ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಒಲಿಂಪಿಯನ್ ‘ಬದ್ರು’ ಬ್ಯಾನರ್ಜಿ ಇನ್ನಿಲ್ಲ

Last Updated 20 ಆಗಸ್ಟ್ 2022, 19:39 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ, ಒಲಿಂಪಿಯನ್ ಸಮರ್ ‘ಬದ್ರು’ ಬ್ಯಾನರ್ಜಿ (92) ದೀರ್ಘಕಾಲದ ಅನಾರೋಗ್ಯದಿಂದಾಗಿ ಶನಿವಾರ ನಿಧನರಾದರು.

ಫುಟ್‌ಬಾಲ್ ಕ್ಷೇತ್ರದಲ್ಲಿ ‘ಬದ್ರು ದಾ’ ಎಂದೇ ಚಿರಪರಿಚಿತರಾಗಿದ್ದ ಬ್ಯಾನರ್ಜಿ ಅವರು ಜುಲೈ 27ರಂದು ಕೋವಿಡ್‌ ಚಿಕಿತ್ಸೆಗಾಗಿ ಎಂಆರ್ ಬಂಗೂರ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಹುಕಾಲದಿಂದ ಅಲ್ಜೀಮರ್, ಅಜೊತೆಮಿಯಾ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರಿಗೆ ಸೊಸೆ ಇದ್ದಾರೆ.

‘ಅವರ ಆರೋಗ್ಯ ಹದಗೆಡುತ್ತಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಯ ಸರ್ಕಾರದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ರಾಜ್ಯ ಕ್ರೀಡಾ ಸಚಿವ ಅನೂಪ್ ಬಿಸ್ವಾಸ್ ಅವರು ಮೇಲ್ಚಿಚಾರಣೆ ನಿರ್ವಹಿಸಿದರು. ಬೆಳಗಿನ ಜಾವ 2.10ಕ್ಕೆ ಬ್ಯಾನರ್ಜಿಯವರು ಕೊನೆಯುಸಿರೆಳೆದರು. ಅವರು ನಮಗೆಲ್ಲರಿಗೂ ಅಚ್ಚುಮೆಚ್ಚಿನ ಬದ್ರು ದಾ ಆಗಿದ್ದರು. 2009ರಲ್ಲಿ ಅವರಿಗೆ ಮೋಹನ್ ಬಾಗನ್ ರತ್ನ ಪುರಸ್ಕಾರ ನೀಡಿ ಗೌರವಿಸಿದ್ದೆವು. ಅವರ ನಿಧನದಿಂದಾಗಿ ಕ್ರೀಡೆಗೆ ದೊಡ್ಡ ನಷ್ಟವಾಗಿದೆ’ ಎಂದು ಮೋಹನ್ ಬಾಗನ್ ಕಾರ್ಯದರ್ಶಿ ದೇವಾಶಿಶ್ ದತ್ತಾ ಹೇಳಿದ್ದಾರೆ.

ಬ್ಯಾನರ್ಜಿಯವರ ಪಾರ್ಥಿವ ಶರೀರವನ್ನು ಕ್ಲಬ್‌ನಲ್ಲಿ ಇರಿಸಲಾಗಿತ್ತು. ಅಭಿಮಾನಿಗಳು, ಫುಟ್‌ಬಾಲ್ ಆಟಗಾರರು, ಬೇರೆ ಬೇರೆ ಕ್ಲಬ್‌ಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಒಲಿಂಪಿಕ್ಸ್‌ ನಾಯಕ: ಭಾರತ ಫುಟ್‌ಬಾಲ್ ತಂಡವು ಇದುವರೆಗೆ ಮೂರು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದೆ. 1956ರ ಒಲಿಂಪಿಕ್ ಕೂಟದಲ್ಲಿ ಆಡಿದ್ದ ಭಾರತ ತಂಡಕ್ಕೆ ಬ್ಯಾನರ್ಜಿ ನಾಯಕತ್ವ ವಹಿಸಿದ್ದರು. ಈ ಕೂಟದಲ್ಲಿ ಕಂಚಿನ ಪದಕ ಸುತ್ತಿನಲ್ಲಿ ಭಾರತ ತಂಡವು 0–3ರಿಂದ ಬಲ್ಗೆರಿಯಾ ಎದುರು ಸೋತಿತ್ತು. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಭಾರತದ ಮಟ್ಟಿಗೆ ಇದು ಸರ್ವಶ್ರೇಷ್ಠ ಸಾಧನೆಯಾಗಿ ಉಳಿದಿದೆ. ಈ ಅವಧಿಯನ್ನು ದೇಶದ ಫುಟ್‌ಬಾಲ್‌ ಕ್ರೀಡೆಯ ಸುವರ್ಣ ಯುಗವೆಂದೇ ಬಣ್ಣಿಸಲಾಗಿದೆ.

ಆಗ ತಂಡಕ್ಕೆ ಸೈಯದ್ ಅಬ್ದುಲ್ ರಹೀಮ್ ಕೋಚ್ ಆಗಿದ್ದರು. ಪಿ.ಕೆ. ಬ್ಯಾನರ್ಜಿ, ನೆವಿಲ್ ಡಿಸೋಜಾ, ಜೆ. ಕೃಷ್ಣಸ್ವಾಮಿ (ಕಿಟ್ಟು) ಅವರು ತಂಡದಲ್ಲಿದ್ದರು. ಕೂಟದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತವು 4–2ರಿಂದ ಆಸ್ಟ್ರೇಲಿಯಾ ಎದುರು ಗೆದ್ದಿತ್ತು. ಡಿಸೋಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆದರೆ ನಾಲ್ಕರ ಘಟ್ಟದಲ್ಲಿ ಯುಗೊಸ್ಲಾವಿಯಾ ಎದುರಿನ ಪಂದ್ಯದಲ್ಲಿ ಸೋತಿದ್ದ ಭಾರತಕ್ಕೆ ಫೈನಲ್ ಪ್ರವೇಶಿಸಲುಸಾಧ್ಯವಾಗಲಿಲ್ಲ.

ಅವರ ಅಮೋಘ ಆಟದಿಂದಾಗಿ ಮೋಹನ್ ಬಾಗನ್ ತಂಡವು ಡುರಾಂಡ್ ಕಪ್ (1953), ರೋವರ್ಸ್ ಕಪ್ (1955), ಸಂತೋಷ್ ಟ್ರೋಫಿ (1953, 1955) ಜಯಿಸಿತ್ತು. ಅವರ ತರಬೇತಿಯಲ್ಲಿಯೂ ಬಾಗನ್ ತಂಡವು 1962ರಲ್ಲಿ ಸಂತೋಷ್ ಟ್ರೋಫಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT