ಮಾಲಾಂಗ್, ಇಂಡೊನೇಷ್ಯಾ (ರಾಯಿಟರ್ಸ್/ಎಎಫ್ಪಿ): ಇಲ್ಲಿಯ ಬಿಆರ್ಐಲೀಗ್ನ ಫುಟ್ಬಾಲ್ ಪಂದ್ಯವೊಂದು ವಿಶ್ವದ ಪ್ರಮುಖ ಕ್ರೀಡಾ ದುರಂತವೊಂದಕ್ಕೆ ಸಾಕ್ಷಿಯಾಯಿತು.ಕಂಜುರುಹಾನ್ ಕ್ರೀಡಾಂಗಣದಲ್ಲಿ ಸ್ಥಳೀಯ ಅರೆಮಾ ಎಫ್ಸಿ ಮತ್ತು ಪೆರ್ಸೆಬಾಯಾ ಸುರಬಯಾ ನಡುವಣ ಪಂದ್ಯದ ಬಳಿಕ ನಡೆದ ಹಿಂಸಾಚಾರಮತ್ತು ಕಾಲ್ತುಳಿತದಿಂದಾಗಿ 125 ಜನ ಪ್ರಾಣ ಕಳೆದುಕೊಂಡು 320ಕ್ಕೂ ಅಧಿಕ ಮಂದಿ ಗಾಯಗೊಂಡರು.

‘ಕಂಜುರುಹಾನ್ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸ್ಥಳೀಯ ಅರೆಮಾ ಎಫ್ಸಿ ತಂಡ2–3 ಗೋಲುಗಳ ಅಂತರದಿಂದ ಪರಾಭವಗೊಂಡಿತ್ತು. ಇದರಿಂದ ರೊಚ್ಚಿಗೆದ್ದ ತಂಡದ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗ ಮಾಡಿದಾಗ ಉಂಟಾದ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದಾಗಿ ದುರಂತ ಸಂಭವಿಸಿದೆ‘ ಎಂದು ಪೂರ್ವ ಜಾವಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಪರಿಸ್ಥಿತಿ ಅರಾಜಕತೆಗೆ ತಿರುಗಿತ್ತು. ಜನರು ಅಧಿಕಾರಿಗಳಮೇಲೆ ದಾಳಿ ನಡೆಸತೊಡಗಿದರು ಮತ್ತು ಕಾರುಗಳನ್ನು ಧ್ವಂಸ ಮಾಡಿದರು. ಅಭಿಮಾನಿಗಳು ನಿರ್ಗಮನ ಗೇಟ್ ಕಡೆ ಓಡತೊಡಗಿದಾಗ ಈ ದುರಂತ ನಡೆಯಿತು‘ ಎಂದು ನಿಕೊ ಹೇಳಿದ್ದಾರೆ.

‘ಘಟನೆಯಿಂದಾಗಿ ಸತ್ತವರ ಸಂಖ್ಯೆ 174 ಎಂದು ಈ ಮೊದಲು ವರದಿಯಾಗಿತ್ತು. ಆದರೆ ಕೆಲವರನ್ನು ಬೇರೊಂದು ಆಸ್ಪತ್ರೆಗೆ ಶಿಫಾರಸು ಮಾಡಿದಾಗ ಅಲ್ಲಿಯೂ ಅವರ ಹೆಸರು ದಾಖಲಾಗಿದ್ದರಿಂದ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸವಾಗಿತ್ತು‘ ಎಂದು ಪೂರ್ವ ಜಾವಾದ ಡೆಪ್ಯುಟಿ ಗವರ್ನರ್ ಎಮಿಲ್ ದರ್ದಕ್ ಹೇಳಿದ್ದಾರೆ. ಪೊಲೀಸರು 10 ಆಸ್ಪತ್ರೆಗಳಿಂದ ದಾಖಲೆಗಳನ್ನು ಸಂಗ್ರಹಿಸಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆಯಲ್ಲಿ320ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ), ಸ್ಥಳೀಯ ಫುಟ್ಬಾಲ್ ಸಂಸ್ಥೆಗೆ ತಿಳಿಸಿದೆ.

ಪಂದ್ಯದ ಬಳಿಕ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ ವಿಡಿಯೊ ತುಣುಕೊಂದನ್ನು ಸ್ಥಳೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು ಈ ವಿಡಿಯೊಗಳಲ್ಲಿ ದಾಖಲಾಗಿದೆ. ಪ್ರಜ್ಞೆ ಕಳೆದುಕೊಂಡವರನ್ನು ಇನ್ನುಳಿದ ಅಭಿಮಾನಿಗಳು ಹೊತ್ತುಕೊಂಡು ಹೋಗುತ್ತಿರುವುದು ಇದರಲ್ಲಿದೆ.

‘ಕೆಲವರ ಮಿದುಳಿಗೆ ಹಾನಿಯಾಗಿದೆ. ಸಾವಿಗೀಡಾದವರಲ್ಲಿ ಐದು ವರ್ಷದ ಮಗುವೂ ಇದೆ‘ ಎಂದು ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರು ಮೆಟ್ರೊ ಟಿವಿಗೆ ತಿಳಿಸಿದ್ದಾರೆ.

ಘಟನೆಯ ಕುರಿತು ತನಿಖೆ ಪೂರ್ಣವಾಗುವವರೆಗೂ ದೇಶದ ಪ್ರಮುಖ ಲೀಗ್, ಬಿಆರ್ಐನ ಎಲ್ಲ ಪಂದ್ಯಗಳನ್ನು ಸ್ಥಗಿತಗೊಳಿಸಲು ಇಂಡೊನೇಷ್ಯಾ ಫುಟ್ಬಾಲ್ ಅಧ್ಯಕ್ಷ ಜೊಕೊವಿ ಹೇಳಿದ್ದಾರೆ.

ಅಶ್ರುವಾಯು ಪ್ರಯೋಗ ನಿಯಮ: ಪಂದ್ಯಗಳ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಯಾವುದೇ ಬಂದೂಕು ಅಥವಾ ಅಶ್ರುವಾಯು ಪ್ರಯೋಗಿಸಬಾರದು‘ ಎಂದು ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ನ (ಫಿಫಾ) ನಿಯಮಗಳು ಹೇಳುತ್ತವೆ. ಈ ಕುರಿತ ಪ್ರಶ್ನೆಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಜಾವಾ ಪೊಲೀಸರು ನಿರಾಕರಿಸಿದ್ದಾರೆ.

ಘಟನೆಯ ಕುರಿತು ವರದಿ ನೀಡುವಂತೆ ಫಿಫಾ, ಇಂಡೊನೇಷ್ಯಾದ ಪಿಎಸ್ಎಸ್ಐ ಫುಟ್ಬಾಲ್ ಸಂಸ್ಥೆಗೆ ಆದೇಶಿಸಿದೆ. ಪಿಎಸ್ಎಸ್ಐ ತನ್ನ ತನಿಖಾ ತಂಡವನ್ನು ಮಾಲಾಂಗ್ಗೆ ಕಳುಹಿಸಿಕೊಟ್ಟಿದೆ. ದೇಶದ ಮಾನವ ಹಕ್ಕುಗಳ ಆಯೋಗವೂ ಅಶ್ರುವಾಯು ಪ್ರಯೋಗದ ಕುರಿತು ತನಿಖೆ ನಡೆಸಲು ಯೋಜಿಸಿದೆ.

ಇಂಡೊನೇಷ್ಯಾದಲ್ಲಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯು ಭದ್ರತಾ ಕ್ರಮಗಳನ್ನು ಟೀಕಿಸಿದೆ. ಅಧಿಕಾರಿಗಳ ಇಂತಹ ಬಲಪ್ರಯೋಗ ಸಮರ್ಥಿಸಲು ಸಾಧ್ಯವಿಲ್ಲ ಎಂದಿದೆ.

ಸ್ಪ್ಯಾನಿಶ್ ಫುಟ್ಬಾಲ್ ಕ್ಲಬ್, ಭಾನುವಾರ ಪಂದ್ಯಗಳು ಆರಂಭಕ್ಕೂ ಮೊದಲು ಒಂದು ನಿಮಿಷದ ಮೌನಾಚರಣೆ ಮಾಡಿತು.

ಫುಟ್ಬಾಲ್ ಅಂಗಣದಲ್ಲಿ ಸಂಭವಿಸಿದ ಪ್ರಮುಖ ದುರಂತ

l1964, ಮೇ 24: ಲಿಮಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ಪೆರು ತಂಡವು ಆರ್ಜೆಂಟೀನಾಕ್ಕೆ ಮುಖಾಮುಖಿಯಾಗಿತ್ತು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 320 ಮಂದಿ ಸಾವಿಗೀಡಾಗಿ, 1000ಕ್ಕೂ ಅಧಿಕ ಮಂದಿ ಗಾಯಗೊಂಡ ವರದಿಯಾಗಿತ್ತು.

l1982, ಅಕ್ಟೋಬರ್ 20: ರಷ್ಯಾದ ಲುಜ್ನಿಕಿ ಕ್ರೀಡಾಂಗಣದಲ್ಲಿ ಸ್ಪಾರ್ಟಾಕ್ ಮಾಸ್ಕೊ ಮತ್ತು ನೆದರ್ಲೆಂಡ್ಸ್ನ ಹಾರ್ಲೆಮ್ ತಂಡಗಳ ನಡುವಣ ಯುಇಎಫ್ಎ ಕಪ್ ಪಂದ್ಯದ ವೇಳೆ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 66 ಎಂದು ಹೇಳಲಾಗಿತ್ತು. ಆದರೆ 340ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು.

l2001, ಮೇ 9: ಘಾನಾದ ಅಕ್ರಾ ಕ್ರೀಡಾಂಗಣದಲ್ಲಿ ಹಾರ್ಟ್ಸ್ ಆಫ್ ಓಕ್ಸ್ ಮತ್ತು ಕುಮಾಸಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಮ್ಮ ತಂಡ ಸೋತಿದ್ದಕ್ಕೆ ಕೋಪಗೊಂಡ ಕುಮಾಸಿ ಅಭಿಮಾನಿಗಳು ಹಿಂಸಾಚಾರ ನಡೆಸಿದ್ದರು. ಪೊಲೀಸರು ಅಶ್ರುವಾಯು, ಗ್ರೆನೇಡ್ಗಳನ್ನು ಪ್ರಯೋಗಿಸಿದ್ದರಿಂದ ಕಾಲ್ತುಳಿತ ಉಂಟಾಗಿ 126 ಮಂದಿ ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.