ಸೋಮವಾರ, ಡಿಸೆಂಬರ್ 9, 2019
24 °C

ಫುಟ್‌ಬಾಲ್‌: ರಿಯಲ್ ಬೆಟಿಸ್‌ಗೆ ಜಯ

Published:
Updated:
Deccan Herald

ಸೆವಿಲ್ಲೆ, ಸ್ಪೇನ್‌: ಅಮೋಘ ಆಟ ಆಡಿದ ರಿಯಲ್‌ ಬೆಟಿಸ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಬೆನಿಟೊ ವಿಲ್ಲಾಮರಿನ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ರಿಯಲ್‌ ಬೆಟಿಸ್‌ 2–0 ಗೋಲುಗಳಿಂದ ರಾಯೊ ವಲೆಕಾನೊ ತಂಡವನ್ನು ಮಣಿಸಿತು.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 22ಕ್ಕೆ ಹೆಚ್ಚಿಸಿಕೊಂಡಿರುವ ಬೆಟಿಸ್‌ ತಂಡ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.

ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ ಬೆಟಿಸ್‌ ತಂಡದ ಆಟ ರಂಗೇರಿತು. ಈ ತಂಡಕ್ಕೆ 59ನೇ ನಿಮಿಷದಲ್ಲಿ ಪೆನಾಲ್ಟಿ ಲಭಿಸಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಜಿಯೊವಾನಿ ಲೊ ಸೆಲ್ಸೊ ತಂಡದ ಸಂಭ್ರಮಕ್ಕೆ ಕಾರಣರಾದರು.

ನಂತರ ಬೆಟಿಸ್‌ ಆಟಗಾರರು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದರು. ಈ ತಂಡ 76ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿಕೊಂಡಿತು. ಸಿಡ್ನಿ, ಕಾಲ್ಚಳಕ ತೋರಿ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು. ನಂತರದ ಅವಧಿಯಲ್ಲಿ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಈ ತಂಡ ಗೆಲುವಿನ ತೋರಣ ಕಟ್ಟಿತು.

ಭಾನುವಾರ ನಡೆದಿದ್ದ ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡ 1–0 ಗೋಲಿನಿಂದ ಹ್ಯುಯೆಸ್ಕಾ ತಂಡವನ್ನು ಪರಾಭವಗೊಳಿಸಿತು.

ಗರೆತ್‌ ಬ್ಯಾಲ್‌ (8ನೇ ನಿಮಿಷ) ಏಕೈಕ ಗೋಲು ಗಳಿಸಿ ಗೆಲುವಿನ ರೂವಾರಿ ಆದರು.

ಇನ್ನೊಂದು ಹೋರಾಟದಲ್ಲಿ ವಲ್ಲಾಡೊಲಿಡ್‌ 2–1 ಗೋಲುಗಳಿಂದ ರಿಯಲ್‌ ಸೋಷಿಯೆಡಾಡ್‌ ತಂಡವನ್ನು ಮಣಿಸಿತು.

ಪ್ರತಿಕ್ರಿಯಿಸಿ (+)