ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌: ಬಿಎಫ್‌ಸಿಗೆ ಅಗ್ರಪಟ್ಟದ ಕನಸು

ಇಂದು ಕಂಠೀರವ ಅಂಗಳದಲ್ಲಿ ಮುಂಬೈ ಸಿಟಿ ಎದುರು ಹೋರಾಟ
Last Updated 14 ಡಿಸೆಂಬರ್ 2019, 22:12 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಸೋಲರಿಯದೆ ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ), ಈಗ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಪಟ್ಟಕ್ಕೇರುವ ಕನಸು ಕಾಣುತ್ತಿದೆ.

ತವರಿನ ಅಭಿಮಾನಿಗಳ ಎದುರೇ ಈ ಕನಸು ಸಾಕಾರಗೊಳಿಸಿಕೊಳ್ಳುವ ಅವಕಾಶ ಬಿಎಫ್‌ಸಿಗೆ ದೊರೆತಿದ್ದು, ಅದಕ್ಕಾಗಿ ಸುನಿಲ್‌ ಚೆಟ್ರಿ ಬಳಗ ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪೈಪೋಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಬೇಕಿದೆ.

ಲೀಗ್‌ನಲ್ಲಿ ಪಾಲ್ಗೊಂಡಿರುವ 10 ತಂಡಗಳ ಪೈಕಿ ಒಂಬತ್ತು ತಂಡಗಳು ಈ ಬಾರಿ ಸೋಲಿನ ಕಹಿ ಅನುಭವಿಸಿವೆ. ಆದರೆ ಹಾಲಿ ಚಾಂಪಿಯನ್‌ ಬಿಎಫ್‌ಸಿ ಮಾತ್ರ ಅಜೇಯವಾಗಿ ಉಳಿದಿದೆ. ಏಳು ಪಂದ್ಯಗಳನ್ನು ಆಡಿರುವ ಚೆಟ್ರಿ ಪಡೆ ಮೂರರಲ್ಲಿ ಗೆದ್ದು, ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 13 ಪಾಯಿಂಟ್ಸ್‌ ಕಲೆಹಾಕಿರುವ ಬೆಂಗಳೂರಿನ ತಂಡ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಈ ಬಾರಿ ಬಿಎಫ್‌ಸಿ ತಂಡ ಮುಂಚೂಣಿ ವಿಭಾಗದಲ್ಲಿ ಸೊರಗಿದಂತೆ ಕಾಣುತ್ತಿದೆ. ಇದುವರೆಗೂ ತಂಡ ಏಳು ಗೋಲುಗಳನ್ನಷ್ಟೇ ಗಳಿಸಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.

ಬೆಂಗಳೂರಿನ ತಂಡವು ನಾಯಕ ಚೆಟ್ರಿ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಹಿಂದಿನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ಈ ಬಾರಿ ಬಿಎಫ್‌ಸಿ ಪರ ಅತೀ ಹೆಚ್ಚು ಗೋಲು ಗಳಿಸಿರುವ (3) ಚೆಟ್ರಿ, ಮುಂಬೈ ವಿರುದ್ಧವೂ ಮೋಡಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಮುಂಬೈ ಎದುರು ಈ ಹಿಂದೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಅವರು ಬಿಎಫ್‌ಸಿಗೆ ಗೆಲುವು ತಂದುಕೊಟ್ಟಿದ್ದರು.

ಎರಿಕ್‌ ಪಾರ್ಟಲು, ಉದಾಂತ್‌ ಸಿಂಗ್‌, ಥಾಂಗ್‌ಕೊಸಿಯೆಮ್‌ ಹಾವೊಕಿಪ್‌ ಮತ್ತು ವುವಾನ್‌ ಆ್ಯಂಟೋನಿಯೊ ಗೊಂಜಾಲೆಜ್‌ ಫರ್ನಾಂಡಿಸ್‌ ಅವರ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಇವರು ತಮ್ಮ ಜವಾಬ್ದಾರಿಯನ್ನು ಅರಿತು ಇನ್ನಷ್ಟು ಪರಿಣಾಮಕಾರಿಯಾಗಿ ಆಡಿದರೆ ಚೆಟ್ರಿ ಮೇಲಿನ ಒತ್ತಡ ತುಸು ಕಡಿಮೆಯಾಗಬಹುದು.

ರಕ್ಷಣಾ ವಿಭಾಗದಲ್ಲಿ ಬೆಂಗಳೂರಿನ ತಂಡ ಬಲಿಷ್ಠವಾಗಿದೆ. ಈ ಬಾರಿ ತಂಡವು ಎದುರಾಳಿಗಳಿಗೆ ಕೇವಲ ಎರಡು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಜುನಾನ್‌, ರಾಹುಲ್‌ ಭೆಕೆ, ರಿನೊ ಆ್ಯಂಟೊ ಮತ್ತು ಅಲ್ಬರ್ಟ್‌ ಸೆರಾನ್‌ ಅವರು ಹಿಂದಿನ ಪಂದ್ಯಗಳಲ್ಲಿ ಎದುರಾಳಿ ಆಟಗಾರರು ರಕ್ಷಣಾ ಕೋಟೆಯ ಸನಿಹಕ್ಕೆ ಸುಳಿಯದಂತೆ ಬಲಿಷ್ಠ ವ್ಯೂಹ ರಚಿಸಿದ್ದರು. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಕೂಡ ಅಮೋಘ ಸಾಮರ್ಥ್ಯ ತೋರಿ ಅಭಿಮಾನಿಗಳ ಮನ ಗೆದ್ದಿದ್ದರು. ಇವರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸುವ ಬಹುದೊಡ್ಡ ಸವಾಲು ಈಗ ಮುಂಬೈ ಆಟಗಾರರ ಎದುರಿಗಿದೆ.

ಈ ಬಾರಿ ಆಡಿರುವ ಏಳು ಪಂದ್ಯಗಳ ಪೈಕಿ ಒಂದರಲ್ಲಷ್ಟೇ ಜಯಿಸಿರುವ ಈ ತಂಡ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಪೋರ್ಚುಗಲ್‌ನ ಜೊರ್ಗೆ ಕೋಸ್ಟಾ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಈ ತಂಡ ಈ ಸಲ ತವರಿನ ಹೊರಗೆ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ಹೀಗಾಗಿ ಭಾನುವಾರ ರೋಚಕ ಹಣಾಹಣಿ ಏರ್ಪಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT