ಸೋಮವಾರ, ಜುಲೈ 4, 2022
21 °C

ಐಎಸ್‌ಎಲ್: ಜೆಎಫ್‌ಸಿ ಕನಸಿಗೆ ಅಡ್ಡಿಯಾದ ಟ್ರಿಯಾಡಿಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೆಮ್‌ಶೆಡ್‌ಪುರ: ಕೊನೆಯ ನಿಮಿಷದಲ್ಲಿ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದ ಟ್ರಿಯಾಡಿಸ್ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ಜೆಮ್‌ಶೆಡ್‌ಪುರ ಎಫ್‌ಸಿಯ ಕನಸು ಭಗ್ನಗೊಳಿಸಿದರು.

ಇಲ್ಲಿನ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ರಾತ್ರಿ ನಡೆದ 30ನೇ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಮತ್ತು ನಾರ್ತ್ ಈಸ್ಟ್ ಯುನೈಟೆಡ್‌ ತಂಡಗಳು 1–1 ಗೋಲಿನಿಂದ ಸಮಬಲ ಸಾಧಿಸಿದವು.

ಮೊದಲ 10 ನಿಮಿಷಗಳಲ್ಲಿ ಉಭಯ ತಂಡಗಳ ಆಟಗಾರರು ಪರಿಣಾಮಕಾರಿ ಆಟ ಆಡಲು ವಿಫಲರಾದರು. ಹೀಗಾಗಿ ಯಾವ ತಂಡಕ್ಕೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಆಗಲಿಲ್ಲ. 10 ನಿಮಿಷಗಳ ನಂತರ ಪಂದ್ಯ ರೋಚಕವಾಗುತ್ತ ಸಾಗಿತು. 19ನೇ ನಿಮಿಷದಲ್ಲಿ ಜೆಎಫ್‌ಸಿಯ ಫಾರೂಕ್ ಚೌಧರಿ ಬಲ ಭಾಗದಿಂದ ಪ್ರಬಲ ಆಕ್ರಮಣ ನಡೆಸಿದರು. ಚೆಂಡಿನೊಂದಿಗೆ ಎದುರಾಳಿಗಳ ಆವರಣಕ್ಕೆ ನುಗ್ಗಿದ ಅವರು ಸರ್ಜಿಯೊ ಕಾಸೆಲ್‌ ಕಡೆಗೆ ಕ್ರಾಸ್ ಮಾಡಿದರು. ಕಾಸೆಲ್ ಚೆಂಡನ್ನು ಬಲವಾಗಿ ಒದ್ದರೂ ವೇನ್ ವಾಜ್ ಚಾಕಚಕ್ಯತೆಯಿಂದ ತಡೆದರು.

ಆದರೆ 28ನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಕಾಸೆಲ್ ಸದುಪಯೋಗಪಡಿಸಿಕೊಂಡರು. ಬಲಭಾಗದಲ್ಲಿ ಚೆಂಡನ್ನು ನಿಯಂತ್ರಿಸಿದ ಐಟರ್ ಮನ್ರೊಯ್ ಬಾಕ್ಸ್‌ನಲ್ಲಿದ್ದ ಫಾರೂಕ್ ಕಡೆಗೆ ಪಾಸ್ ಮಾಡಿದರು. ಫಾರೂಕ್ ಚುರುಕಾದ ಪಾದಚಲನೆಯ ಮೂಲಕ ಚೆಂಡನ್ನು ಕಾಸೆಲ್ ಬಳಿಗೆ ಅಟ್ಟಿದರು. ಎದೆಯಲ್ಲಿ ಚೆಂಡನ್ನು ತಡೆದು ನೆಲಕ್ಕೆ ಹಾಕಿದ ಕಾಸೆಲ್ ವಾಯುವೇಗದಲ್ಲಿ ಒದ್ದು ಬಲೆಯೊಳಗೆ ಸೇರಿಸಿದರು.

ನಂತರ ಆಟ ಇನ್ನಷ್ಟು ಕಳೆಗಟ್ಟಿತು. ಮುನ್ನಡೆಗಾಗಿ ಪ್ರಯತ್ನಿಸಿದ ನಾರ್ತ್ ಈಸ್ಟ್ ಯುನೈಟೆಡ್‌ಗೆ 90ನೇ ನಿಮಿಷದಲ್ಲಿ ಫಲ ದೊರಕಿತು. ಟ್ರಿಯಾಡಿಸ್ ಗೋಲು ಗಳಿಸಿ ಮಿಂಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು