ಮಂಗಳವಾರ, ಡಿಸೆಂಬರ್ 7, 2021
24 °C
ಐಎಸ್‌ಎಲ್‌: ಎರಡು ಗೋಲು ಗಳಿಸಿದ ಜೇವಿಯರ್ ಹೆರ್ನಾಂಡಜ್; ಸುನಿಲ್ ಚೆಟ್ರಿ ಬಳಗಕ್ಕೆ 1–3 ಗೋಲುಗಳ ಸೋಲು

ISL | ಒಡಿಶಾಗೆ ಮಣಿದ ಬೆಂಗಳೂರು ಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಮೊದಲ ಪಂದ್ಯದಲ್ಲಿ ಅಮೋಘ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತು. ತಿಲಕ್‌ ಮೈದಾನ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ ಒಡಿಶಾ ಎಫ್‌ಸಿಗೆ 3–1ರಲ್ಲಿ ಮಣಿಯಿತು. 3 ಮತ್ತು 51ನೇ ನಿಮಿಷಗಳಲ್ಲಿ ಜೇವಿಯರ್ ಹೆರ್ನಾಂಡಜ್, 90ನೇ ನಿಮಿಷದಲ್ಲಿ ಅರಿದಾಯಿ ಸೌರೇಜ್ ತಂದುಕೊಟ್ಟ ಗೋಲುಗಳು ಒಡಿಶಾದ ಕೈ ಹಿಡಿದವು.

ಭರವಸೆಯಿಂದ ಕಣಕ್ಕೆ ಇಳಿದ ಬೆಂಗಳೂರು ಎಫ್‌ಸಿ ಎರಡನೇ ನಿಮಿಷದಲ್ಲೇ ಒಡಿಶಾಗೆ ಕಾರ್ನರ್ ಕಿಕ್‌ ಅವಕಾಶ ನೀಡಿತ್ತು. ಆದರೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಆಕ್ರಮಣಕಾರಿ ಆಟದೊಂದಿಗೆ ಕಣಕ್ಕೆ ಇಳಿದ ಒಡಿಶಾ ಎದುರು ಮೂರನೇ ನಿಮಿಷದಲ್ಲಿ ಬಿಎಫ್‌ಸಿಯ ರಕ್ಷಣಾ ವಿಭಾಗ ಮತ್ತು ಗೋಲ್ ಕೀಪರ್ ವೈಫಲ್ಯ ಕಂಡರು. ದೂರದಿಂದ ತೇಲಿ ಬಂದ ಚೆಂಡನ್ನು ಮುಂದೆ ನುಗ್ಗಿ ತಡೆದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ವಾಪಸ್ ಕಳುಹಿಸುವಷ್ಟರಲ್ಲಿ ಚೆಂಡು ಜೇವಿಯರ್ ಹೆರ್ನಾಂಡಜ್ ಬಳಿಗೆ ಸಾಗಿತು. ಅವರು ಮೋಹಕವಾಗಿ ಅದನ್ನು ಗುರಿಯತ್ತ ತಳ್ಳಿದರು.

21ನೇ ನಿಮಿಷದಲ್ಲಿ ಬಿಎಫ್‌ಸಿ ತಿರುಗೇಟು ನೀಡಿತು. ಅಲೆನ್ ಕೋಸ್ಟಾ ಅವರು ಹೆಡರ್ ಮೂಲಕ ಗೋಲು ಗಳಿಸಿ ಸಂಭ್ರಮಿಸಿದರು. ರೋಷನ್ ನೌರೆಮ್ ಎಡಗಾಲಿನಿಂದ ಒದ್ದು ಕಾರ್ನರ್‌ನಿಂದ ನೀಡಿದ ಚೆಂಡಿಗೆ ಅಲೆನ್ ನಿಖರವಾಗಿ ತಲೆಯೊಡ್ಡಿದರು.

ವಿರಾಮದ ನಂತರ ಒಡಿಶಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. 51ನೇ ನಿಮಿಷದಲ್ಲಿ ಜೇವಿಯರ್ ಹೆರ್ನಾಂಡಜ್ ಮತ್ತೊಮ್ಮೆ ಮಿಂಚಿದರು. ಫ್ರೀ ಕಿಕ್‌ ಅವಕಾಶದಲ್ಲಿ ಚೆಂಡನ್ನು ಮಿಂಚಿನ ವೇಗದಲ್ಲಿ ಗುರಿಯತ್ತ ಒದ್ದರು. ಗುರುಪ್ರೀತ್ ಸಿಂಗ್ ಸಂಧು ಅವರಿಗೆ ಅದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಪಂದ್ಯ ಮುಕ್ತಾಯದ ಹಂತದಲ್ಲಿದ್ದಾಗ ಲಾಲ್‌ರೆನ್ಜುವಾಲ ನೀಡಿದ ಪಾಸ್‌ನಲ್ಲಿ ಅರಿದಾಯಿ ಚೆಂಡನ್ನು ಗುರಿಮುಟ್ಟಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.

ನಾರ್ತ್ ಈಸ್ಟ್‌, ಕೇರಳಕ್ಕೆ ಜಯದ ನಿರೀಕ್ಷೆ

ಮಡಗಾಂವ್‌ನಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಮೊದಲ ಪಾಯಿಂಟ್ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ.

ಖಲೀದ್ ಜಮೈಲ್ ಮಾರ್ಗದರ್ಶನದ ನಾರ್ತ್‌ ಈಸ್ಟ್ ಯುನೈಟೆಡ್ ತಂಡ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ನಾಲ್ಕು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ಕೇರಳ ಬ್ಲಾಸ್ಟರ್ಸ್ ಕೂಡ 2–4ಲ್ಲಿ ಸೋತಿತ್ತು. ಹಾಲಿ ಚಾಂಪಿಯನ್ ಎಟಿಕೆ ಮೋಹನ್ ಬಾಗನ್‌ಗೆ ಅದು ಮಣಿದಿತ್ತು. 

ಈ ಋತುವಿನ ಆರಂಭದಲ್ಲಿ ಕೇರಳ ಬ್ಲಾಸ್ಟರ್ಸ್ ಉತ್ತಮ ಸಾಮರ್ಥ್ಯ ತೋರಿ ಭರವಸೆ ಮೂಡಿಸಿತ್ತು. ಆದರೆ ವೃತ್ತಿಪರ ಆಟವಾಡಿದ ಎಟಿಕೆ ಮೋಹನ್ ಬಾಗನ್ ಎದುರು ನಿರುತ್ತರವಾಗಿತ್ತು. ಲೋಪಗಳನ್ನು ಸರಿಪಡಿಸಿಕೊಂಡು ಚೇತರಿಸಿಕೊಳ್ಳಲು ಗುರುವಾರದ ಪಂದ್ಯ ತಂಡಕ್ಕೆ ನೆರವಾಗಲಿದೆ. 

ನಾರ್ತ್ ಈಸ್ಟ್ ಬಳಗ ಬೆಂಗಳೂರು ಎಫ್‌ಸಿ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿ ಸೋಲಿಗೆ ಶರಣಾಗಿತ್ತು. ಮೊದಲಾರ್ಧದಲ್ಲಿ ಎರಡು ಬಾರಿ ತಿರುಗೇಟು ನೀಡುವ ಮೂಲಕ ಸಮಬಲ ಸಾಧಿಸಿ ಮುನ್ನುಗ್ಗಿತ್ತು. ಆದರೆ ಅನುಭವದ ಕೊರತೆಯಿಂದಾಗಿ ದ್ವಿತೀಯಾರ್ಧದಲ್ಲಿ ಹಿಡಿತ ಬಿಗಿಮಾಡಲು ಆಗಲಿಲ್ಲ.   

ಬ್ಲಾಸ್ಟರ್ಸ್ ತಂಡ ರಕ್ಷಣಾ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತ್ತು. ಮೊದಲಾರ್ಧದಲ್ಲಿ ಕಳಪೆ ಆಟವಾಡಿದ್ದ ತಂಡ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ಕಾರಣ ಸೋಲಿನ ಅಂತರ ಕಡಿಮೆಯಾಗಿತ್ತು. ಕಳೆದ ಬಾರಿ ಮುಖಾಮುಖಿಯಾದಾಗ ನಾರ್ತ್ ಈಸ್ಟ್ 2–0ಯಿಂದ ಕೇರಳವನ್ನು ಮಣಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು