ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಕೇರಳ ವಿರುದ್ಧ ಗೋವಾಗೆ ಭರ್ಜರಿ ಗೆಲುವು

Last Updated 7 ಡಿಸೆಂಬರ್ 2020, 4:58 IST
ಅಕ್ಷರ ಗಾತ್ರ

ಫತೋರ್ಡ: ಮೂರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿದ್ದ ಆತಿಥೇಯ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಭಾನುವಾರ ಮೊದಲ ಗೆಲುವಿನ ಸವಿಯುಂಡಿತು. ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದಲ್ಲಿ ಗೋವಾ 3–1ರ ಜಯ ಸಾಧಿಸಿತು.

30 ಮತ್ತು 90ನೇ ನಿಮಿಷದಲ್ಲಿ ಇಗರ್ ಆಂಗುಲೊ ಹಾಗೂ 52ನೇ ನಿಮಿಷದಲ್ಲಿ ಜಾರ್ಜ್ ಒರ್ಟಿಜ್ ಮೆಂಡೋಜಾ ಅವರು ಗೋವಾ ಪರ ಗೋಲು ಗಳಿಸಿದರೆ ಕೇರಳ ತಂಡಕ್ಕಾಗಿ ವಿನ್ಸೆಂಟ್ ಗೊಮೆಜ್ ಸಮಾಧಾನಕರ ಗೋಲು ತಂದುಕೊಟ್ಟರು. ಇಂಜುರಿ ಅವಧಿಯಲ್ಲಿಈ ಗೋಲು ಮೂಡಿಬಂತು.

ನಾರ್ತ್ ಈಸ್ಟ್ ಯನೈಟೆಡ್ ವಿರುದ್ಧ ನಡೆದಿದ್ದ ಕಳೆದ ಪಂದ್ಯವನ್ನು ಗೋವಾ 1–1ರಲ್ಲಿ ಡ್ರಾ ಮಾಡಿಕೊಂಡಿತ್ತು. ಈ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಿ ಫೆರಾಂಡೊ ತಂಡವನ್ನು ಕಣಕ್ಕೆ ಇಳಿಸಿದ್ದರು. ಜೇಮ್ಸ್ ಡೊನಾಚಿ ಮತ್ತು ಅಲೆಕ್ಸಾಂಡರ್ ಜೇಸುರಾಜ್ ಅವರಿಗೆ ಅವಕಾಶ ನೀಡಲಾಗಿತ್ತು. ಕೇರಳ ಬ್ಲಾಸ್ಟರ್ಸ್‌ ಆಡುವ 11ರಲ್ಲಿ ನಿಶು ಕುಮಾರ್, ಗೊಮೆಜ್ ಮತ್ತು ನೊಂಗ್ಡಂಬ ನೌರೆಮ್‌ಗೆ ಅವಕಾಶ ನೀಡಿತ್ತು.

10ನೇ ನಿಮಿಷದಲ್ಲೇ ಗೋವಾಗೆ ಉತ್ತಮ ಅವಕಾಶವೊಂದು ಲಭಿಸಿತ್ತು. ನಿಶು ಕುಮಾರ್ ಅವರನ್ನು ವಂಚಿಸಿ ಮುನ್ನುಗ್ಗಿದ ಮೆಂಡೊನ್ಸಾ ಚೆಂಡನ್ನು ಗುರಿಯತ್ತ ಒದ್ದರು. ಆದರೆ ಅದು ಕ್ರಾಸ್‌ ಬಾರ್‌ಗೆ ಬಡಿದು ಹೊರಗೆ ಹೋಯಿತು. 17ನೇ ನಿಮಿಷದಲ್ಲಿ ಮುನ್ನಡೆ ಗಳಿಸಲು ಮತ್ತೊಂದು ಅವಕಾಶ ತಂಡಕ್ಕೆ ಲಭಿಸಿತ್ತು. ಆದರೆ ಗೋಲು ಗಳಿಸಲು ಎದುರಾಳಿ ತಂಡದವರು ಬಿಡಲಿಲ್ಲ. ಆದರೆ 30ನೇ ನಿಮಿಷದಲ್ಲಿ ಗಾಮಾ ಅವರು ಚೆಂಡನ್ನು ಫ್ಲಿಕ್ ಮಾಡಿ ಆಂಗುಲೊ ಕಡೆಗೆ ಅಟ್ಟಿದರು. ಅವರು ಗೋಲ್‌ಕೀಪರ್ ಆಲ್ಬಿನೊ ಗೊಮೆಜ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಇದು ಆಂಗುಲೊ ಅವರ ಈ ಋತುವಿನ ನಾಲ್ಕನೇ ಗೋಲಾಗಿತ್ತು. ಸಮಬಲ ಸಾಧಿಸಲು ಕೇರಳ ಬ್ಲಾಸ್ಟರ್ಸ್‌ಸತತ ಪ್ರಯತ್ನ ನಡೆಸಿತು. ಆದರೆ ಗೋವಾ ಆಟಗಾರರು ಆಕ್ರಮಣವನ್ನು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT