರಣಗಳೇನು?

ಹೌದು, ಈ ಋತು ನಮ್ಮ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಹಾಲಿ ಚಾಂಪಿಯನ್‌ ಆಗಿದ್ದ ನಮಗೆ ಪ್ರಶಸ್ತಿ ಸುತ್ತು ತಲುಪಲಾಗಲಿಲ್ಲ. ಇದರಿಂದ ಎಲ್ಲರಿಗೂ ಬೇಸರವಾಗಿದೆ. ತಂಡದ ಯಶಸ್ಸಿಗೆ ಹಲವು ಅಂಶಗಳು ಕಾರಣವಾಗುತ್ತವೆ. ಪ್ರತಿ ಬಾರಿಯೂ ಅದೃಷ್ಟ ನಮ್ಮ ಕೈಹಿಡಿಯುವುದಿಲ್ಲ. ಸೋಲಿನಿಂದ ಪಾಠ ಕಲಿಯುವುದು ಬಹಳ ಅಗತ್ಯ. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುಂದಿನ ಋತುವಿನಲ್ಲಿ ಯಶಸ್ಸಿನ ಗೋಪುರ ಕಟ್ಟುತ್ತೇವೆ.

*ತಂಡವು ನಿಮ್ಮ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಹಿನ್ನಡೆಗೆ ಇದೇ ಪ್ರಮುಖ ಕಾರಣವೇ?

ನನಗೇನೊ ಹಾಗನಿಸುವುದಿಲ್ಲ. ಮುಂಚೂಣಿ ವಿಭಾಗದ (ಸ್ಟ್ರೈಕರ್‌) ಆಟಗಾರನಾಗಿ ಪ್ರತಿ ಪಂದ್ಯದಲ್ಲೂ ಗೋಲು ಗಳಿಸಬೇಕಿರುವುದು ನನ್ನ ಕರ್ತವ್ಯ. ನಾನು ಸಾಧ್ಯವಾದಷ್ಟು ಹೆಚ್ಚು ಗೋಲುಗಳನ್ನು ದಾಖಲಿಸಬೇಕೆಂದು ಎಲ್ಲರೂ ನಿರೀಕ್ಷಿಸುವುದು ಸಹಜ ಕೂಡ. ನನ್ನೊಬ್ಬನಿಂದ ತಂಡಕ್ಕೆ ಯಶಸ್ಸು ತಂದುಕೊಡಲು ಸಾಧ್ಯವಿಲ್ಲ. ಇದಕ್ಕೆ ಇತರ ಆಟಗಾರರ ಸಹಕಾರವೂ ಬೇಕು. ಎಲ್ಲರೂ ಒಟ್ಟಾಗಿ ಹೋರಾಡಬೇಕು.

*ತಂಡವನ್ನು ಮುನ್ನಡೆಸುವುದು ಅತ್ಯಂತ ಸವಾಲಿನ ಕೆಲಸ. ಈ ಜವಾಬ್ದಾರಿಯನ್ನು ನೀವು ಹೇಗೆ ನಿಭಾಯಿಸುತ್ತಿದ್ದೀರಿ?

ನಾಯಕನಾದವನ ಮೇಲೆ ಇತರರಿಗಿಂತಲೂ ಹೆಚ್ಚು ಹೊಣೆ ಇರುತ್ತದೆ. ಈ ಜವಾಬ್ದಾರಿಯನ್ನು ಖುಷಿಯಿಂದ ನಿಭಾಯಿಸುತ್ತಿದ್ದೇನೆ. ಡ್ರೆಸಿಂಗ್‌ ಕೊಠಡಿಯಲ್ಲಿ ಎಲ್ಲರ ಜೊತೆಯೂ ಬೆರೆಯುತ್ತೇನೆ. ಸೋತಾಗ ನನ್ನನ್ನೂ ಒಳಗೊಂಡಂತೆ ಎಲ್ಲರೂ ಹತಾಶರಾಗಿರುತ್ತೇವೆ. ಆ ಸಮಯದಲ್ಲಿ ಸಹ ಆಟಗಾರರು ಎದೆಗುಂದದಂತೆ ನೋಡಿಕೊಂಡು ಅವರನ್ನು ಮತ್ತೊಂದು ಹೋರಾಟಕ್ಕೆ ಅಣಿಗೊಳಿಸಬೇಕು. ಆ ಕೆಲಸ ತುಸು ಕಷ್ಟ.

*ಸೋಲನ್ನು ನೀವು ಹೇಗೆ ಸ್ವೀಕರಿಸುತ್ತೀರಿ?

ಸೋತಾಗ ಬೇಸರ ಹಾಗೂ ಹತಾಶೆಗೆ ಒಳಗಾಗುವುದು ಸಹಜ. ಹಾಗಂತ ಕೈಕಟ್ಟಿ ಕೂರಬಾರದು. ನೋವನ್ನು ಮರೆತು ಫಿನಿಕ್ಸ್‌ನಂತೆ ಪುಟಿದೇಳಬೇಕು. ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಅವುಗಳನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಮುಂದೆ ಸಾಗಬೇಕು.

*ಕೊರೊನಾ ವೈರಾಣುವಿನ ವಿರುದ್ಧ ಇಡೀ ಜಗತ್ತೇ ಸಮರ ಸಾರಿದೆ. ಫಿಫಾ ಮತ್ತು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಈ ಮಹಾಮಾರಿ ಹರಡಂತೆ ತಡೆಯುವ ಸಲುವಾಗಿ ಜಾಗೃತಿ ಅಭಿಯಾನಗಳನ್ನೂ ಕೈಗೊಂಡಿವೆ. ಈ ಕಾರ್ಯಕ್ಕೆ ವಿಶ್ವದ ಇತರ ದಿಗ್ಗಜ ಆಟಗಾರರ ಜೊತೆ ನಿಮ್ಮನ್ನೂ ಆಯ್ಕೆ ಮಾಡಿಕೊಂಡಿವೆ. ಈ ಕುರಿತು ಹೇಳಿ?

ಕೊರೊನಾ ವೈರಾಣುವಿನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಈ ಹೊತ್ತಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯ ವಿರುದ್ಧ ಹೋರಾಡುವುದು ತುಂಬಾ ಅಗತ್ಯ. ಈಗ ನಾವು ಕ್ರೀಡೆಯ ಆಚೆಗೂ ಯೋಚಿಸಬೇಕಿದೆ. ಈ ಸಂದಿಗ್ಧತೆಯಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ನನ್ನಿಂದಾದ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ.

*ಕೊರೊನಾ ಮಹಾಮಾರಿಯಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧಗೊಂಡಿವೆ. ಕ್ರೀಡಾಪಟುಗಳೆಲ್ಲಾ ಮನೆಗಳಲ್ಲೇ ‘ಬಂಧಿ’ಯಾಗಿದ್ದಾರೆ. ಈ ಸಮಯವನ್ನು ನೀವು ಹೇಗೆ ಕಳೆಯುತ್ತಿದ್ದೀರಿ?

ಒಳ್ಳೊಳ್ಳೆ ಪುಸ್ತಕಗಳನ್ನು ಓದುತ್ತಿದ್ದೇನೆ. ಟಿ.ವಿ.ಯಲ್ಲಿ ಪ್ರಸಾರವಾಗುವ ಕೆಲ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೇನೆ. ತಂಡದ ಕೆಲ ಆಟಗಾರರ ಜೊತೆ ಆನ್‌ಲೈನ್‌ ಮೂಲಕ ಲುಡೊ ಆಟ ಆಡುತ್ತೇನೆ. ಮನೆಕೆಲಸಗಳನ್ನೂ ಮಾಡುತ್ತಾ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದೇನೆ.

*ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದೀರಿ?

ಮನೆಯಲ್ಲೇ ಅಗತ್ಯ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ಈ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೇನೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಲಾಕ್‌ಡೌನ್‌ ಸಮಯದಲ್ಲಿ ಇದು ಬಹಳ ಅಗತ್ಯ.

*ನಿವೃತ್ತಿಯ ಬಗ್ಗೆ?

ಸದ್ಯಕ್ಕೆಅಂತಹ ಯಾವ ಆಲೋಚನೆಯೂ ನನ್ನ ಮನದಲ್ಲಿ ಮೂಡಿಲ್ಲ. ನನ್ನಲ್ಲಿ ಇನ್ನೂ ಫುಟ್‌ಬಾಲ್‌ ಆಡುವ ಸಾಮರ್ಥ್ಯ ಇದೆ.

*ಕೋವಿಡ್‌–19 ಪಿಡುಗಿನಿಂದ ಅನೇಕ ಟೂರ್ನಿಗಳು ರದ್ದಾಗಿವೆ. ಮತ್ತಷ್ಟು ಟೂರ್ನಿಗಳನ್ನು ಮುಂದೂಡಲಾಗಿದೆ. ಹೀಗಾಗಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ ಪಾರಾಗುವ ಸಲುವಾಗಿ ಕೆಲ ಫೆಡರೇಷನ್‌ಗಳು ಆನ್‌ಲೈನ್‌ ಟೂರ್ನಿಗಳನ್ನು ಆಯೋಜಿಸಲು ಮುಂದಾಗಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಇದು ಕಷ್ಟದ ಸಮಯ. ಈ ಪರಿಸ್ಥಿತಿಯಲ್ಲಿ ಆಟಗಾರರು, ನೆರವು ಸಿಬ್ಬಂದಿ ಸೇರಿದಂತೆ ಎಲ್ಲರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಬೇಕು. ಉಳಿದಿದ್ದವೆಲ್ಲಾ ನಂತರ. ಇದು ಲಾಭ, ನಷ್ಟದ ಬಗ್ಗೆ ಲೆಕ್ಕ ಹಾಕುತ್ತಾ ಕೂರುವ ಸಮಯವಂತೂ ಅಲ್ಲ.

*ಕೊರೊನಾ ವೈರಾಣುವನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿಗೊಳಿಸಿವೆ. ಹೀಗಿದ್ದರೂ ಹಲವರು ಅನವಶ್ಯಕವಾಗಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಅಂತಹವರಿಗೆ ನೀವೇನು ಸಲಹೆ ನೀಡುತ್ತೀರಿ?

ಪರಿಸ್ಥಿತಿಯ ಗಂಭೀರತೆಯನ್ನು ಎಲ್ಲರೂ ಅರಿತುಕೊಳ್ಳಬೇಕು. ಇದು ಹುಡುಗಾಟಿಕೆಯ ಸಮಯವಲ್ಲ. ಜನರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ. ಎಲ್ಲರೂ ಮನೆಗಳಲ್ಲಿಯೇ ಇದ್ದು ಕೊರೊನಾ ಉಪಟಳವನ್ನು ಹತ್ತಿಕ್ಕಲು ಸಹಕರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಾಕ್‌ಡೌನ್‌ನಿಂದಾಗಿ ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹವರಿಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT