ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಿಂಚಿದ ರೊನಾಲ್ಡೊ

Last Updated 19 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಿಲಾನ್‌ (ಎಪಿ): ಈ ಬಾರಿಯ ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜಾದೂ ಮುಂದುವರಿದಿದೆ.

ರೊನಾಲ್ಡೊ ಕಾಲ್ಚಳಕದ ಬಲದಿಂದ ಯುವೆಂಟಸ್‌ ತಂಡ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ಸ್ಯಾಂಪ್‌ಡೋರಿಯಾ ತಂಡವನ್ನು ಮಣಿಸಿತು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 42ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

4–3–1–2 ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಯುವೆಂಟಸ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು.

19ನೇ ನಿಮಿಷದಲ್ಲಿ ಈ ತಂಡ ಖಾತೆ ತೆರೆಯಿತು. ಪಾಲೊ ಡಿಬಾಲಾ, ಚೆಂಡನ್ನು ಗುರಿ ಸೇರಿಸಿದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಸ್ಯಾಂಪ್‌ಡೋರಿಯಾ ತಂಡದ ಜಿಯಾನ್‌ಲುಕಾ ಕ್ಯಾಪ್ರರಿ ಅವಕಾಶ ನೀಡಲಿಲ್ಲ.

35ನೇ ನಿಮಿಷದಲ್ಲಿ ಗೋಲು ಬಾರಿಸಿದ ಅವರು 1–1 ಸಮಬಲಕ್ಕೆ ಕಾರಣರಾರು.

ಮೊದಲಾರ್ಧದ ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ರೊನಾಲ್ಡೊ ಮೋಡಿ ಮಾಡಿದರು. ಅವರು 45ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರಿಂದ ಯುವೆಂಟಸ್‌ ತಂಡ 2–1 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ಸಹ ಆಟಗಾರ ಅಲೆಕ್ಸ್‌ ಸ್ಯಾಂಡ್ರೊ, ಎದುರಾಳಿ ಆವರಣದ ಎಡಭಾಗದಿಂದ ಒದ್ದು ಕಳುಹಿಸಿದ ಚೆಂಡನ್ನು ರೊನಾಲ್ಡೊ ಅವರು ಮೇಲಕ್ಕೆ ಜಿಗಿದು ತಲೆತಾಗಿಸಿ ಗುರಿ ಮುಟ್ಟಿಸಿದ (ಹೆಡರ್‌) ರೀತಿ ಸೊಗಸಾಗಿತ್ತು. ಈ ಋತುವಿನಲ್ಲಿ ಅವರು ಬಾರಿಸಿದ ಆರನೇ ಗೋಲು ಇದಾಗಿದೆ.

ಇನ್ನೊಂದು ಪಂದ್ಯದಲ್ಲಿ ಸಸೌಲೊ 2–0 ಗೋಲುಗಳಿಂದ ಬ್ರೆಸಿಯಾ ತಂಡವನ್ನು ಮಣಿಸಿತು.

ವಿಜಯೀ ತಂಡದ ಹಮೆದ್‌ ಜೂನಿಯರ್‌ ಟ್ರಾವೊರ್‌ (25) ಮತ್ತು ಫ್ರಾನ್ಸೆಸ್ಕೊ ಕಾಪುಟೊ (71) ಅವರು ತಲಾ ಒಮ್ಮೆ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT