ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಇರಾನ್‌ ಮೇಲೆ ಇಂಗ್ಲೆಂಡ್‌ ಸವಾರಿ

ಬುಕಾಯೊ ಎರಡು ಗೋಲು; ಮಿಂಚಿದ ಬೆಲಿಂಗಮ್, ಸ್ಟರ್ಲಿಂಗ್
Last Updated 21 ನವೆಂಬರ್ 2022, 16:16 IST
ಅಕ್ಷರ ಗಾತ್ರ

ದೋಹಾ: ಮರಳುಗಾಡು ದೋಹಾದಲ್ಲಿ ಸೋಮವಾರ ಗೋಲಿನ ಮಳೆಗರೆದ ಇಂಗ್ಲೆಂಡ್‌ ತಂಡ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆಯಿತು.

ಖಲೀಫಾ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಇಂಗ್ಲೆಂಡ್‌ 6–2 ಗೋಲುಗಳಿಂದ ಇರಾನ್‌ ತಂಡವನ್ನು ಮಣಿಸಿತು.

ಬುಕಾಯೊ ಸಾಕಾ ಎರಡು ಗೋಲುಗಳನ್ನು ತಂದಿತ್ತರೆ, ಜೂಡ್‌ ಬೆಲಿಂಗಮ್‌, ರಹೀಮ್‌ ಸ್ಟರ್ಲಿಂಗ್‌, ಮಾರ್ಕಸ್‌ ರಶ್‌ಫೋರ್ಡ್‌ ಮತ್ತು ಜಾಕ್‌ ಗ್ರೀಲಿಶ್‌ ಅವರು ತಲಾ ಒಂದು ಗೋಲು ತಂದಿತ್ತರು.

ಮೊದಲ ಅರ್ಧ ಗಂಟೆಯ ಆಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನೀಡಿದವು. ಇದರಿಂದ ಆರಂಭದಲ್ಲಿ ಗೋಲು ಬರಲಿಲ್ಲ. 35ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೋಲಿನ ಖಾತೆ ತೆರೆಯಿತು. ಲೂಕ್‌ ಶಾ ನೀಡಿದ ನಿಖರ ಪಾಸ್‌ನಲ್ಲಿ ಚೆಂಡನ್ನು ಹೆಡ್‌ ಮಾಡಿದ ಬೆಲಿಂಗಮ್‌ ಗುರಿ ಸೇರಿಸಿದರು.

ಮೊದಲ ಗೋಲು ಬಿದ್ದದ್ದೇ ತಡ, ಆಟದ ಚಿತ್ರಣವೇ ಬದಲಾಯಿತು. ಅದುವರೆಗೂ ನಿಧಾನಗತಿಯ ಆಟವಾಡುತ್ತಿದ್ದ ಇಂಗ್ಲೆಂಡ್‌ ಆಟಗಾರರು ಎದುರಾಳಿ ತಂಡದ ಗೋಲುಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ದಾಳಿ ನಡೆಸಿದರು.

ಎಂಟು ನಿಮಿಷಗಳ ಬಳಿಕ ಇಂಗ್ಲೆಂಡ್‌ ಮುನ್ನಡೆಯನ್ನು ಹೆಚ್ಚಿಸಿತು. ಹ್ಯಾರಿ ಮಗುಯೆರ್‌ ಅವರು ಹೆಡರ್‌ ಮೂಲಕ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಬುಕಾಯೊ ಸಾಕಾ ಗುರಿ ಸೇರಿಸಿದರು.

ವಿರಾಮಕ್ಕೆ ತೆರಳಲು ಕೆಲವೇ ನಿಮಿಷಗಳಿದ್ದಾಗ ಸ್ಟರ್ಲಿಂಗ್‌ (45+1) ತಮ್ಮ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ನಾಯಕ ಹ್ಯಾರಿ ಕೇನ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಅವರು ಯಾವುದೇ ತಪ್ಪು ಮಾಡಲಿಲ್ಲ.

ಎರಡನೇ ಅವಧಿಯಲ್ಲೂ ಇಂಗ್ಲೆಂಡ್‌ನ ಪ್ರಾಬಲ್ಯ ಮುಂದುವರಿಯಿತು. 62ನೇ ನಿಮಿಷದಲ್ಲಿ ಸಾಕಾ ತಮ್ಮ ಎರಡನೇ ಗೋಲು ಗಳಿಸಿದರು. ಇರಾನ್‌ನ ಡಿಫೆಂಡರ್‌ಗಳನ್ನು ಚಾಣಾಕ್ಷತನದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು.

ಇದಾದ ಮೂರು ನಿಮಿಷಗಳ ಬಳಿಕ ಮೆಹ್ದಿ ತರೆಮಿ ಅವರು ಗೋಲು ಗಳಿಸಿ ಇರಾನ್‌ನ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು. ಆದರೆ ರಶ್‌ಫೋರ್ಡ್‌ (71ನೇ ನಿ.) ಹಾಗೂ ಗ್ರೀಲಿಶ್‌ (90ನೇ ನಿ.) ಅವರು ಗೋಲು ಗಳಿಸಿ ಇಂಗ್ಲೆಂಡ್‌ನ ಗೆಲುವಿನ ಅಂತರ ಹಿಗ್ಗಿಸಿದರು. ಪಂದ್ಯ ಕೊನೆಗೊಳ್ಳಲು ಕೆಲವು ಸೆಕೆಂಡುಗಳು ಇರುವಾಗ ತರೆಮಿ ತಮ್ಮ ಹಾಗೂ ತಂಡದ ಎರಡನೇ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT