ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಇದು ಇಂಡಿಯನ್ ‘ಸ್ಪೇನ್‌’ ಲೀಗ್!

Last Updated 20 ನವೆಂಬರ್ 2020, 3:13 IST
ಅಕ್ಷರ ಗಾತ್ರ

ಭಾರತದ ಫುಟ್‌ಬಾಲ್‌ಗೆ ಹೊಸ ದಿಸೆ ತೋರಿಸಿದ ಟೂರ್ನಿ, 2014ರಲ್ಲಿ ಆರಂಭಗೊಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್). ವಿದೇಶಿ ಆಟಗಾರರ ಕಾಲ್ಚಳಕವನ್ನು ಹತ್ತಿರದಿಂದ ನೋಡಲು ಇಲ್ಲಿನ ಕ್ರೀಡಾಪ್ರಿಯರಿಗೆ ಅವಕಾಶ ಒದಗಿಸಿದ ಟೂರ್ನಿ ಸ್ಥಳೀಯ ಆಟಗಾರರಿಗೆ ಹೊರದೇಶದ ದಿಗ್ಗಜ ಫುಟ್‌ಬಾಲ್ ಪಟುಗಳ ಜೊತೆಗೂಡಿ ಆಡುವ ಅದೃಷ್ಟದ ಬಾಗಿಲನ್ನೂ ತೆರದಿತ್ತು.

ಇತರ ಲೀಗ್‌ಗಳಂತೆ ಐಎಸ್‌ಎಲ್‌ಗೂ ‘ವಿದೇಶಿ ನೀತಿ’ ಇದೆ. ಉಪಖಂಡದ ಒಬ್ಬ ಆಟಗಾರನಿಗೆ ಕಡ್ಡಾಯ ಅವಕಾಶ ನೀಡುವುದರೊಂದಿಗೆ ವಿದೇಶದ ಏಳು ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಆಡುವ 11ರಲ್ಲಿ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶದ ನಿರ್ಬಂಧವಿದೆ. ವಿದೇಶಿ ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಬಹುತೇಕ ಎಲ್ಲ ತಂಡಗಳೂ ಸ್ಪೇನ್ ಕಡೆಗೆ ನೋಟ ಹರಿಸುವುದು ಮೊದಲ ಆವೃತ್ತಿಯಿಂದಲೇ ಕಂಡು ಬಂದಿರುವ ಪ್ರವೃತ್ತಿ. ಈ ಬಾರಿ ಇದು ಗರಿಷ್ಠ ಮಟ್ಟಕ್ಕೆ ಏರಿದೆ. ಹೀಗಾಗಿ ಏಳನೇ ಆವೃತ್ತಿಯ ಇಂಡಿಯನ್ ‘ಸೂಪರ್’ ಲೀಗ್‌ ಟೂರ್ನಿಯು ಇಂಡಿಯನ್ ‘ಸ್ಪೇನ್‌‘ ಲೀಗ್ ಆಗಿ ಮಾರ್ಪಟ್ಟಿದೆ (‘ಸೂಪರ್‌’ನಲ್ಲಿರುವ ಇಂಗ್ಲಿಷ್‌ನ ‘ಎಸ್‌’ ಸ್ಪೇನ್‌ಗೂ ಸಲ್ಲುತ್ತದೆ).

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮೊದಮೊದಲು ಸ್ಪೇನ್‌ನ ಕೋಚ್‌ಗಳ ಕಡೆಗೆ ನೋಟವಿಡುತ್ತಿದ್ದ ಫ್ರಾಂಚೈಸ್‌ಗಳು ನಂತರ ಅವರ ಮೂಲಕ ಅಲ್ಲಿನ ಆಟಗಾರರನ್ನೂ ಕರೆತರಲು ಮುಂದಾದರು. ಬೆಂಗಳೂರು ಎಫ್‌ಸಿಯ ವಿಷಯವನ್ನೇ ತೆಗೆದುಕೊಂಡರೆ, ಆರಂಭದಲ್ಲಿ ಸ್ಪೇನ್‌ನ ಆಲ್ಬರ್ಟ್ ರೋಕಾ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿದ್ದ ಫ್ರಾಂಚೈಸ್ ಅದೇ ದೇಶದ ಕಾರ್ಲಸ್ ಕ್ವದ್ರತ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತಂಡದಲ್ಲಿರುವ ಫ್ರಾನ್ಸಿಸ್ಕೊ ಗೊಂಜಾಲೆಜ್‌, ಧಿಮಾಸ್ ಡೆಲ್ಗಾಡೊ ಮತ್ತು ಜುವಾನನ್ ಸ್ಪೇನ್‌ನವರು.

ಎಲ್ಲ ತಂಡಗಳ ಮೇಲೆ ಕಣ್ಣು ಹಾಯಿಸಿದರೆ, ಈ ಬಾರಿ ಒಟ್ಟು ವಿದೇಶಿ ಆಟಗಾರರ ಸಂಖ್ಯೆಯ ಮೂರನೇ ಒಂದರಷ್ಟು ಸ್ಪೇನ್‌ನವರೇ ಇದ್ದು 11 ತಂಡಗಳ ಪೈಕಿ ಏಳು ತಂಡಗಳು ಆ ದೇಶದ ಕೋಚ್‌ಗಳನ್ನು ನೇಮಕ ಮಾಡಿಕೊಂಡಿದೆ.

ನಂಬಿಕೆ ಮತ್ತು ವಾಸ್ತವದ ‘ಆಟ’

ಐಎಸ್‌ಎಲ್‌ನಲ್ಲಿ ಈ ವರೆಗೆ ಒಟ್ಟು 64 ಸ್ಪೇನ್ ಆಟಗಾರರು ತಮ್ಮ ಆಟದ ಗಮ್ಮತ್ತು ಪ್ರದರ್ಶಿಸಿದ್ದಾರೆ. ಸ್ಪೇನ್ ಆಟಗಾರರೇ ತುಂಬಿರುವ ಮತ್ತು ಅಲ್ಲಿನವರು ಕೋಚ್ ಆಗಿರುವ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂಬ ನಂಬಿಕೆಯೂ ಫ್ರಾಂಚೈಸ್‌ಗಳು ಅತ್ತ ಕಣ್ಣು ಹಾಯಿಸಲು ಪ್ರಮುಖ ಕಾರಣ. ಇದು ಕೇವಲ ನಂಬಿಕೆಯಾಗಿ ಮಾತ್ರ ಉಳಿಯದೆ, ವಾಸ್ತವವೂ ಆಗಿದೆ ಎಂಬುದು ಗಮನಾರ್ಹ. ಹಿಂದಿನ ಆರು ಆವೃತ್ತಿಗಳ ಪೈಕಿ ನಾಲ್ಕು ಬಾರಿ ಸ್ಪೇನ್‌ ಕೋಚ್‌ ಇರುವ ತಂಡ ಪ್ರಶಸ್ತಿ ಗೆದ್ದಿದೆ. 2015 ಮತ್ತು 2017ರಲ್ಲಿ ಚಾಂಪಿಯನ್ ಆದ ಚೆನ್ನೈಯಿನ್ ಮಾತ್ರ ಇದಕ್ಕೆ ಅಪವಾದ. ಈ ಎರಡು ವರ್ಷ ಆ ತಂಡಕ್ಕೆ ಕ್ರಮವಾಗಿ ಇಟಲಿಯ ಮಾರ್ಕೊ ಮಟೆರಾಜಿ ಮತ್ತು ಇಂಗ್ಲೆಂಡ್‌ನ ಜಾನ್ ಗ್ರೆಗರಿ ತರಬೇತಿ ನೀಡಿದ್ದರು.

ಚೆನ್ನೈಯಿನ್ ಎಫ್‌ಸಿ ಈ ಬಾರಿಯೂ ಸ್ಪೇನ್ ಕೋಚ್‌ ಮೇಲೆ ‘ನಂಬಿಕೆ’ ಇರಿಸಲಿಲ್ಲ. ಈಗ ಆ ತಂಡದ ತರಬೇತುದಾರ ಸಾಬಾ ಲಾಸಲೊ; ಹಂಗರಿಯವರು. ಜೆಮ್ಶೆಡ್‌ಪುರ ಎಫ್‌ಸಿ, ಒಡಿಶಾ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಕೂಡ ಸ್ಪೇನ್ ಹೊರತಾದ ಕೋಚ್‌ ನೇಮಕ ಮಾಡಿಕೊಂಡಿವೆ. ಆಟಗಾರರ ಪೈಕಿ ಅತಿ ಹೆಚ್ಚು, ಐದು ಮಂದಿಯನ್ನು ಗೋವಾ ತನ್ನತ್ತ ಸೆಳೆದುಕೊಂಡಿದೆ. ಚೆನ್ನೈಯಿನ್ ಎಫ್‌ಸಿ ತಂಡವು ಆಟಗಾರರ ವಿಷಯದಲ್ಲೂ ‘ಸ್ಪೇನ್‌ ವಿರೋಧಿ’ ಧೋರಣೆ ಪ್ರಕಟಿಸಿದ್ದು ಒಬ್ಬರನ್ನು ಕೂಡ ತಂಡಕ್ಕೆ ಕರೆಸಿಕೊಂಡಿಲ್ಲ. ಲೀಗ್‌ನ ಹೊಸ ತಂಡ ಈಸ್ಟ್ ಬೆಂಗಾಲ್ ಕೂಡ ಇದೇ ಸಿದ್ಧಾಂತಕ್ಕೆ ಮೊರೆ ಹೋಗಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಸ್ಪೇನ್‌ನ ಕೋಚ್‌ ಹೊಂದಿದ್ದರೂ ಆಟಗಾರರನ್ನು ಕರೆಸಿಕೊಂಡಿಲ್ಲ.

ಇಂಗ್ಲೆಂಡ್ ನಂತರ ಭಾರತ?

ಪ್ರೀಮಿಯರ್ ಲೀಗ್‌ಗೆ ಹೆಸರುವಾಸಿಯಾಗಿರುವ ಇಂಗ್ಲೆಂಡ್ ಹೊರತುಪಡಿಸಿದರೆ ಅತಿ ಹೆಚ್ಚು ಸ್ಪೇನ್ ಆಟಗಾರರನ್ನು ಕರೆಸಿಕೊಳ್ಳುವ ದೇಶ ಭಾರತವೇ…? ಹೌದು ಎನ್ನುತ್ತದೆ, ಫುಟ್‌ಬಾಲ್ ಆಟಗಾರರ ವಲಸೆ ಮೇಲೆ ಕಣ್ಣಿಡುವ ಸಿಐಇಎಸ್ ಸಂಸ್ಥೆ. ಆ ಸಂಸ್ಥೆ ಪ್ರಕಾರ 2019ರ ಮೇ ತಿಂಗಳಿಂದ ಈ ವರ್ಷದ ಸೆಪ್ಟೆಂಬರ್ ವರೆಗೆ ಸ್ಪೇನ್‌ನಿಂದ 409 ಫುಟ್‌ಬಾಲ್ ಆಟಗಾರರು ’ಗಡಿ‘ ದಾಟಿದ್ದಾರೆ. ಈ ಪೈಕಿ 49 ಮಂದಿ ಇಂಗ್ಲೆಂಡ್ ಕಡೆಗೆ ಸಾಗಿದ್ದಾರೆ. 38 ಮಂದಿ ಭಾರತಕ್ಕೆ ಬಂದಿದ್ದಾರೆ. ಇದರಲ್ಲಿ 20 ಮಂದಿಗೆ ಐಎಸ್‌ಎಲ್‌ನಲ್ಲಿ ಅವಕಾಶ ಲಭಿಸಿದೆ. ಮೊದಲ ಆವೃತ್ತಿಯಲ್ಲಿ ಕೇವಲ 10 ಮಂದಿ ಸ್ಪೇನ್ ಆಟಗಾರರು ಇದ್ದರು.

ವಿವಿಧ ತಂಡಗಳ ಕೊಚ್‌ಗಳು
ತಂಡ;ಕೋಚ್;ದೇಶ

ಬೆಂಗಳೂರು ಎಫ್‌ಸಿ;ಕಾರ್ಲಸ್ ಕ್ವದ್ರತ್;ಸ್ಪೇನ್

ಎಟಿಕೆಎಂಬಿ ಎಫ್‌ಸಿ;ಆ್ಯಂಟೊನಿಯೊ ಹಬಾಸ್;ಸ್ಪೇನ್

ಚೆನ್ನೈಯಿನ್ ಎಫ್‌ಸಿ;ಸಾಬಾ ಲಾಸಲೊ;ಹಂಗೆರಿ

ಎಫ್‌ಸಿ ಗೋವಾ;ಜುವಾನ್ ಫೆರಾಂಡೊ;ಸ್ಪೇನ್

ಹೈದರಾಬಾದ್ ಎಫ್‌ಸಿ;ಮ್ಯಾನ್ಯುಯೆಲ್ ರೋಕಾ;ಸ್ಪೇನ್

ಜೆಮ್ಶೆಡ್‌ಪುರ ಎಫ್‌ಸಿ;ಒವೆನ್ ಕೊಯ್ಲೆ;ಇಂಗ್ಲೆಂಡ್‌

ಕೇರಳ ಬ್ಲಾಸ್ಟರ್ಸ್‌;ಕಿಬು ಒಕುನಾ;ಸ್ಪೇನ್‌

ಒಡಿಶಾ ಎಫ್‌ಸಿ;ಸ್ಟುವರ್ಟ್ ಬಾಕ್ಸ್ಟರ್;ಇಂಗ್ಲೆಂಡ್

ನಾರ್ತ್‌ಈಸ್ಟ್ ಯುನೈಟೆಡ್;ಜರಾಲ್ಡ್ ನೂಸ್;ಸ್ಪೇನ್

ಮುಂಬೈ ಸಿಟಿ ಎಫ್‌ಸಿ;ಸರ್ಜಿಯೊ ಲೊಬೆರಾ;ಸ್ಪೇನ್

ಎಸ್‌ಸಿ ಈಸ್ಟ್ ಬೆಂಗಾಲ್;ರೋಬಿ ಫಾವ್ಲರ್;ಇಂಗ್ಲೆಂಡ್

ತಂಡಗಳಲ್ಲಿ ಸ್ಪೇನ್ ಆಟಗಾರರು

ತಂಡ;ಆಟಗಾರರು

ಬಿಎಫ್‌ಸಿ;3

ಎಟಿಕೆಎಂಬಿ;3

ಎಫ್‌ಸಿ ಗೋವಾ;5

ಹೈದರಾಬಾದ್;3

ಜೆಮ್ಶೆಡ್‌ಪುರ;1

ಕೇರಳ ಬ್ಲಾಸ್ಟರ್ಸ್‌;2

ಒಡಿಶಾ;1

ಮುಂಬೈ ಸಿಟಿ;2

ತಂಡಗಳಲ್ಲಿರುವ ಇತರ ದೇಶದವರು

ದೇಶ;ಆಟಗಾರರು

ಆಸ್ಟ್ರೇಲಿಯಾ;8

ಬ್ರೆಜಿಲ್;7

ಇಂಗ್ಲೆಂಡ್‌;5

ಫ್ರಾನ್ಸ್‌;4

ಪೋರ್ಚುಗಲ್;2

ಐರ್ಲೇಂಡ್‌;1

ಫಿಜಿ;1

ನಾರ್ವೆ;1

ಜಮೈಕಾ;1

ಬೋಸ್ನಿಯಾ;1

ತಜಿಕಿಸ್ತಾನ;1

ಸ್ಲೊವಾಕಿಯಾ;1

ಅರ್ಜೆಂಟೀನಾ;1

ನೈಜೀರಿಯಾ;1

ಜಿಂಬಾಬ್ವೆ;1

ಮೊರೊಕ್ಕೊ;1

ಸೆನೆಗಲ್;1

ದ.ಆಫ್ರಿಕಾ;1

ಬೆಲ್ಜಿಯಂ;1

ಉರುಗ್ವೆ;1

ಗಿನಿ;1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT