ಭಾನುವಾರ, ಡಿಸೆಂಬರ್ 4, 2022
21 °C
ತನಿಖೆಗೆ ಸ್ವತಂತ್ರ ತಂಡ ರಚನೆ

ಇಂಡೊನೇಷ್ಯಾ ಫುಟ್‌ಬಾಲ್‌ ದುರಂತ ಸತ್ತವರಲ್ಲಿ 32 ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲಾಂಗ್‌, ಇಂಡೊನೇಷ್ಯಾ (ರಾಯಿಟರ್ಸ್/ಎಪಿ): ಇಲ್ಲಿಯ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರ ಮತ್ತು ಕಾಲ್ತುಳಿತ ಘಟನೆಯ ತನಿಖೆಗೆ ಇಂಡೊನೇಷ್ಯಾ ಸರ್ಕಾರವು ಸ್ವತಂತ್ರ ತಂಡವನ್ನು ರಚಿಸಿದೆ. ಭೀಕರ ದುರಂತದಲ್ಲಿ ಸಾವಿಗೀ ಡಾದ 125 ಮಂದಿಯಲ್ಲಿ 32 ಮಕ್ಕಳೂ ಸೇರಿದ್ದಾರೆ.

ಶನಿವಾರ ತಡರಾತ್ರಿ ಇಲ್ಲಿಯ ಕಂಜುರುಹಾನ್‌ ಕ್ರೀಡಾಂಗಣದಲ್ಲಿ ನಡೆದ ಬಿಆರ್‌ಐ ಲೀಗ್‌ ಪಂದ್ಯದಲ್ಲಿ ಸ್ಥಳೀಯ ಅರೆಮಾ ಎಫ್‌ಸಿ ತಂಡವು 2–3 ಗೋಲುಗಳಿಂದ ಪೆರ್ಸೆಬಾಯಾ ಸುರಬಯಾ ಎದುರು ಸೋತಿತ್ತು. ಇದರಿಂದ ರೊಚ್ಚಿಗೆದ್ದ ಅರೆಮಾ ಎಫ್‌ಸಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಷೆಲ್‌ ಸಿಡಿಸಿದಾಗ ಉಂಟಾದ ಕಾಲ್ತುಳಿತದಿಂದಾಗಿ ದುರಂತ ಸಂಭವಿಸಿತ್ತು. 320ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದನ್ನು ದೇಶದ ಮಾನವ ಹಕ್ಕುಗಳ ಆಯೋಗ ಪ್ರಶ್ನಿಸಿದೆ.

‘ಅಶ್ರುವಾಯು ಪ್ರಯೋಗಿಸಿದ 12ಕ್ಕೂ ಹೆಚ್ಚಿನ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ‘ ಎಂದು ಇಂಡೊ ನೇಷ್ಯಾ ಪೊಲೀಸರು ತಿಳಿಸಿದ್ದಾರೆ.

‘ದುರಂತದಲ್ಲಿ ಸಾವಿಗೀಡಾ ದವರಲ್ಲಿ ಮೂರರಿಂದ 17 ವರ್ಷದೊಳಗಿನ 32 ಮಕ್ಕಳು ಇದ್ದರು’ ಎಂದು ಇಂಡೊನೇಷ್ಯಾದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ರಕ್ಷಣಾ ಅಧಿಕಾರಿ ನಹರ್ ತಿಳಿಸಿದ್ದಾರೆ.

ಅಶ್ರುವಾಯು ಪ್ರಯೋಗಿಸಿದ ಸಂಬಂಧ ಇಂಡೊನೇಷ್ಯಾದ ಪೊಲೀಸ್‌ ಮುಖ್ಯಸ್ಥರೊಬ್ಬರು ಮತ್ತು ಒಂಬತ್ತು ಪ್ರಮುಖ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

‘ಘಟನೆಯ ಕುರಿತು ತನಿಖೆ ನಡೆ ಸುತ್ತಿರುವ ತಂಡದಲ್ಲಿ ಫುಟ್‌ಬಾಲ್‌ ಪರಿಣತರು, ಸರ್ಕಾರಿ ಅಧಿಕಾರಿಗಳು ಇದ್ದಾರೆ’ ಎಂದು ದೇಶದ ಭದ್ರತಾ ಸಚಿವ ಮಹಫೂದ್‌ ತಿಳಿಸಿದ್ದಾರೆ.

ಕ್ಷಮೆಯಾಚನೆ:‘ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷನಾಗಿ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಸಂತ್ರಸ್ತರ ಕ್ಷಮೆಯಾಚಿಸುತ್ತೇನೆ‘ ಎಂದು ಅರೆಮಾ ಎಫ್‌ಸಿ ಅಧ್ಯಕ್ಷ ಗಿಲಾಂಗ್‌ ವಿಡ್ಯಾ ಪ್ರಮಾನಾ ಅವರು ಲೈವ್‌ ವಿಡಿಯೊದಲ್ಲಿ ಕಣ್ಣೀರು ಸುರಿಸುತ್ತಲೇ ನುಡಿದರು.

 

ಮೊದಲ ಬಾರಿ ಪಂದ್ಯ ವೀಕ್ಷಣೆಗೆ ಬಂದಿದ್ದರು

‘ನನ್ನ ತಮ್ಮಂದಿರಾದ ಅಹ್ಮದ್‌ ಕಾಯ್‌ಹೊ (15) ಮತ್ತು ಮುಹಮ್ಮದ್ ಫರೆಲ್ (14) ಅರೆಮಾ ಎಫ್‌ಸಿಯ ಪಂದ್ಯ ವೀಕ್ಷಣೆಗೆ ಮೊದಲ ಬಾರಿಗೆ ಕಂಜುರುಹಾನ್ ಕ್ರೀಡಾಂಗಣಕ್ಕೆ ಬಂದಿದ್ದರು. ಇಷ್ಟು ದೊಡ್ಡ ದುರಂತವಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ತನ್ನ ತಮ್ಮಂದಿರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಎಂದಾಹ್ ವಾಯುನಿ ಕಣ್ಣೀರಾದರು.

ಅಹ್ಮದ್‌ ಮತ್ತು ಫರೆಲ್ ದುರಂತದಲ್ಲಿ ಸಾವನ್ನಪ್ಪಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು