ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಸಂಸ್ಕೃತಿ ಆಡಿ–ಕಲಿಯುವ ಬಗೆ

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೇರಳದ ಮಲಪ್ಪುರಂ ಜಿಲ್ಲೆ ಮಾಂಬಾಡ್ ಗ್ರಾಮದ ಸಿ.ಕೆ.ರಶೀದ್ 10 ವರ್ಷದವನಿದ್ದಾಗಲೇ ಫುಟ್‌ಬಾಲ್ ಟೂರ್ನಿಯೊಂದರಲ್ಲಿ ಅಮೋಘ ಸಾಧನೆ ಮಾಡಿ ಗಮನ ಸೆಳೆದಿದ್ದ. ಆದರೆ ಆತನ ಪ್ರತಿಭೆ ಕೇರಳಕ್ಕಷ್ಟೇ ಪರಿಚಯವಾಗಿತ್ತು. ಐದು ವರ್ಷಗಳ ನಂತರ, ಕಳೆದ ತಿಂಗಳ 28ರಂದು ನವಿ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ‘ಮುಂಬೈ 2020 ನೆಕ್ಸ್ಟ್ ಜನರೇಷನ್ ಫುಟ್‌ಬಾಲ್ ಟೂರ್ನಿ’ಯ ಕೊನೆಯ ಲೀಗ್ ಪಂದ್ಯದಲ್ಲಿ ಈ ಬಾಲಕ ಮಿಂಚಿದ.

ಮಾಂಚೆಸ್ಟರ್ ಯುನೈಟೆಡ್‌ ಎಫ್‌ಸಿಯ ಯುವ ತಂಡದ ಎದುರಿನ ಪಂದ್ಯದಲ್ಲಿ ಗೋಲು ಹೊಡೆದು ತಾನು ಪ್ರತಿನಿಧಿಸುವ ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ ತಂಡಕ್ಕೆ ಏಕೈಕ ಗೋಲಿನ ಗೆಲುವು ತಂದುಕೊಟ್ಟ. ಈ ಗೋಲು ಮತ್ತು ಅದರ ಮೂಲಕ ಗಳಿಸಿದ ಜಯದ ಮೂಲಕ ಆತನ ಹೆಸರು ಇಂಗ್ಲೆಂಡ್‌ವರೆಗೂ ಪಸರಿಸಿತು.

ರಶೀದ್ ಪ್ರತಿಭೆಗೆ ಸಾಣೆ ಹಿಡಿದು ಈ ಮಟ್ಟಕ್ಕೆ ಬೆಳೆಸಿದ್ದು ಮುಂಬೈನ ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್‌ ಅಕಾಡೆಮಿ. ನವಿ ಮುಂಬೈನ ಈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವವರಿಗೆ ಸವಾಲುಗಳನ್ನು ಮೆಟ್ಟಿನಿಲ್ಲುವ ಕಲೆ ಕರಗತ. ಆರು ವರ್ಷಗಳಲ್ಲಿ ಅವರೊಳಗೆ ಬೆಳೆದ ‘ಫುಟ್‌ಬಾಲ್ ಸಂಸ್ಕೃತಿ’ಯೇ ಇದಕ್ಕೆ ಕಾರಣ.

ಪ್ರೀಮಿಯರ್ ಲೀಗ್‌ನಲ್ಲಿ ಆಡುವ ತಂಡಗಳನ್ನು ಪ್ರತಿನಿಧಿಸುವ ಕ್ಲಬ್‌ಗಳ ಜೂನಿಯರ್ ತಂಡಗಳೊಂದಿಗೆ ಎರಡು ವರ್ಷಗಳಿಂದ ಮುಂಬೈ–ನೆಕ್ಸ್ಟ್ ಜನರೇಷನ್ ಫುಟ್‌ಬಾಲ್ ಟೂರ್ನಿಯನ್ನೂ ಆಯೋಜಿಸುತ್ತಿರುವುದರಿಂದ ವಿದೇಶಿ ಫುಟ್‌ಬಾಲ್ ಕ್ಲಬ್‌ಗಳ ಆಟಗಾರರ ಶೈಲಿಯನ್ನು ಹತ್ತಿರದಿಂದ ನೋಡುವುದಕ್ಕೂ ಭಾರತದ ಎಳೆಯ ಫುಟ್‌ಬಾಲಿಗರಿಗೆ ಅವಕಾಶ ಲಭಿಸುತ್ತಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನಿಂದ ಮಾನ್ಯತೆ ಪಡೆದಿರುವ ದೇಶದ ಮೊಟ್ಟಮೊದಲ ಫೈವ್ ಸ್ಟಾರ್ ಫುಟ್‌ಬಾಲ್ ಅಕಾಡೆಮಿಯಾಗಿರುವ ಇಲ್ಲಿ ನಿಡುವ ತರಬೇತಿಯ ರೂಪುರೇಷೆಗಳು, ಸಿದ್ಧ ಮಾದರಿಯದ್ದಲ್ಲ. ಫುಟ್‌ಬಾಲ್ ಸಂಸ್ಕೃತಿ ಬೆಳೆಸುವುದೇ ಉದ್ದೇಶವಾಗಿರುವುದರಿಂದ ಇಲ್ಲಿ ಪಂದ್ಯಗಳನ್ನು ಗೆಲ್ಲುವ ಛಲವೇ ಮುಖ್ಯವೆಂಬ ತತ್ವಕ್ಕೆ ಆದ್ಯತೆ ಇಲ್ಲ. ಆಟದ ಶೈಲಿಯನ್ನು ಸಂಪೂರ್ಣ ಕರಗತ ಮಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿಯೇ ಪರಿಣತರ ತಂಡವನ್ನು ಸಜ್ಜುಗೊಳಿಸಲಾಗಿದೆ. 13 ವರ್ಷದೊಳಗಿನವರಿಂದ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಕೋಚ್‌ಗಳಿದ್ದಾರೆ. ಒಟ್ಟು 22 ಸಿಬ್ಬಂದಿಯ ಉಸ್ತುವಾರಿಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸುತ್ತದೆ.

‘ಗೋಲ್ ಇಂಡಿಯಾ ಕಾ (ಭಾರತದ ಗೋಲು)’ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಅಕಾಡೆಮಿ ಚಟುವಟಿಕೆಗೆ ನಾಂದಿ ಹಾಡಿದ್ದು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿ ಆರಂಭವಾದ 20014ರಲ್ಲೇ.

ದೇಶದ ವಿವಿಧ ಭಾಗಗಳಲ್ಲಿರುವ ಫುಟ್‌ಬಾಲ್ ಕ್ಲಬ್‌ಗಳ ಮೂಲಕ ಒಂದಷ್ಟು ಬಾಲಕರನ್ನು ಕರೆಸಲಾಗುತ್ತದೆ. ಫುಟ್‌ಬಾಲ್ ಆಟಕ್ಕೆ ಸಂಪೂರ್ಣವಾಗಿ ಒಗ್ಗುವ ಸಾಧ್ಯತೆ ಇರುವವರನ್ನು ಮಾತ್ರ ಅಕಾಡೆಮಿಗೆ ಸೇರಿಸಿಕೊಳ್ಳಲಾಗುತ್ತದೆ. ನವಿ ಮುಂಬೈನ 14ನೇ ಸೆಕ್ಟರ್‌ನಲ್ಲಿರುವ ಕೋಪರ್‌ಖೈರ್ಣೆಯಲ್ಲಿರುವ ರಿಲಯನ್ಸ್ ಶಾಲೆಯಲ್ಲಿ ಉಚಿತ ಶಿಕ್ಷಣ, ಸಮೀಪದಲ್ಲೇ ಇರುವ ರಿಲಯನ್ಸ್ ಕಟ್ಟಡದಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ವಸತಿ ಸೌಕರ್ಯ. ಕಿಲೋಮೀಟರ್‌ಗಳ ದೂರ, ಗುಡ್ಡದ ಕೆಳಗಿನ ಪ್ರಶಾಂತ ವಾತಾವರಣದಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಆವರಣದ ಅಂಗಣದಲ್ಲಿ ತರಬೇತಿ ನೀಡಲಾಗುತ್ತಿದ. ಅಂತರರಾಷ್ಟ್ರೀಯ ಆಟಗಾರರಾದ ಬ್ರೆಜಿಲ್‌ನ ಜೋಸ್‌ ಮಾರಿಯೊ ಬರೆಟ್ಟಿ, ಜಪಾನ್‌ನ ಅರಾಟ ಇಜುಮಿ ಮುಂತಾದವರು ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುತ್ತಿದ್ದಾರೆ.

ಆಟ-ಶಿಕ್ಷಣ 50/50

ಆಟದೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಅಕಾಡೆಮಿಯ ಮುಖ್ಯಸ್ಥ ಯಶ್ ಪಟೇಲ್ ಹೇಳುತ್ತಾರೆ.

ಗ್ರಾಮೀಣ ಪ್ರದೇಶಗಳಿಂದ ಬರುವ ಮಕ್ಕಳ ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆ ತಿಳಿದುಕೊಳ್ಳಲು ಅಕಾಡೆಮಿಯ ಆಪ್ತ ಸಮಾಲೋಚಕಿ ಆ ಮಕ್ಕಳ ಮನೆಗಳಿಗೆ ತೆರಳುತ್ತಾರೆ. ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶಗಳ ಎಷ್ಟೋ ಮನೆಗಳಿಗೆ ಹೋಗಿ ಅವರು ವಾಸ್ತವ ಅರಿತುಕೊಂಡು ಬಂದಿದ್ದಾರೆ.

‘ಈಗ ತರಬೇತಿ ಮುಗಿಸಿ ಹೋಗುತ್ತಿರುವ ಎಂಟು ಮಂದಿ ಪೈಕಿ ಎಲ್ಲರೂ ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ದೇಶದ ಮೂಲೆ ಮೂಲೆಯ ಹಳ್ಳಿಗಳಲ್ಲಿ ಬಡತನದ ಹಿನ್ನೆಲೆಯಲ್ಲಿ ಬೆಳೆದ ಮಕ್ಕಳನ್ನು ಇಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಕೆಲವರಿಗೆ ಮಾತೃಭಾಷೆ ಬಿಟ್ಟರೆ ಸಂವಹನಕ್ಕೆ ಬೇರೆ ಭಾಷೆಯೇ ಗೊತ್ತಿರಲಿಲ್ಲ. ಅಂಥವರು ಈಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಚೆನ್ನಾಗಿ ವ್ಯವಹರಿಸುತ್ತಾರೆ. ಬದುಕಿನಲ್ಲಿ ಎಂಥ ಸವಾಲನ್ನೂ ಎದುರಿಸುವ ತಾಕತ್ತು ಅವರಲ್ಲಿ ಮೂಡಿದೆ’ ಎಂದು ಯಶ್ ಅಭಿಪ್ರಾಯಪಡುತ್ತಾರೆ.

ಎಂಟು ಮಂದಿಯ ತರಬೇತಿ ಪೂರ್ಣ

ಅಕಾಡೆಮಿಯ ಎಂಟು ಮಂದಿ ‘ಫುಟ್‌ಬಾಲ್ ಪದವಿ’ ಗಳಿಸಲು ಸಜ್ಜಾಗಿದ್ದಾರೆ. ಈ ತಿಂಗಳಲ್ಲೇ ಅವರು ತರಬೇತಿ ಅವಧಿ ಮುಗಿಸಿ ಹೊರಹೋಗಲಿದ್ದಾರೆ. ತರಬೇತಿ ಪಡೆಯುತ್ತಿರುವವರ ಮಾಹಿತಿ ಗುಪ್ತವಾಗಿ ಇರಿಸುವುದರಿಂದ ಈ ಬಾಲಕರ ಹೆಸರುಗಳನ್ನು ಅಕಾಡೆಮಿಯು ಬಹಿರಂಗ ಮಾಡಲಿಲ್ಲ. ಈ ಎಂಟು ಮಂದಿ ಕಲಿಕೆಯಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದು ಒಬ್ಬ ಬಾಲಕ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 79 ಅಂಕ ಗಳಿಸಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

‘ಈ ಆಟಗಾರರು ಈಗ ಜಗತ್ತಿನ ಯಾವ ಮೂಲೆಯಲ್ಲಾದರೂ ಆಡಬಹುದಾದ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಆದ್ದರಿಂದ ಹೆಸರಾಂತ ತಂಡಗಳನ್ನು ಸೇರಿಕೊಳ್ಳುವ ಸಾಧ್ಯತೆ ಇದೆ’ ಎಂದು ಯಂಗ್ ಚಾಂಪ್ಸ್ ಯೋಜನೆಯ ಮುಖ್ಯಸ್ಥ ಹಾಲೆಂಡ್‌ನ ಮಾರ್ಕಸ್ ವೆಸನ್ ತಿಳಿಸಿದರು.

(ವರದಿಗಾರ ಅಕಾಡೆಮಿಯ ಆಹ್ವಾನದ ಮೇರೆಗೆ ಮುಂಬೈಗೆ ತೆರಳಿದ್ದರು)

ನಾನೊಬ್ಬ ತಾಯಿ. ಸೌಲಭ್ಯ ವಂಚಿತರಾಗಿದ್ದ ಮಕ್ಕಳು ಇಲ್ಲಿನ ಸೌಲಭ್ಯಗಳನ್ನು ಬಳಸಿ ಉತ್ತಮ ಸಾಮರ್ಥ್ಯ ತೋರುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ.
ನೀತಾ ಅಂಬಾನಿ ರಿಲಯನ್ಸ್ ಫೌಂಡೇಷನ್ ಮುಖ್ಯಸ್ಥೆ

ಫುಟ್‌ಬಾಲ್ ಆಡುವ ಯಾವುದೇ ದೇಶಕ್ಕೂ ಪೈಪೋಟಿ ನೀಡಬಲ್ಲ ಆಟಗಾರರನ್ನು ಬೆಳೆಸುವ ತಾಕತ್ತು ಭಾರತಕ್ಕಿದೆ. ಆದರೆ ಬೇರುಮಟ್ಟದಲ್ಲಿ ಆಟಗಾರರ ಪ್ರತಿಭೆ ಶೋಧಿಸುವ ಕಾರ್ಯ ಆಗಿರಲಿಲ್ಲ. ಅಕಾಡೆಮಿ ಈ ಪ್ರಯತ್ನ ಮಾಡುತ್ತಿದೆ.
‌ಮಾರ್ಕಸ್ ವೆಲ್ಸನ್ ತರಬೇತಿ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT