ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಂಪಿಯನ್ಸ್ ಲೀಗ್: ಬೆನ್ಜೆಮಾ ಮೇಲೆ ಕಣ್ಣು’

ರಿಯಲ್ ಮ್ಯಾಡ್ರಿಡ್ ಗೆಲ್ಲುವ ನಿರೀಕ್ಷೆ: ಮಾಜಿ ಫುಟ್‌ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅಭಿಪ್ರಾಯ
Last Updated 25 ಮೇ 2022, 11:38 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಯುಯೆಫಾ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಕರೀಂ ಬೆನ್ಜೆಮಾ ಮಿಂಚುವ ಸಾಧ್ಯತೆ ಇದೆ ಎಂದು ಭಾರತ ತಂಡದ ಮಾಜಿ ಸ್ಟ್ರೈಕ್ ಬೈಚುಂಗ್ ಭುಟಿಯಾ ಅಭಿಪ್ರಾಯಪಟ್ಟರು.

ಪ್ಯಾರಿಸ್‌ನಲ್ಲಿರುವ ಫ್ರಾನ್ಸ್ ರಾಷ್ಟ್ರೀಯ ಕ್ರೀಡಾಂಗಣ ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ ಇದೇ 29ರಂದು ಫೈನಲ್ ಪಂದ್ಯ ನಡೆಯಲಿದ್ದು ರಿಯಲ್ ಮ್ಯಾಡ್ರಿಡ್ ಮ್ಯಾಡ್ರಿಡ್ ಮತ್ತು ಲಿವರ್‌ಪೂಲ್ ತಂಡಗಳು ಮುಖಾಮುಖಿಯಾಗಲಿವೆ.

ಪಂದ್ಯದ ನೇರ ಪ್ರಸಾರ ಮಾಡುವ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಬುಧವಾರ ಆಯೋಜಿಸಿದ್ದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಿಯಲ್ ಮ್ಯಾಡ್ರಿಡ್‌ನ ಸ್ಟ್ರೈಕರ್ ಕರೀಂ ಬೆನ್ಜೆಮಾ ಅವರು ಟೂರ್ನಿಯುದ್ದಕ್ಕೂ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹೀಗಾಗಿ ಫೈನಲ್‌ನಲ್ಲಿ ಅವರ ಮೇಲೆ ಎಲ್ಲರೂ ಕಣ್ಣಿಡುವರು.ಫುಟ್‌ಬಾಲ್ ಪ್ರೇಮಿಗಳು ಗೆಲುವಿನ ಗೋಲು ಅವರಿಂದಲೇ ಬರುವ ನಿರೀಕ್ಷೆಯಲ್ಲಿದ್ದಾರೆ ಎಂದು ಭುಟಿಯಾ ಹೇಳಿದರು.

ಬೆನ್ಜೆಮಾ ಅವರ ಪುನರಾಗಮನ ಭರ್ಜರಿಯಾಗಿದೆ. ರಿಯಲ್ ಮ್ಯಾಡ್ರಿಡ್‌ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ. ಅವರು ಫ್ರಾನ್ಸ್ ರಾಷ್ಟ್ರೀಯ ತಂಡಕ್ಕೂ ಮರಳುವ ಸಾಧ್ಯತೆ ಕಾಣುತ್ತಿದೆ ಎಂದು ಭುಟಿಯಾ ವಿಶ್ವಾಸ ವ್ಯಕ್ತಪಡಿಸಿದರು.

ರಿಯಲ್ ಮ್ಯಾಡ್ರಿಡ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆ ತಂಡದವರಿಗೆ ಕೊನೆಯ ದೇಶಿ ಪಂದ್ಯ ಮತ್ತು ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದ ನಡುವೆ ತುಂಬ ಸಮಯ ಸಿಕ್ಕಿದ್ದು ವಿಶ್ರಾಂತಿಗೆ ಅವಕಾಶವಾಗಿದೆ. ಲಿವರ್ ಪೂಲ್ ಸತತ ಪಂದ್ಯಗಳನ್ನು ಆಡಿ ಬಳಲಿದೆ. ಫೈನಲ್ ಸಮೀಪಿಸುತ್ತಿದ್ದಂತೆ ಪ್ರಮುಖ ಆಟಗಾರರಾದ ಮೊಹಮ್ಮದ್ ಸಲಾ, ಟಿಯಾಗಿ ಮತ್ತಿತರರು ಗಾಯಗೊಂಡಿರುವುದರಿಂದ ತಂಡಕ್ಕೆ ಆಘಾತವಾಗಿದೆ. ತಂಡ ಕೊನೆಯ ಲೀಗ್ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ ಎಂದು ಅವರು ಹೇಳಿದರು.

ಎರಡೂ ತಂಡಗಳ ಆಕ್ರಮಣಕಾರಿ ಅಟಕ್ಕೆ ಹೆಸರುವಾಸಿ ಆಗಿರುವುದರಿಂದ ಫೈನಲ್ ಪಂದ್ಯ ರೋಚಕವಾಗುವ ಸಾಧ್ಯತೆ ಇದೆ. ಬೆನ್ಜೆಮಾ ಅವರೊಂದಿಗೆ ಲಿವರ್ ಪೂಲ್ ತಂಡದ ಸಾಡಿಯೊ ಮಾನೆ ಮಿಂಚುವ ಸಾಧ್ಯತೆ ಇದೆ. ರಿಯಲ್ ಮ್ಯಾಡ್ರಿಡ್‌ನಲ್ಲಿ ಅನುಭವಿಗಳು ಮತ್ತು ಯುವ ಆಟಗಾರರ ಸಮ್ಮಿಲನವಿದೆ. ಅದು ಕೂಡ ಫೈನಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT