ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೆಸ್ಸಿ ಗರಿಮೆ ತರುವುದೇ ಪಿಎಸ್‌ಜಿಗೆ ಹಿರಿಮೆ?

Last Updated 16 ಆಗಸ್ಟ್ 2021, 9:58 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಫುಟ್‌ಬಾಲ್ ಜಗತ್ತಿನಲ್ಲಿ ಹೆಚ್ಚು ಹೆಸರು ಮಾಡುತ್ತಿರುವ ಆಟಗಾರರ ಪಟ್ಟಿಯ ಮುಂಚೂಣಿಯಲ್ಲಿ ಮಿಂಚುತ್ತಿರುವವರು ಲಯೊನೆಲ್ ಮೆಸ್ಸಿ. ಅವರು ಹೆಚ್ಚು ಪಂದ್ಯಗಳನ್ನು ಆಡಿರುವ ತಂಡ ಯಾವುದು ಎಂದು ಕೇಳಿದರೆ ಸಾಮಾನ್ಯವಾಗಿ ಕೇಳಿಬರಬಹುದಾದ ಉತ್ತರ ಅರ್ಜೆಂಟೀನಾ ಎಂಬುದು.

ಆದರೆ ರಾಷ್ಟ್ರೀಯ ತಂಡದ ಪರವಾಗಿ ಅವರು ಆಡಿರುವುದು 151 ಪಂದ್ಯ ಮಾತ್ರ. ಗಳಿಸಿರುವುದು 76 ಗೋಲು. ಹಾಗಿದ್ದರೆ ಹೆಚ್ಚು ಪಂದ್ಯಗಳನ್ನು ಆಡಿದ್ದು ಮತ್ತು ಗರಿಷ್ಠ ಗೋಲು ಗಳಿಸಿದ್ದು ಎಲ್ಲಿ...? ಬೇರೆಲ್ಲೂ ಅಲ್ಲ, ಎಫ್‌ಸಿ ಬಾರ್ಸಿಲೋನಾದಲ್ಲಿ.

ರಾಷ್ಟ್ರೀಯ ತಂಡದ ಪರ ಆಡುವ ಒಂದು ವರ್ಷದ ಮೊದಲೇ, 2004ರಲ್ಲಿ ಸ್ಪೇನ್‌ನ ಪ್ರಸಿದ್ಧ ಕ್ಲಬ್‌ ಬಾರ್ಸಿಲೋನಾವನ್ನು ಸೇರಿಕೊಂಡಿದ್ದ ಅವರು 520 ಪಂದ್ಯಗಳನ್ನು ಆಡಿದ್ದು 474 ಗೋಲು ಗಳಿಸಿದ್ದಾರೆ. ಆ ಸುದೀರ್ಘ ಸಂಬಂಧಕ್ಕೆ ಈಗ ತೆರೆ ಬಿದ್ದಿದೆ. ಮೆಸ್ಸಿ ಆ ಕ್ಲಬ್‌ಗೆ ವಿದಾಯ ಹೇಳಿದ್ದು ಪ್ಯಾರಿಸ್ ಸೇಂಟ್ ಜರ್ಮೈನ್‌ನ ಜೆರ್ಸಿ ತೊಟ್ಟಿದ್ದಾರೆ. ಅವರ ಜೆರ್ಸಿ ಸಂಖ್ಯೆ 30 ಆಗಿ ಬದಲಾಗಿದೆ. ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ತಂಡದಲ್ಲಿ ಅವರ ಮೊದಲ ಪಂದ್ಯಕ್ಕಾಗಿ ಫುಟ್‌ಬಾಲ್ ಪ್ರೇಮಿಗಳು ಕಾಯುತ್ತಿದ್ದಾರೆ.

ಇದೆಲ್ಲದರ ನಡುವೆ, ಫ್ರೆಂಚ್ ಲೀಗ್‌–1 ಆಯೋಜಕರು ಮತ್ತು ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್‌ನ ಆಡಳಿತ ಬೇರೆಯೇ ಲೆಕ್ಕಾಚಾರದಲ್ಲಿದೆ. ಲಯೊನೆಲ್ ಮೆಸ್ಸಿ ಅವರ ಬರುವಿಕೆಯಿಂದಾಗಿ ಉಂಟಾಗಲಿರುವ ಆರ್ಥಿಕ ಪ್ರಗತಿಯ ಲೆಕ್ಕ ಅದು. ಪ್ರಮುಖ ಐದು ಲೀಗ್‌ಗಳಲ್ಲಿ ಒಂದು, ಫ್ರೆಂಚ್‌ ಲೀಗ್‌–1. ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್‌ನಲ್ಲಿ ಮೆಸ್ಸಿ ಇರುವ ಎರಡು ವರ್ಷ ಈ ಲೀಗ್‌ನಲ್ಲಿ ಭಾರಿ ಬದಲಾವಣೆ ಕಾಣುವ ಸಾಧ್ಯತೆ ಇದೆ ಎಂಬುದು ತಜ್ಞರ ಅನಿಸಿಕೆ.

ಫುಟ್‌ಬಾಲ್ ಜಗತ್ತಿನಲ್ಲಿ ಮೆಸ್ಸಿ ಹೆಸರು ಕೇಳಿದರೆ ರೋಮಾಂಚನಗೊಳ್ಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಾರ್ಸಿಲೋನಾ ತಂಡವನ್ನು ತೊರೆದರೂ ಅವರ ಅನುಪಸ್ಥಿತಿಯಲ್ಲಿ ಆಗಸ್ಟ್‌ 15ರಂದು ನಡೆದ ಬಾರ್ಸಿಲೋನಾದ ಮೊದಲ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳು ‘ಮೆಸ್ಸಿ...ಮೆಸ್ಸಿ...’ ಎಂದು ಕೂಗಿದ್ದೇ ಅವರ ಮೇಲಿನ ಅಭಿಮಾನಕ್ಕೊಂದು ತಾಜಾ ಉದಾಹರಣೆ. ಅತಿಹೆಚ್ಚು ಅಭಿಮಾನಿಗಳು ಇರುವ ಪ್ರಮುಖ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರು ಅವರು. ಅವರ ತಾರಾಮೌಲ್ಯವೂ ದೊಡ್ಡದು. ಅವರು ಇರುವುದರಿಂದ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಲಿದೆ. ಹೀಗಾಗಿ ಕ್ಲಬ್‌ನ ಬ್ರಾಂಡ್ ಮೌಲ್ಯವೂ ಹೆಚ್ಚಾಗುವುದರಲ್ಲಿ ಸಂದೇಹ ಇಲ್ಲ. ಇದೆಲ್ಲದರ ಪರಿಣಾಮ ಫ್ರೆಂಚ್ ಲೀಗ್–1ರ ಮೇಲೆ ಆಗಲಿದೆ.

ಆದಾಯ ಮತ್ತು ಟೆಲಿವಿಷನ್ ವೀಕ್ಷಕರ ಸಂಖ್ಯೆಯಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌, ಲಾಲಿಗಾ, ಬುಂಡಸ್‌ಲೀಗಾ ಹಾಗೂ ಸೀರಿ ಎ ನಂತರದ ಸ್ಥಾನದಲ್ಲಿ ಸದ್ಯ ಲೀಗ್–1 ಇದೆ. ಮೆಸ್ಸಿ ಬಂದ ನಂತರ ಈ ಸ್ಥಾನದಲ್ಲಿ ಬದಲಾವಣೆಯಾಗುವುದೇ ಎಂಬ ಕುತೂಹಲ ಫುಟ್‌ಬಾಲ್‌ ಜಗತ್ತಿನಲ್ಲಿ ಮೂಡಿದೆ. ಖ್ಯಾತ ಆಟಗಾರ ನೇಮರ್ ಕೂಡ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದಲ್ಲಿದ್ದಾರೆ. ಫುಟ್‌ಬಾಲ್ ಪ್ರಿಯರ ನೆಚ್ಚಿನ ಕೈಲಿಯನ್ ಬಾಪೆ ಕೂಡ ಇದೇ ಕ್ಲಬ್‌ನಲ್ಲಿದ್ದಾರೆ. ಹೀಗಾಗಿ ಮೂವರ ಸಂಗಮದಿಂದ ಈಗ ತಂಡ ಬಲಿಷ್ಠವಾಗಿದೆ. ಇದು ಕೂಡ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಲು ನೆರವಾಗಲಿದೆ.

ನೇಮರ್‌ 2017ರಲ್ಲಿ ತಂಡವನ್ನು ಸೇರಿದ ನಂತರ ಅದರ ಬ್ರಾಂಡ್ ಮೌಲ್ಯ ಮೂರು ಸಾವಿರ ಕೋಟಿಯಷ್ಟು ಹೆಚ್ಚಾಗಿತ್ತು. ಮೆಸ್ಸಿ ಬರುವಿಕೆಯಿಂದ ಈ ಸಂಖ್ಯೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಲೀಗ್ ಮತ್ತು ಕ್ಲಬ್‌ನ ಅಭಿಮಾನಿಗಳ ಸಂಖ್ಯೆಯಲ್ಲಿ ಈಗಾಗಲೇ ಭಾರಿ ಏರಿಕೆ ಕಂಡಿದೆ. ಮೆಸ್ಸಿ ಅವರ ಸ್ವಾಗತ ಕಾರ್ಯಕ್ರಮದ ನಂತರ ಸಾಮಾಜಿಕ ತಾಣಗಳಲ್ಲಿ ಕ್ಲಬ್‌ನ ಹಿಂಬಾಲಕರ ಸಂಖ್ಯೆಯಲ್ಲಿ 14 ಲಕ್ಷದಷ್ಟು ಏರಿಕೆ ಕಂಡಿದೆ.

ಮೊದಲ ಪಂದ್ಯ, ಮೊದಲ ಗೋಲಿನ ನಿರೀಕ್ಷೆ

ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್‌ಗೆ ಮೆಸ್ಸಿ ಆಗಮನವಂತೂ ಆಗಿದೆ. ಲೀಗ್–1 ಈಗಾಗಲೇ ಆರಂಭವೂ ಆಗಿದೆ. ಆದರೆ ಮೆಸ್ಸಿ ಮೊದಲ ಪಂದ್ಯ ಆಡುವುದು ಯಾವಾಗ ಮತ್ತು ಕಾಲ್ಚಳಕದ ಮೂಲಕ ಮೊದಲ ಗೋಲು ಗಳಿಸುವುದು ಎಂದು ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೇಳಲಿದೆ. ಆಗಸ್ಟ್ 29ರಂದು ರೀಮ್ಸ್ ಎದುರಿನ ಪಂದ್ಯದಲ್ಲಿ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಅದಿಲ್ಲದಿದ್ದರೆ ಸೆಪ್ಟೆಂಬರ್‌ 12ರಂದು ಕ್ಲೆರ್ಮಂಟ್ ಫೂಟ್ ಎದುರು ಆಡುವ ಸಾಧ್ಯತೆ ಇದೆ.

ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾ ಪರ ಆಡಿದ ನಂತರ ಮೆಸ್ಸಿ ಸುದೀರ್ಘ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ‘ದೇಹವನ್ನು ಆಟಕ್ಕೆ ಸಜ್ಜುಗೊಳಿಸಲು ಸ್ವಲ್ಪ ಸಮಯ ಬೇಕು’ ಎಂದು ಪ್ಯಾರಿಸ್ ಸೇಂಟ್ ಜರ್ಮೈನ್ ಜೊತೆ ಒಪ್ಪಂದ ಮಾಡಿಕೊಂಡ ನಂತರ ಅವರೇ ಹೇಳಿದ್ದಾರೆ. ಹೀಗಾಗಿ ಈ ತಿಂಗಳ 20ರಂದು ಬ್ರೀಸ್ಟ್ ಎದುರು ನಡೆಯಲಿರುವ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಿದ್ಧರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT