ಶನಿವಾರ, ಫೆಬ್ರವರಿ 27, 2021
30 °C

ಬೆಂಗಳೂರು ಯುನೈಟೆಡ್‌ಗೆ ಸೆವಿಲ್ಲಾ ಬಲ

ವಿಕ್ರಂ ಕಾಂತಿಕೆರೆ   Updated:

ಅಕ್ಷರ ಗಾತ್ರ : | |

Prajavani

ಸ್ಪೇನ್‌ನ ಶ್ರೇಷ್ಠ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ಒಂದಾದ ಸೆವಿಲ್ಲಾ ಎಫ್‌ಸಿ ಇದೀಗ ಬೆಂಗಳೂರಿನತ್ತ ಚಿತ್ತ ನೆಟ್ಟಿದೆ. ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಸಹಭಾಗಿತ್ವದ ಹುಡುಕಾಟದಲ್ಲಿದ್ದ ಕ್ಲಬ್‌, ಉದ್ಯಾನನಗರಿಯ ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ನಿಮಿದಾ ಸ್ಪೋರ್ಟ್ಸ್ ಬ್ಯುಸಿನೆಸ್ ಗ್ರೂಪ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಫುಟ್‌ಬಾಲ್‌ನಲ್ಲಿ ತಂತ್ರಜ್ಞಾನದ ಅಳವಡಿಕೆ, ಒಟ್ಟಾರೆ ಕ್ರೀಡಾಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಅನುಷ್ಠಾನ ಕಾರ್ಯಕ್ರಮಗಳಿಗೆ ಬಲ ತುಂಬುವುದು, ಕ್ಷಿಪ್ರ ಬೆಳವಣಿಗೆ ಹೊಂದುತ್ತಿರುವ ಮಾರುಕಟ್ಟೆಯಲ್ಲಿ ಹೆಜ್ಜೆ ಗುರುತು ಮೂಡಿಸುವುದು ಒಪ್ಪಂದದ ಪ್ರಮುಖ ಗುರಿ. 130 ವರ್ಷಗಳ ಇತಿಹಾಸ ಇರುವ ಕ್ಲಬ್ ಒಂದರ ಜೊತೆಗಿನ ಬಾಂಧವ್ಯದಿಂದ ಭಾರತದಲ್ಲಿ, ವಿಶೇಷವಾಗಿ ದೇಶದ ‘ಸಿಲಿಕಾನ್ ವ್ಯಾಲಿ’ಯಲ್ಲಿ ಫುಟ್‌ಬಾಲ್‌ ಬೆಳವಣಿಗೆ ಹೊಸ ದಿಸೆಯಲ್ಲಿ ಸಾಗುವ ಭರವಸೆ ಮೂಡಿದೆ.

ದೇಶಿ ಫುಟ್‌ಬಾಲ್‌ನಲ್ಲಿ ಉತ್ತಮ ಹೆಸರು ಗಳಿಸಿರುವ ಎಫ್‌ಸಿ ಬೆಂಗಳೂರು ತಂಡ ಸೆವಿಲ್ಲಾ ಜೊತೆಗಿನ ಒಪ್ಪಂದದಿಂದ ಇನ್ನಷ್ಟು ಅಭಿವೃದ್ಧಿಯ ಕನಸು ಹೊಂದಿದೆ. ಯುರೋಪಾ ಲೀಗ್ ಟೂರ್ನಿಗಳಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದಿರುವ ಸೆವಿಲ್ಲಾ ಕ್ಲಬ್‌, ಫುಟ್‌ಬಾಲ್‌ನಲ್ಲಿ ಯಶಸ್ಸಿನ ಹಾದಿ ತುಳಿಯುವ ತಂತ್ರವನ್ನು ಬೆಂಗಳೂರು ತಂಡಕ್ಕೆ ಧಾರೆ ಎರೆಯುವ ನಿರೀಕ್ಷೆ ಇದೆ. ಭಾರತದ ಜನ ಜೀವನ, ಸಂಸ್ಕೃತಿ, ಫುಟ್‌ಬಾಲ್ ಬೆಳವಣಿಗೆ ಮತ್ತು ವಾಣಿಜ್ಯ ವ್ಯವಹಾರಗಳ ಕುರಿತು ಅರಿವು ಗಳಿಸಿಕೊಳ್ಳುವುದು– ಒಪ್ಪಂದದ ಮೂಲಕ ಸೆವಿಲ್ಲಾ ಬಯಸುವುದು ಇಷ್ಟೇ.

ಪುರುಷರ ಫುಟ್‌ಬಾಲ್‌ನಲ್ಲಿ ಮೂರು ವಿಭಾಗಗಳನ್ನು ಹೊಂದಿರುವ (ಮುಖ್ಯ ತಂಡ, ಫುಟ್‌ಬಾಲ್‌ ಬಿ, ಫುಟ್‌ಬಾಲ್ ಸಿ) ಸೆವಿಲ್ಲಾ ಎಫ್‌ಸಿಗೆ ಮಹಿಳೆಯರ ಮತ್ತು ಯೂತ್ ತಂಡಗಳ ಮಾಲೀಕತ್ವವೂ ಇದೆ. ಪೋರ್ಟೊ ರಿಕೊದಲ್ಲೂ ಒಂದು ತಂಡ ಹೊಂದಿರುವ ಕ್ಲಬ್‌ ಮೋಟರ್ ರೇಸಿಂಗ್‌ನಲ್ಲೂ ರೋವಿಂಗ್‌ನಲ್ಲೂ ಪಾರಮ್ಯ ಮೆರೆದಿದೆ.  

‘ಫುಟ್‌ಬಾಲ್‌ನಲ್ಲಿ ಅತಿದೊಡ್ಡ ಪರಂಪರೆ, ಇತಿಹಾಸ ಮತ್ತು ಯಶಸ್ಸಿನ ದಾಖಲೆಯನ್ನು ಹೊಂದಿರುವ ಸೆವಿಲ್ಲಾ ಜೊತೆ ಒಪ್ಪಂದದಲ್ಲಿ ಏರ್ಪಟ್ಟಿರುವುದು ಖುಷಿಯ ವಿಷಯ. ಈ ಕ್ಲಬ್‌ನ ಅನುಭವದ ಆಧಾರದಲ್ಲಿ ಸ್ಥಳೀಯವಾಗಿ ಪ್ರತಿಭೆಗಳನ್ನು ಬೆಳೆಸಲು ಕಾತರರಾಗಿದ್ದೇವೆ’ ಎಂದು ನಿಮಿದಾ ಸಂಸ್ಥೆಯ ಸ್ಥಾಪಕ ಮತ್ತು ನಿರ್ದೇಶಕ ಗೌರವ್‌ ಮಾಂಚಂದ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು