ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಬೆಂಗಳೂರಿಗೆ ಮಣಿದ ಕೇರಳ ಬ್ಲಾಸ್ಟರ್ಸ್‌

Last Updated 13 ಡಿಸೆಂಬರ್ 2020, 21:03 IST
ಅಕ್ಷರ ಗಾತ್ರ

ಗೋವಾ: ಸುನಿಲ್ ಚೆಟ್ರಿ ಬಳಗದ ದಿಟ್ಟ ಆಟದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಭಾನುವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿತು.

ಲೀಗ್ ಆರಂಭದಿಂದಲೂ ಒಂದೂ ಸೋಲು ಕಾಣದ ಬೆಂಗಳೂರು ತಂಡವು ಇಲ್ಲಿ ನಡೆದ ತುರುಸಿನ ಹಣಾಹಣಿಯಲ್ಲಿ 4–2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಗೆದ್ದಿತು. ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳ ಆಟವು ಭಾರಿ ಹಣಾಹಣಿಯಿಂದ ಕೂಡಿತ್ತು. ಬೆಂಗಳೂರು ತಂಡದ ಕ್ಲಿಟನ್ ಸಿಲ್ವಾ (29ನೇ ನಿಮಿಷ), ಎರಿಕ್ ಹಾರ್ಥಲು (51ನೇ ನಿಮಿಷ), ದಿಮಾಸ್ ಡೆಲ್ಗಾಡೊ (53ನೇ ನಿಮಿಷ) ಮತ್ತು ಸುನಿಲ್ ಚೆಟ್ರಿ (65ನೇ ನಿಮಿಷ) ಗೋಲು ಹೊಡೆದರು.

ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ರಾಹುಲ್ ಕೆಪಿ (17ನೇ ನಿಮಿಷ) ಹಾಗೂ ಜೋರ್ಡಾನ್ ಮರ‍್ರೆ (61ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ನಾಯಕ ಸುನಿಲ್ ಛೆಟ್ರಿ ಪೆನಾಲ್ಟಿ ಅವಕಾಶವೊಂದನ್ನು ಕೈ ಚೆಲ್ಲದೇ ಇರುತ್ತಿದ್ದರೆ ಬೆಂಗಳೂರು ಮತ್ತೊಂದು ಗೋಲನ್ನು ಗಳಿಸಿರುತ್ತಿತ್ತು. ಈ ಜಯದೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.

ಕೇರಳ ತಂಡದ ರಾಹುಲ್ ಪೆಪಿ (17ನೇ ನಿಮಿಷ) ಗೋಲಿನ ಖಾತೆ ತೆರೆದರು. ತಂಡವು 1–0 ಮುನ್ನಡೆ ಪಡೆಯಿತು. ಆದರೆ 12 ನಿಮಿಷಗಳ ನಂತರ ಬೆಂಗಳೂರಿನ ಕ್ಲಿಟನ್ ಸಿಲ್ವಾ ಗೋಲು ಬಾರಿಸಿ ಸಮಬಲ ಸಾಧಿಸಿದರು. ವಿರಾಮದ ನಂತರ ಪಾರ್ಥಲು ಹೊಡೆದ ಗೋಲಿನಿಂದ ಬಿಎಫ್‌ಸಿ 2–1ರ ಮುನ್ನಡೆ ಪಡೆಯಿತು. ತಿರುಗೇಟು ನೀಡಿದ ಜೋರ್ಡಾನ್ ಮತ್ತೆ ಗೋಲು ಸಮಬಲ ಸಾಧಿಸಿದರು. ಎರಡೇ ನಿಮಿಷಗಳಲ್ಲಿ ಡೆಲ್ಗಾಡೊ ಹೊಡೆದ ಅಮೋಘ ಗೋಲಿನಿಂದ ಮತ್ತೆ ಬಿಎಫ್‌ಸಿ ಜಯದ ಹಾದಿ ಹಿಡಿಯಿತು. ನಾಯಕ ಚೆಟ್ರಿ ಗೋಲು ಗಳಿಸಿ ತಂಡದ ಗೆಲುವು ಖಚಿತಗೊಳಿಸಿದರು.

ಬಿಎಫ್‌ಸಿ ತಂಡವು ಒಟ್ಟು ಐದು ಪಂದ್ಯಗಳನ್ನು ಆಡಿದೆ. ಅದರಲ್ಲಿ ಇದು ಎರಡನೇ ಜಯ. ಮೂರು ಪಂದ್ಯಗಳು ಡ್ರಾ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT