ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಫುಟ್‌ಬಾಲ್‌ ಪಂದ್ಯದ ವೇಳೆ ಹಿಂಸಾಚಾರ: ಸತ್ತವರಲ್ಲಿ 32 ಮಕ್ಕಳು!

ಕಾಲ್ತುಳಿತ ಘಟನೆಯ ತನಿಖೆಗೆ ಸ್ವತಂತ್ರ ತಂಡ ರಚನೆ
Last Updated 3 ಅಕ್ಟೋಬರ್ 2022, 12:26 IST
ಅಕ್ಷರ ಗಾತ್ರ

ಮಾಲಾಂಗ್‌, ಇಂಡೊನೇಷ್ಯಾ: ಇಲ್ಲಿಯ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರ ಮತ್ತು ಕಾಲ್ತುಳಿತ ಘಟನೆಯ ತನಿಖೆಗೆ ಇಂಡೊನೇಷ್ಯಾ ಸರ್ಕಾರವು ಸ್ವತಂತ್ರ ತಂಡವನ್ನು ರಚಿಸಿದೆ. ಭೀಕರ ದುರಂತದಲ್ಲಿ ಸಾವಿಗೀಡಾದ 125 ಮಂದಿಯಲ್ಲಿ ಕನಿಷ್ಠ 32 ಮಕ್ಕಳೂ ಸೇರಿದ್ದಾರೆ.

ಶನಿವಾರ ತಡರಾತ್ರಿ ಇಲ್ಲಿಯ ಕಂಜುರುಹಾನ್‌ ಕ್ರೀಡಾಂಗಣದಲ್ಲಿ ನಡೆದ ಬಿಆರ್‌ಐ ಲೀಗ್‌ ಪಂದ್ಯದಲ್ಲಿ ಸ್ಥಳೀಯ ಅರೆಮಾ ಎಫ್‌ಸಿ ತಂಡವು 2–3 ಗೋಲುಗಳಿಂದಪೆರ್ಸೆಬಾಯಾ ಸುರಬಯಾ ಎದುರು ಸೋತಿತ್ತು. ಇದರಿಂದ ರೊಚ್ಚಿಗೆದ್ದ ಅರೆಮಾ ಎಫ್‌ಸಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಷೆಲ್‌ ಸಿಡಿಸಿದಾಗ ಉಂಟಾದ ಕಾಲ್ತುಳಿತದಿಂದಾಗಿ ದುರಂತ ಸಂಭವಿಸಿತ್ತು.320ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದನ್ನು ದೇಶದ ಮಾನವ ಹಕ್ಕುಗಳ ಆಯೋಗ ಪ್ರಶ್ನಿಸಿದೆ.

‘ದುರಂತದಲ್ಲಿ ಸಾವಿಗೀಡಾದವರಲ್ಲಿ ಮೂರರಿಂದ 17 ವರ್ಷದೊಳಗಿನ 32 ಮಕ್ಕಳು ಇದ್ದರು‘ ಎಂದು ಇಂಡೊನೇಷ್ಯಾದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ರಕ್ಷಣಾ ಅಧಿಕಾರಿ ನಹರ್ ತಿಳಿಸಿದ್ದಾರೆ. ಈ ಹಿಂದೆ 17 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.

‘ಘಟನೆಯ ಕುರಿತು ತನಿಖೆ ನಡೆಸಲಿರುವ ತಂಡದಲ್ಲಿ ಫುಟ್‌ಬಾಲ್‌ ಪರಿಣತರು, ಸರ್ಕಾರಿ ಅಧಿಕಾರಿಗಳು ಇರಲಿದ್ದಾರೆ. ದುರಂತಕ್ಕೆ ಯಾರು ಜವಾಬ್ದಾರಿ ಎಂಬುದನ್ನು ಈ ತಂಡ ಪತ್ತೆಹಚ್ಚಲಿದೆ‘ ಎಂದು ದೇಶದ ಮುಖ್ಯ ಭದ್ರತಾ ಸಚಿವ ಮಹಫೂದ್‌ ಎಂ.ಡಿ. ತಿಳಿಸಿದ್ದಾರೆ.

‘ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ₹ 2.60 ಲಕ್ಷ ಪರಿಹಾರ ಮೊತ್ತ ಮತ್ತು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದೂ ಅವರು ನುಡಿದರು.

‘ಅಶ್ರುವಾಯು ಪ್ರಯೋಗಿಸದಿದ್ದರೆ ಬಹುಶಃ ಇಷ್ಟೊಂದು ಅವ್ಯವಸ್ಥೆ ಇರುತ್ತಿರಲಿಲ್ಲ‘ ಎಂದು ಇಂಡೋನೇಷ್ಯಾದ ಮಾನವ ಹಕ್ಕುಗಳ ಆಯೋಗದ ಆಯುಕ್ತ ಚೊಯಿರುಲ್ ಅನಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲ ಬಾರಿ ಪಂದ್ಯ ವೀಕ್ಷಣೆಗೆ ಬಂದಿದ್ದರು‘: ‘ನನ್ನ ತಮ್ಮಂದಿರಾದ ಅಹ್ಮದ್‌ ಕಾಯ್‌ಹೊ (15) ಮತ್ತು ಮುಹಮ್ಮದ್ ಫರೆಲ್ (14) ಅರೆಮಾ ಎಫ್‌ಸಿಯ ಪಂದ್ಯ ವೀಕ್ಷಣೆಗೆ ಮೊದಲ ಬಾರಿಗೆ ಕಂಜುರುಹಾನ್ ಕ್ರೀಡಾಂಗಣಕ್ಕೆ ಬಂದಿದ್ದರು. ಇಷ್ಟು ದೊಡ್ಡ ದುರಂತವಾಗುತ್ತದೆ ಎಂದು ಗೊತ್ತಿರಲಿಲ್ಲ‘ ಎಂದು ತನ್ನ ತಮ್ಮಂದಿರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಎಂದಾಹ್ ವಾಯುನಿ ಕಣ್ಣೀರಾದರು.

ಅಹ್ಮದ್‌ ಮತ್ತುಫರೆಲ್ ದುರಂತದಲ್ಲಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT