ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಲಿಗಾ ಫುಟ್‌ಬಾಲ್‌: ಅಗ್ರಸ್ಥಾನಕ್ಕೆ ರಿಯಲ್‌ ಮ್ಯಾಡ್ರಿಡ್‌

ರಿಯಲ್‌ ಸೋಷಿಡಾಡ್‌‌ ಎದುರು ಗೆಲುವು
Last Updated 22 ಜೂನ್ 2020, 9:09 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಸರ್ಜಿಯೊ ರಾಮೊಸ್‌ ಹಾಗೂ ಕರೀಂ ಬೆಂಜೆಮಾ ಕಾಲ್ಚಳಕದಲ್ಲಿ ಅರಳಿದ ಗೋಲುಗಳ ನೆರವಿನಿಂದ ರಿಯಲ್‌ ಮ್ಯಾಡ್ರಿಡ್‌ ತಂಡವು ಲಾ ಲಿಗಾ ಫುಟ್‌ಬಾಲ್ ಟೂರ್ನಿಯ‌ ಪಂದ್ಯದಲ್ಲಿ ಗೆದ್ದಿದೆ.

ಭಾನುವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಮ್ಯಾಡ್ರಿಡ್‌ 2–1 ಗೋಲುಗಳಿಂದರಿಯಲ್‌ ಸೋಷಿಡಾಡ್‌‌ ತಂಡವನ್ನು ಪರಾಭವಗೊಳಿಸಿತು.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 65ಕ್ಕೆ ಹೆಚ್ಚಿಸಿಕೊಂಡಿರುವ ಮ್ಯಾಡ್ರಿಡ್‌ ತಂಡವು ಎಫ್‌ಸಿ ಬಾರ್ಸಿಲೋನಾ ತಂಡವನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 30 ಪಂದ್ಯಗಳನ್ನು ಆಡಿರುವ ಈ ತಂಡವು 19ರಲ್ಲಿ ಗೆದ್ದಿದ್ದು, ಎಂಟರಲ್ಲಿ ಡ್ರಾ ಮಾಡಿಕೊಂಡಿದೆ.

ಉಭಯ ತಂಡಗಳು ಮೊದಲಾರ್ಧದಲ್ಲಿ ಸಮಬಲದಿಂದ ಸೆಣಸಿದವು. ಹೀಗಾಗಿ ಯಾರಿಗೂ ಗೋಲು ದಾಖಲಿಸಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಮ್ಯಾಡ್ರಿಡ್‌ ತಂಡದ ಆಟ ರಂಗೇರಿತು. 50ನೇ ನಿಮಿಷದಲ್ಲಿ ರಾಮೊಸ್‌ ಅವರು ಪೆನಾಲ್ಟಿ ಕಿಕ್‌ ಮೂಲಕ ಚೆಂಡನ್ನು ಗುರಿ ಸೇರಿಸಿದರು. ನಂತರದ 20 ನಿಮಿಷಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

70ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಬೆಂಜೆಮಾ, ಮ್ಯಾಡ್ರಿಡ್‌ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಇದರೊಂದಿಗೆ ಅವರು ಲೀಗ್‌ನಲ್ಲಿ ಒಟ್ಟು 17 ಗೋಲುಗಳನ್ನು ದಾಖಲಿಸಿ ಅತಿ ಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರು. ಬಾರ್ಸಿಲೋನಾ ತಂಡದ ಲಯೊನೆಲ್‌ ಮೆಸ್ಸಿ (21 ಗೋಲು) ಅಗ್ರಸ್ಥಾನದಲ್ಲಿದ್ದಾರೆ.

ಸೋಷಿಡಾಡ್‌‌ ತಂಡದ ಮೈಕಲ್‌ ಮೆರಿನೊ 83ನೇ ನಿಮಿಷದಲ್ಲಿ ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT