ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾಲಿಫೈರ್ ಪಂದ್ಯಗಳವರೆಗೆ ಸ್ಟಿಮಾಚ್‌ಗೆ ಹೊಣೆ: ಎಐಎಫ್‌ಎಫ್‌

Published 4 ಏಪ್ರಿಲ್ 2024, 11:51 IST
Last Updated 4 ಏಪ್ರಿಲ್ 2024, 11:51 IST
ಅಕ್ಷರ ಗಾತ್ರ

ನವದೆಹಲಿ: ಕುವೈತ್‌ ಮತ್ತು ಕತಾರ್‌ ವಿರುದ್ಧದ ಫೀಫಾ ವಿಶ್ವಕಪ್‌ ಎರಡನೇ ಸುತ್ತಿನ ಅರ್ಹತಾ ಪಂದ್ಯಗಳಿಗೂ ಇಗರ್‌ ಸ್ಟಿಮಾಚ್ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಮುಂಬರುವ ಈ ಎರಡು ಪಂದ್ಯಗಳತ್ತ ಗಮನ ಕೇಂದ್ರೀಕರಿಸುವಂತೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಅವರಿಗೆ ಸೂಚಿಸಿದೆ.

ಸ್ಟಿಮಾಚ್‌ ಅವರ ಕಾರ್ಯನಿರ್ವಹಣೆಯ ಬಗ್ಗೆ ಫೆಡರೇಷನ್‌ಗೆ ಸಮಾಧಾನ ಇರಲಿಲ್ಲ. ಗುವಾಹಟಿಯಲ್ಲಿ ಮಾರ್ಚ್‌ 26ರಂದು ನಡೆದ ತವರಿನ ಲೆಗ್‌ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದೆದುರು ಆಘಾತಕಾರಿ ಸೋಲನುಭವಿಸಿದ ನಂತರ ಕ್ರೊವೇಷ್ಯಾದ ಈ ವಿಶ್ವಕಪ್‌ ಆಟಗಾರನನ್ನು ಕೋಚ್‌ ಸ್ಥಾನದಿಂದ ತೆಗೆದುಹಾಕುವಂತೆ ಮಾಜಿ ಅಂತರರಾಷ್ಟ್ರೀಯ ಆಟಗಾರ ಐ.ಎಂ. ವಿಜಯನ್ ನೇತೃತ್ವದ ತಾಂತ್ರಿಕ ಸಮಿತಿ ವರದಿ ನೀಡಿತ್ತು. ಇದಾಗಿ ವಾರ ಆಗುವಷ್ಟರಲ್ಲಿ ಫೆಡರೇಷನ್‌ ನಿರ್ಧಾರ ಕೈಗೊಂಡಿದೆ.

ಅಫ್ಗಾನಿಸ್ತಾನ ಪಂದ್ಯದ ವಿರುದ್ಧ ಸೋಲಿನ ಬೆನ್ನಲ್ಲೇ, ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ರಚಿಸಿದ, ಉಪಾಧ್ಯಕ್ಷ ಎನ್‌.ಎ.ಹ್ಯಾರಿಸ್ ನೇತೃತ್ವದ ಸಮಿತಿಯು, ಮಂಗಳವಾರ ವರ್ಚವಲ್ ಸಭೆಯಲ್ಲಿ ಸ್ಟಿಮಾಚ್‌ ಜೊತೆ ಸಮಾಲೋಚನೆ ನಡೆಸಿತ್ತು.

‘ಹೆಡ್‌ ಕೋಚ್‌ ಜೊತೆ ಸೌಹಾರ್ದಯುತವಾಗಿ ಮಾತುಕತೆ ನಡೆದಿದೆ. ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ನಮಗೆ ಇನ್ನೂ ಎರಡು ಪಂದ್ಯಗಳು ಆಡಲು ಉಳಿದಿದ್ದು, ಮೂರನೇ ಸುತ್ತಿಗೆ ಏರಿ ಇತಿಹಾಸ ಸ್ಥಾಪಿಸುವ ಅವಕಾಶವಿದೆ’ ಎಂದು ಎಐಎಫ್‌ಎಫ್‌ ಕಾರ್ಯನಿರ್ವಹಣಾ ಸಮಿತಿ ಸದಸ್ಯರೂ ಆಗಿರುವ ವಿಜಯನ್ ಹೇಳಿದ್ದಾರೆ.

‘ಇದು ಉಳಿದ ಎರಡು ಪಂದ್ಯಗಳ ಕಡೆ ಗಮನ ಕೇಂದ್ರಿಕರಿಸಲು ಇದು ಸೂಕ್ತ ಸಮಯ. ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ಮೂಡುವಂತೆ ರಾಷ್ಟ್ರೀಯ ತಂಡದ ಬೆನ್ನಿಗೆ ನಿಲ್ಲಬೇಕಾಗಿದೆ’ ಎಂದಿದ್ದಾರೆ.

ಸಮಾಲೋಚನೆ ವೇಳೆ ಸ್ಟಿಮಾಚ್ ಅವರಿಗೂ ವಿವರಣೆ ನೀಡುವಂತೆ ತಿಳಿಸಲಾಯಿತು. ಭಾರತ ಮುಂದಿನ ಹಂತಕ್ಕೆ (ಮೂರನೇ ಸುತ್ತಿಗೆ) ತೇರ್ಗಡೆಯಾಗಲು ವಿಫಲವಾದಲ್ಲಿ ತಾವು ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದರು.

2019ರಲ್ಲಿ ಸ್ಟಿಮಾಚ್ ಅವರು ಭಾರತ ತಂಡದ ತರಬೇತಿಯ ಹೊಣೆ ವಹಿಸಿದ್ದರು. ಕಳೆದ ವರ್ಷ ಅವರ ಗುತ್ತಿಗೆಯನ್ನು 2026ರವರೆಗೆ ವಿಸ್ತರಿಸಲಾಗಿತ್ತು.

ಭಾರತ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಕುವೈಟ್‌ ವಿರುದ್ಧ ಪಂದ್ಯವನ್ನು ತವರಿನಲ್ಲಿ (ಕೋಲ್ಕತ್ತದ ಸಾಲ್ಟ್‌ ಲೇಕ್ ಕ್ರೀಡಾಂಗಣ) ಜೂನ್‌ 6ರಂದು ಆಡಲಿದೆ. ಜೂನ್‌ 11ರಂದು ಕತಾರ್ ವಿರುದ್ಧದ ಪಂದ್ಯವನ್ನು ಕತಾರ್‌ನಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT