ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್‌: ಬಿಎಫ್‌ಸಿಗೆ ಮಾಲ್ಡಿವ್ಸ್‌ನಿಂದ ಗೇಟ್‌ಪಾಸ್‌

ಮಾಲಿಯಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆರೋಪ: ‘ಡಿ’ ಗುಂಪಿನ ಪಂದ್ಯ ಮುಂದೂಡಿಕೆ
Last Updated 9 ಮೇ 2021, 11:10 IST
ಅಕ್ಷರ ಗಾತ್ರ

ಮಾಲಿ, ಮಾಲ್ಡಿವ್ಸ್‌: ಎಎಫ್‌ಸಿ ಕಪ್ ಪ್ಲೇ ಆಫ್ ಹಂತದ ಪಂದ್ಯ ಆಡಲು ಇಲ್ಲಿಗೆ ಬಂದಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವನ್ನು ವಾಪಸ್ ತೆರಳುವಂತೆ ಮಾಲ್ಡಿವ್ಸ್‌ ಕ್ರೀಡಾ ಸಚಿವರು ಸೂಚಿಸಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸದ ಕಾರಣ ತಂಡದ ಪಂದ್ಯಕ್ಕೆ ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಡಿ’ ಗುಂಪಿನ ಪಂದ್ಯಗಳನ್ನು ಮುಂದೂಡಿರುವುದಾಗಿ ಎಎಫ್‌ಸಿ ತಿಳಿಸಿದೆ.

ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿಯ ಪಂದ್ಯ ಸ್ಥಳೀಯ ಈಗಲ್ಸ್‌ ಎಫ್‌ಸಿ ಎದುರು ಇದೇ 11ರಂದು ನಿಗದಿಯಾಗಿತ್ತು. ತಂಡ ಯಾವ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ತಂಡದ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕ್ರೀಡಾ ಸಚಿವ ಅಹಮ್ಮದ್ ಮಹಲೂಫರ್‌ ಹೇಳಿದ್ದಾರೆ. ಬಿಎಫ್‌ಸಿಯ ಲೋಪ ಕ್ಷಮಾರ್ಹ ಎಂದು ಮಾಲೀಕ ಪಾರ್ಥ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.

ಬಿಎಫ್‌ಸಿಯ ಕೆಲವು ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮಾಲಿಯ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಒಪ್ಪಿಕೊಂಡಿರುವ ಪಾರ್ಥ ಜಿಂದಾಲ್ ಮೂವರು ವಿದೇಶಿ ಆಟಗಾರರಿಂದ ಪ್ರಮಾದವಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕೋವಿಡ್ ಹೆಚ್ಚುತ್ತಿರುವ ಕಾರಣ ಭಾರತದ ಪ್ರವಾಸಿಗರಿಗೆ ಮಾಲ್ಡಿವ್ಸ್‌ನಲ್ಲಿ ನಿಷೇಧ ಹೇರಲಾಗಿದೆ. ಆದರೂ ಪಂದ್ಯಕ್ಕಾಗಿ ಬಿಎಫ್‌ಸಿ ಆಟಗಾರರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ತಂಡ ಶುಕ್ರವಾರ ಮಾಲ್ಡಿವ್ಸ್‌ ತಲುಪಿತ್ತು. ನಿಯಮ ಉಲ್ಲಂಘಿಸಿದ ಆಟಗಾರರ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣ ಮಾಲ್ಡಿವ್ಸ್ ತೊರೆಯಬೇಕು ಎಂದು ಸಚಿವ ಮಹಲೂಫ್‌ ಟ್ವೀಟ್ ಮಾಡಿದ್ದರು.

‘ಪಂದ್ಯವನ್ನು ನಡೆಸಬಾರದು ಎಂದು ಮಾಲ್ಡಿವ್ಸ್ ಫುಟ್‌ಬಾಲ್ ಸಂಸ್ಥೆಗೆ ತಿಳಿಸಲಾಗಿದೆ. ಬೆಂಗಳೂರು ಎಫ್‌ಸಿ ತಂಡಕ್ಕೆ ವಾಪಸ್ ಹೋಗಲು ಅಗತ್ಯ ಸಿದ್ಧತೆಗಳನ್ನು ಮಾಡುವಂತೆಯೂ ಸೂಚಿಸಲಾಗಿದೆ. ಈ ಪಂದ್ಯ ನಡೆಯದೇ ಇರುವ ಕಾರಣ ಗುಂಪು ಹಂತದ ಹಣಾಹಣಿಯನ್ನು ಮುಂದೂಡುವಂತೆ ಎಎಫ್‌ಸಿಯನ್ನು ಕೋರಲಾಗಿದೆ’ ಎಂದೂ ಸಚಿವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಆಟಗಾರ ಎರಿಕ್ ಪಾರ್ಟಲು ಅವರು ಬೀದಿಯೊಂದರಲ್ಲಿ ಸಾಗುತ್ತಿರುವುದರ ಚಿತ್ರದೊಂದಿಗೆಸ್ಥಳೀಯ ಚಾನಲ್ ಒಂದರಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.

ಎಟಿಕೆ ಮೋಹನ್ ಬಗಾನ್ ಪಂದ್ಯ ಮುಂದೂಡಿಕೆ

ಬಿಎಫ್‌ಸಿ ಆಟಗಾರರನ್ನು ವಾಪಸ್ ಹೋಗುವಂತೆ ಮಾಲ್ಡಿವ್ಸ್ ಸರ್ಕಾರ ಹೇಳಿರುವ ಕಾರಣ ‘ಡಿ’ ಗುಂಪಿನ ಎಲ್ಲ ಪಂದ್ಯಗಳನ್ನು ಮುಂದೂಡಿರುವುದಾಗಿ ಎಎಫ್‌ಸಿ ತಿಳಿಸಿದೆ. ಬಿಎಫ್‌ಸಿ ಮತ್ತು ಈಗಲ್ಸ್ ನಡುವಿನ ಪಂದ್ಯದಲ್ಲಿ ಜಯಿಸಿದ ತಂಡವನ್ನು ಎಟಿಕೆ ಮೋಹನ್ ಬಾಗನ್ ಎದುರಿಸಬೇಕಾಗಿತ್ತು. ಆದರೆ ಈಗ ಆ ತಂಡಕ್ಕೆ ನಿರಾಸೆಯಾಗಿದೆ.

ಪಾಲ್ಗೊಳ್ಳಲು ಬಂದಿರುವ ತಂಡಗಳು ವಾಪಸ್ ಹೋಗುವ ವೆಚ್ಚವನ್ನು ತಾವೇ ಭರಿಸಬೇಕಾಗಿದೆ ಎಂದು ಹೇಳಿರುವ ಎಎಫ್‌ಸಿ ಇನ್ನೂ ಮಾಲಿಗೆ ಪ್ರಯಾಣ ಬೆಳೆಸದೇ ಇರುವ ತಂಡಗಳಿಗೆ ಪ್ರವಾಸ ರದ್ದುಗೊಳಿಸುವಂತೆ ಸೂಚಿಸಿದೆ.

ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಮತ್ತು ಮಾಲ್ಡಿವ್ಸ್‌ನ ಮಜಿಯಾ ಸ್ಪೋರ್ಟ್ಸ್‌ ಆ್ಯಂಡ್‌ ರಿಕ್ರಿಯೇಷನ್‌ ಕ್ಲಬ್‌ಗಳು ‘ಡಿ’ ಗುಂಪಿನಲ್ಲಿರುವ ಇತರ ತಂಡಗಳು. ಎಟಿಕೆ ಮೋಹನ್ ಬಾಗನ್ ತಂಡ ಇದೇ 14ರಂದು ಗುಂಪು ಹಂತದ ಮೊದಲ ಪಂದ್ಯ ಆಡಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT