ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಶೆಡ್‌ಪುರ, ನಾರ್ಥ್‌ ಈಸ್ಟ್ ಯುನೈಟೆಡ್‌

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೋವಾ ಓಟಕ್ಕೆ ತಡೆ ಹಾಕುವ ಬಯಕೆಯಲ್ಲಿ ಎಟಿಕೆಎಂಬಿ
Last Updated 16 ಜನವರಿ 2021, 15:12 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಸತತ ಸೋಲಿನಿಂದ ಕಂಗೆಟ್ಟಿರುವ ಜೆಮ್ಶೆಡ್‌ಪುರ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದ್ದು ಎರಡೂ ತಂಡಗಳು ಪ್ಲೇ ಆಫ್ ಹಂತದ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಗೋವಾ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಸೆಣಸಲಿವೆ.

ಆರಂಭದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಜೆಮ್ಶೆಡ್‌ಪುರ ಎಫ್‌ಸಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿತ್ತು. ನಂತರ ಕುಸಿತ ಕಂಡಿತ್ತು. ಆದರೂ ಯಾವುದೇ ಸಂದರ್ಭದಲ್ಲಿ ಪುಟಿದೇಳುವ ಗುಣ ಆ ತಂಡಕ್ಕೆ ಇದೆ. ಇದನ್ನು ಕೋಚ್ ಒವೆನ್ ಕೊಯ್ಲೆ ಕೂಡ ಒಪ್ಪಿಕೊಂಡಿದ್ದಾರೆ.ಜೆಮ್ಶೆಡ್‌ಪುರ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾರ್ತ್‌ ಈಸ್ಟ್‌ಗಿಂತ ಮೇಲೆ ಇದೆ. ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ನಾರ್ತ್‌ ಈಸ್ಟ್ ತಂಡ ಈ ಪಂದ್ಯದಲ್ಲಿ ಯಾವ ರೀತಿಯ ಸಾಮರ್ಥ್ಯ ತೋರುತ್ತಿದೆ ಎಂಬ ಕುತೂಹಲ ಫುಟ್‌ಬಾಲ್ ವಲಯದಲ್ಲಿದೆ.

ನಾರ್ತ್‌ ಈಸ್ಟ್ ಕಳೆದ ಏಳು ಪಂದ್ಯಗಳಲ್ಲಿ ಜಯ ಗಳಿಸಲಿಲ್ಲ. ಕೋಚ್ ಜೆರಾರ್ಡ್ ನೂಸ್ ತಂಡವನ್ನು ತೊರೆದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೆರಾರ್ಡ್‌ ಬದಲಿಗೆ ಖಲೀದ್ ಅಹಮ್ಮದ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಮ್ಶೆಡ್‌ಪುರ ತಂಡ ನಾರ್ತ್‌ ಈಸ್ಟ್ ವಿರುದ್ಧ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಲಿಲ್ಲ. ಆದರೂ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಕೊಯ್ಲೆ ಅಭಿಪ್ರಾಯಪಟ್ಟಿದ್ದಾರೆ.

‘ಎದುರಾಳಿ ತಂಡದ ಫಾರ್ಮ್ ಬಗ್ಗೆ ಮಾತನಾಡುವುದು ಸರಿಯಲ್ಲ. ಹಿಂದಿನ ಪಂದ್ಯದಲ್ಲಿ ಆ ತಂಡ ಉತ್ತಮವಾಗಿಯೇ ಆಡಿದೆ. ನಾರ್ತ್‌ ಈಸ್ಟ್ ಅಪಾಯಕಾರಿ ತಂಡವಾಗಿದ್ದು ಪ್ರತಿ ಬಾರಿ ಎದುರಾಳಿಗಳಿಗೆ ವಿಭಿನ್ನ ರೀತಿಯ ಸವಾಲು ಒಡ್ಡುತ್ತಿದೆ. ನಮ್ಮ ತಂಡದ ಮಿಡ್‌ಫೀಲ್ಡರ್ ಅಲೆಕ್ಸಾಂಡ್ರೆ ಲಿಮಾ ಅಮಾನತುಗೊಂಡಿದ್ದು ಅವರ ಬದಲಿಗೆ ಸ್ಟೀಫನ್ ಹಾರ್ಟ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ’ ಎಂದು ಕೊಯ್ಲೆ ಹೇಳಿದ್ದಾರೆ.

ಗೋವಾ ಓಟಕ್ಕೆ ಬ್ರೇಕ್ ಹಾಕುವುದೇ ಎಟಿಕೆಎಂಬಿ?

ಫತೋರ್ಡ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಉತ್ತಮ ಆಕ್ರಮಣಕಾರಿ ವಿಭಾಗವನ್ನು ಹೊಂದಿರುವ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ತಂಡಗಳ ನಡುವಿನ ಈ ಪಂದ್ಯ ಕುತೂಹಲ ಕೆರಳಿಸಿದೆ.

ಓಪನ್ ಪ್ಲೇಯಲ್ಲಿ ಗೋವಾ 13 ಗೋಲುಗಳನ್ನು ಗಳಿಸಿದ್ದರೆ ಎಟಿಕೆಎಂಬಿ ಗಳಿಸಿರುವುದು ಕೇವಲ 4 ಗೋಲು.ಜುವಾನ್ ಫೆರಾಂಡೊ ಕೋಚ್ ಆಗಿರುವ ಗೋವಾ ಈ ಬಾರಿ ಉತ್ತಮ ಆರಂಭ ಕಂಡಿರಲಿಲ್ಲ. ನಂತರ ಚೇತರಿಕೆ ಕಂಡಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿ ಮುನ್ನುಗ್ಗಿದೆ. ಈ ಪೈಕಿ ಮೂರರಲ್ಲಿ ಜಯ ಕಂಡಿತ್ತು. ಕಳೆದ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT