ಬುಧವಾರ, ಆಗಸ್ಟ್ 4, 2021
21 °C

ಜಪಾನ್‌ನಲ್ಲಿ ಜೆ–ಲೀಗ್‌ ಫುಟ್‌ಬಾಲ್‌ ಟೂರ್ನಿ ಪುನರಾರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಪಾನ್: ನಾಲ್ಕು ತಿಂಗಳ ನಂತರ ಜಪಾನ್‌ನ ಪ್ರಮುಖ ಫುಟ್‌ಬಾಲ್ ಟೂರ್ನಿ ಜೆ–ಲೀಗ್‌ ಶನಿವಾರ ಪುನರಾರಂಭಗೊಂಡಿತು. ಆದರೆ ಪ್ರೇಕ್ಷಕರ ಗ್ಯಾಲರಿಗಳು ಖಾಲಿಯಾಗಿದ್ದವು.

ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳು ಜಪಾನ್‌ನಲ್ಲಿ ಸಡಿಲಿಕೆಯಾಗುತ್ತಿವೆ. ಅರ್ಧಕ್ಕೇ ನಿಂತಿದ್ದ ‘ಪ್ರೊಫೆಷನಲ್ ಬೇಸ್‌ಬಾಲ್‌’ ಟೂರ್ನಿ ಜೂನ್ 19ರಂದು ಆರಂಭಗೊಂಡಿತ್ತು. ಇದೀಗ ಫುಟ್‌ಬಾಲ್ ಕ್ರೀಡೆಯೂ ಮರುಚಾಲನೆ ಪಡೆಯಿತು.

ಜೆ–ಲೀಗ್ ಪಂದ್ಯಗಳ ಆರಂಭಕ್ಕೂ ಮೊದಲು ಆಟಗಾರರು ಮತ್ತು ಕೋಚ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್ –19 ಸೋಂಕು ಇಲ್ಲ ಎಂದು ದೃಢಪಟ್ಟ ನಂತರ ಅಂಗಣಕ್ಕೆ ಇಳಿಯಲು ಅವಕಾಶ ನೀಡಲಾಯಿತು. ಶನಿವಾರ ಒಂಬತ್ತು ಪಂದ್ಯಗಳು ನಡೆದವು.

‘ಪರಿಸ್ಥಿತಿ ಸುಧಾರಣೆಗೊಂಡು ಕ್ರೀಡಾ ಕ್ಷೇತ್ರ ಚುರುಕು ಪಡೆದುಕೊಳ್ಳಲಿದೆ. ಆಗ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ’ ಎಂದು ವಿಸೆಲ್ ಕೋಬೆ ತಂಡದಲ್ಲಿ ಆಡುತ್ತಿರುವ ಬಾರ್ಸಿಲೋನಾದ ಆ್ಯಂಡ್ರೆಸ್ ಇನೆಸ್ತಾ ತಿಳಿಸಿರುವುದಾಗಿ ಸ್ಥಳೀಯ ಪತ್ರಿಕೆ ಸಾಂಕಿ ಶಿಂಬುಮ್ ವರದಿ ಮಾಡಿದೆ.

ಫೆಬ್ರುವರಿಯಲ್ಲಿ ಲೀಗ್ ಆರಂಭಗೊಂಡಿತ್ತು. ಆದರೆ ಒಂದು ವಾರದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಜುಲೈ 10ರಂದು ಪಂದ್ಯಗಳ ನೇರ ಪ್ರಸಾರ ಇರುತ್ತದೆ. ಅಂದಿನಿಂದ ಕ್ರೀಡಾಂಗಣದ ಸಾಮರ್ಥ್ಯದ ಶೇಕಡಾ 50ರಷ್ಟು ಮಂದಿಯನ್ನು ಅಥವಾ ಐದು ಸಾವಿರ ಜನರನ್ನು ಒಳಗೆ ಬಿಡಲಾಗುವುದು ಎಂದು ತಿಳಿಸಲಾಗಿದೆ.

ಕ್ರೀಡಾಂಗಣದೊಳಗೆ ಮುಖಗವಸು ಧರಿಸುವುದು ಮತ್ತು ಕೈಗಳನ್ನು ಆಗಾಗ ತೊಳೆಯುವುದು ಕಡ್ಡಾಯ. ಪಂದ್ಯದ ವೇಳೆ ಸಂಭ್ರಮದಿಂದ ಕೂಗಾಡುವುದನ್ನು ನಿರ್ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು