ಶನಿವಾರ, ಫೆಬ್ರವರಿ 4, 2023
28 °C
ಸೌದಿ ಅರೇಬಿಯಾಕ್ಕೆ ಸೋಲಿನ ಕಹಿ; ಯೊಟ್ ಜಿಲಿನಸ್ಕಿ ಗೋಲು

ರಾಬರ್ಟ್ ಕಾಲ್ಚಳಕ; ನಾಕೌಟ್ ಸನಿಹ ಪೋಲೆಂಡ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಅಲ್ ರೆಯಾನ್, ಕತಾರ್: ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮೊದಲ ಗೋಲು ದಾಖಲಿಸಿದ ರಾಬರ್ಟ್‌ ಲೆವಾಂಡೊವಸ್ಕಿ ನೆರವಿನಿಂದ ‍ಪೋಲೆಂಡ್ ಸೌದಿ ಅರೇಬಿಯಾ ಎದುರು ಗೆದ್ದಿತು. ಇದರೊಂದಿಗೆ ನಾಕೌಟ್ ಹಂತದ ಸನಿಹಕ್ಕೆ ಸಾಗಿತು. 

ಶನಿವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ  ಪೋಲೆಂಡ್ 2–0ಯಿಂದ ಸೌದಿಗೆ ಸೋಲುಣಿಸಿತು. ತನ್ನ ಮೊದಲ ಪಂದ್ಯದಲ್ಲಿ ಲಯೊನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡವನ್ನು ಮಣಿಸಿದ್ದ ಸೌದಿ ಆತ್ಮವಿಶ್ವಾಸದ ಆಗಸದಲ್ಲಿತ್ತು. ಈ ಪಂದ್ಯದಲ್ಲಿಯೂ  ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿತ್ತು. ಆದರೆ, ಪೋಲೆಂಡ್ ಆಟಗಾರರು ಯಾವುದೇ ಹಂತದಲ್ಲಿಯೂ ಹಿಡಿತ ಸಡಿಲು ಮಾಡಲಿಲ್ಲ. 

ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ಎದುರು ಡ್ರಾ ಮಾಡಿಕೊಂಡಿದ್ದ ಪೋಲೆಂಡ್ ತಂಡಕ್ಕೆ ಸೌದಿ ಅರೇಬಿಯಾ ಎದುರಿನ ಜಯವು ಮಹತ್ವದ್ದಾಗಿದೆ. ತಂಡದ ಖಾತೆಯಲ್ಲಿ ಈಗ ಒಟ್ಟು ನಾಲ್ಕು ಅಂಕಗಳಿವೆ. ತನ್ನ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ. ಅದರಲ್ಲಿ ಡ್ರಾ ಸಾಧಿಸಿದರೂ ಪೋಲೆಂಡ್ ತಂಡವು ನಾಕೌಟ್ ಹಂತ ತಲುಪುವುದು.  

ಪಂದ್ಯದ 39ನೇ ನಿಮಿಷ ಪಿಯೊಟ್ ಜಿಲಿನಸ್ಕಿ ಮೊದಲ ಗೋಲು ಹೊಡೆದರು. ಇದರೊಂದಿಗೆ ತಂಡವು ಮೊದಲಾರ್ಧದಲ್ಲಿ 1–0 ಮುನ್ನಡೆ ಗಳಿಸಿತು.

ಎರಡನೇ ಅವಧಿಯಲ್ಲಿ  ಸೌದಿ ಆಟಗಾರರು ಒಂದಿಷ್ಟು ಪ್ರತಿರೋಧ ಒಡ್ಡಿದರು. ಚುರುಕಾದ ಪಾಸ್‌ಗಳನ್ನು ನೀಡಿದರು. ಸುಮಾರು ಐದು ಬಾರಿ ಗೋಲ್‌ಪೋಸ್ಟ್ ಸನಿಹ ಹೋಗಿ ವಿಫಲರಾದರು. ಪೋಲೆಂಡ್ ರಕ್ಷಣಾ ಆಟಗಾರರು ‘ಉಕ್ಕಿನ ಗೋಡೆ’ಯಂತೆ ಅಡ್ಡ ನಿಂತಿದ್ದರಿಂದ ಸೌದಿ ಆಟಗಾರರ ಪ್ರಯತ್ನಗಳು ಫಲಗೊಡಲಿಲ್ಲ. 

ಸೌದಿ ಆಟಗಾರರ ಒತ್ತಡ ಹೆಚ್ಚುತ್ತಲೇ ಇತ್ತು. ಉಭಯ ತಂಡಗಳ ತುರುಸಿನ ಪೈಪೋಟಿ ನಡೆದಿತ್ತು. 82ನೇ ನಿಮಿಷದಲ್ಲಿ   ಲೆವಾಂಡೊವಸ್ಕಿ ಕಾಲ್ಚಳಕ ಮೆರೆದರು. ತಮ್ಮ ಮೊಣಕಾಲಿನೆತ್ತರಕ್ಕೆ ಬಂದ ಚೆಂಡನ್ನು ಕಿಕ್ ಮಾಡಿ ಗುರಿ ಸೇರಿಸಿದರು. 

ಈ ಹಿಂದಿನ ವಿಶ್ವಕಪ್ ಟೂರ್ನಿಗಳೂ ಸೇರಿದಂತೆ  ಲೆವಾಂಡೊವಸ್ಕಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ಧಾರೆ. ಆದರೆ ಗೋಲು ಗಳಿಸಿರಲಿಲ್ಲ. ಅವರ ಆಸೆ ಇಲ್ಲಿ ಈಡೇರಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು