ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಫೈನಲ್‌ ಮೇಲೆ ಮುಂಬೈ ಕಣ್ಣು

ಎರಡನೇ ಲೆಗ್‌ನ ಮೊದಲ ಸೆಮಿಫೈನಲ್‌ನಲ್ಲಿ ಗೋವಾ ಎದುರಾಳಿ
Last Updated 7 ಮಾರ್ಚ್ 2021, 15:14 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ ತಲುಪುವ ಹಂಬಲದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಎರಡನೇ ಲೆಗ್‌ನ ಸೆಮಿಫೈನಲ್‌ನಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಣ ಹಣಾಹಣಿಗೆ ಇಲ್ಲಿಯ ಜಿಎಂಸಿ ಕ್ರೀಡಾಂಗಣ ಸಜ್ಜುಗೊಂಡಿದೆ.

ಟೂರ್ನಿಯ ಏಳು ಆವೃತ್ತಿಗಳಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವು ಒಮ್ಮೆಯೂ ಪ್ರಶಸ್ತಿ ಸುತ್ತು ತಲುಪಿಲ್ಲ. ಈ ಬಾರಿ ಲೀಗ್ ವಿಜೇತರು ಎಂಬ ಹಿರಿಮೆ ತನ್ನದಾಗಿಸಿಕೊಂಡಿರುವ ಅದು, ಮತ್ತೊಂದು ಮಹತ್ವದ ಸಾಧನೆಯ ಮೇಲೆ ಚಿತ್ತ ನೆಟ್ಟಿದೆ.

ಉಭಯ ತಂಡಗಳ ನಡುವೆ ನಡೆದ ಮೊದಲ ಲೆಗ್‌ನ ಸೆಮಿಫೈನಲ್‌ ಪಂದ್ಯ 2–2ರ ಡ್ರಾನಲ್ಲಿ ಕೊನೆಗೊಂಡಿತ್ತು. ಆದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ತಂಡವು ಆ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಿರಲಿಲ್ಲ. ಬಹುತೇಕ ಪಂದ್ಯದಲ್ಲಿ ಗೋವಾ ತಂಡದ್ದೇ ಪಾರಮ್ಯವಿತ್ತು.

‘ಮೊದಲ ಲೆಗ್ ಸೆಮಿಫೈನಲ್‌ನಲ್ಲಿ ತಂಡವು ತೋರಿದ ಸಾಮರ್ಥ್ಯ ತೃಪ್ತಿ ತಂದಿಲ್ಲ. ಗೋಲು ಗಳಿಸುವ ಅವಕಾಶಗಳನ್ನು ನಾವು ಕೈಚೆಲ್ಲಿದೆವು. ಈ ಪಂದ್ಯದಲ್ಲಿ ಅವುಗಳನ್ನು ಸುಧಾರಿಸಿಕೊಳ್ಳಬೇಕು‘ ಎಂದು ಮುಂಬೈ ತಂಡದ ಕೋಚ್ ಸೆರ್ಜಿಯೊ ಲೊಬೆರಾ ಹೇಳಿದ್ದಾರೆ.

ಮೊದಲ ಲೆಗ್ ಪಂದ್ಯದಲ್ಲಿ ಕೆಲವು ಪ್ರಮುಖ ಆಟಗಾರರು ಗಾಯಗೊಂಡಿರುವುದು ಗೋವಾ ತಂಡಕ್ಕೆ ಅಲ್ಪ ಹಿನ್ನಡೆ ಎನಿಸಿದೆ. ಆ ಪಂದ್ಯದಲ್ಲಿ ಗೆಲುವಿಗೆ ಹೆಚ್ಚಿನ ಅವಕಾಶವಿತ್ತು ಎಂಬುದು ಜುವಾನ್ ಫೆರ್ನಾಂಡೊ ಮಾರ್ಗದರ್ಶನದಲ್ಲಿರುವ ಆತಿಥೇಯ ತಂಡದ ಅಭಿಪ್ರಾಯವಾಗಿದೆ.

ಪ್ರಮುಖ ಆಟಗಾರ ಪ್ರಿನ್ಸ್ಟನ್‌ ರೆಬೆಲ್ಲೊ ತಂಡದಿಂದ ಹೊರಗುಳಿದಿದ್ದರೂ, ಆಲ್ಬರ್ಟೊ ನೊಗ್ವೆರಾ ಹಾಗೂ ಇವಾನ್ ಗೊಂಜಾಲೆಜ್ ಅವರ ಉಪಸ್ಥಿತಿ ಈ ಪಂದ್ಯದಲ್ಲಿ ಗೋವಾಗೆ ಆತ್ಮವಿಶ್ವಾಸ ಹೆಚ್ಚಿಸಿದೆ.

ಪಂದ್ಯ ಆರಂಭ: ಸಂಜೆ 7.30
ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT