ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ಎಲ್‌ ಆಟಗಾರನಿಗೆ ಸೋಂಕು: ಎಟಿಕೆಎಂಬಿ–ಒಎಫ್‌ಸಿ ಪಂದ್ಯ ಮುಂದೂಡಿಕೆ

ಕೇರಳ ಬ್ಲಾಸ್ಟರ್ಸ್‌–ಹೈದರಾಬಾದ್ ಎಫ್‌ಸಿ ಹಣಾಹಣಿ ಇಂದು
Last Updated 8 ಜನವರಿ 2022, 15:44 IST
ಅಕ್ಷರ ಗಾತ್ರ

ಮಡಗಾಂವ್‌, ಗೋವಾ: ಆಟಗಾರನಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡ ಕಾರಣ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯವನ್ನು ಮುಂದೂಡಲಾಗಿದೆ. ಶನಿವಾರ ಎರಡು ಪಂದ್ಯಗಳು ನಿಗದಿಯಾಗಿದ್ದವು. ಎಟಿಕೆ ಮೋಹನ್ ಬಾಗನ್ ತಂಡದ ಆಟಗಾರನಿಗೆ ಸೋಂಕು ಇರುವುದು ಖಚಿತವಾದ ಕಾರಣ ಒಡಿಶಾ ಎಫ್‌ಸಿ ನಡುವಿನ ಪಂದ್ಯ ನಡೆಸದೇ ಇರಲು ನಿರ್ಧರಿಸಲಾಯಿತು.

ಈ ವಿಷಯವನ್ನು ಮಧ್ಯಾಹ್ನ ಬಹಿರಂಗ ಮಾಡಿರುವ ಆಯೋಜಕರು ಪಂದ್ಯ ಯಾವಾಗ ನಡೆಸಬೇಕು ಎಂಬುದನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ತಂಡದ ಇತರ ಆಟಗಾರರು ಮತ್ತು ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ವೈದ್ಯಕೀಯ ತಜ್ಞರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ವಿವರಿಸಲಾಗಿದೆ.

ಹೈದರಾಬಾದ್‌–ಕೇರಳ ಬ್ಲಾಸ್ಟರ್ಸ್‌ ಮುಖಾಮುಖಿ

ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹೈದರಾಬಾದ್ ಎಫ್‌ಸಿ ಮತ್ತು ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಕನಸಿನಲ್ಲಿರುವ ಕೇರಳ ಬ್ಲಾಸ್ಟರ್ಸ್ ತಂಡಗಳು ಭಾನುವಾರ ವಾಸ್ಕೊದಲ್ಲಿ ಮುಖಾಮುಖಿಯಾಗಲಿವೆ. 9 ಪಂದ್ಯಗಳಿಂದ 14 ಪಾಯಿಂಟ್ ಗಳಿಸಿರುವ ಕೇರಳ ಬ್ಲಾಸ್ಟರ್ಸ್ ಹಿಂದಿನ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡ ಕಾರಣ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಅವಕಾಶ ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಅವಕಾಶದಲ್ಲಿ ಯಶಸ್ಸು ಗಳಿಸುವ ಹುಮ್ಮಸ್ಸಿನಲ್ಲಿದೆ.

ಕೇರಳ ಈ ವರೆಗೆ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಎಂಟು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ತಂಡಕ್ಕೆ ಅಡ್ರಿಯಾನ್ ಲೂನಾ ಆಧಾರ ಸ್ತಂಭವಾಗಿದ್ದಾರೆ. ಎಫ್‌ಸಿ ಗೋವಾ ಎದುರಿನ ಕಳೆದ ಪಂದ್ಯದಲ್ಲಿ ಡ್ರಾ ಸಾಧಿಸಲು ಅವರು ಪ್ರಮುಖ ಕಾರಣರಾಗಿದ್ದರು. ಒಂದು ಗೋಲು ಗಳಿಸಿದ್ದ ಲೂನಾ ಮತ್ತೊಂದು ಗೋಲಿಗೆ ಅಸಿಸ್ಟ್ ಮಾಡಿದ್ದರು.

ಹೈದರಾಬಾದ್ ಕೂಡ 8 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದು ತಂಡದ ರಕ್ಷಣಾ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಬಾರ್ತೊಲೊಮೆ ಒಗ್ಬೆಚೆ ತಂಡಕ್ಕೆ ಗೋಲುಗಳನ್ನು ತಂದುಕೊಡುತ್ತಿದ್ದಾರೆ. ಲೀಗ್‌ನಲ್ಲಿ ಈ ವರೆಗೆ ಒಟ್ಟು 44 ಗೋಲು ಗಳಿಸಿರುವ ಅವರು ಇನ್ನು ನಾಲ್ಕು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರೆ ಫೆರಾನ್ ಕೊರೊಮಿನಾಸ್ ಅವರ ದಾಖಲೆ ಸರಿಗಟ್ಟಲಿದ್ದಾರೆ.

ಹೈದರಾಬಾದ್ ಎಫ್‌ಸಿಯನ್ನು ಸೇರಿಕೊಂಡ ನಂತರ 9 ಪಂದ್ಯಗಳಲ್ಲಿ ಒಗ್ಬೆಚೆ 9 ಗೋಲು ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT