ಶುಕ್ರವಾರ, ಆಗಸ್ಟ್ 6, 2021
21 °C

ಕೋಪಾ ಅಮೆರಿಕ: ಕ್ವಾರ್ಟರ್ ಫೈನಲ್‌ಗೆ ಉರುಗ್ವೆ, ಪರಾಗ್ವೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಾವೊ ‍ಪೌಲೊ: ಉರುಗ್ವೆ ಮತ್ತು ಪರಾಗ್ವೆ ತಂಡಗಳು ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ನಾಕೌಟ್ ಹಂತ ಪ್ರವೇಶಿಸಿದವು. ಗುರುವಾರ ರಾತ್ರಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಉರುಗ್ವೆ ತಂಡ ಬೊಲಿವಿಯಾವನ್ನು 2–0 ಅಂತರದಲ್ಲಿ ಮಣಿಸಿತು. ಚಿಲಿಯನ್ನು 2–0ಯಿಂದ ‍ಪರಾಗ್ವೆ ಸೋಲಿಸಿತು.

ಟೂರ್ನಿಯಲ್ಲಿ ಉರುಗ್ವೆಗೆ ಇದು ಮೊದಲ ಜಯವಾಗಿದೆ. ಬೊಲಿವಿಯಾಗೆ ಈ ಪಂದ್ಯ ನಿರ್ಣಾಯಕವಾಗಿತ್ತು. ಮತ್ತೊಂದು ಪಂದ್ಯದಲ್ಲಿ ಪರಾಗ್ವೆ ಸೋತಿದ್ದರೆ ಬೊಲಿವಿಯಾಗೆ ನಾಕೌಟ್ ಹಂತಕ್ಕೇರುವ ಸಾಧ್ಯತೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.

‘ಎ’ ಗುಂಪಿನಲ್ಲಿ ಏಳು ಪಾಯಿಂಟ್‌ಗಳೊಂದಿಗೆ ಅರ್ಜೆಂಟೀನಾ ಅಗ್ರಸ್ಥಾನದಲ್ಲಿದ್ದು ಆರು ಪಾಯಿಂಟ್‌ಗಳೊಂದಿಗೆ ಪರಾಗ್ವೆ ಎರಡನೇ ಸ್ಥಾನ ಗಳಿಸಿದೆ. ಐದು ಪಾಯಿಂಟ್ ಗಳಿಸಿರುವ ಚಿಲಿ ಮೂರನೇ ಸ್ಥಾನದಲ್ಲಿದೆ.

ಬೊಲಿವಿಯಾ ಗೋಲ್‌ಕೀಪರ್ ಕಾರ್ಲೊಸ್ ಲಾಂಪೆ 40ನೇ ನಿಮಿಷದಲ್ಲಿ ನೀಡಿದ ಉಡುಗೊರೆ ಗೋಲಿನ ನೆರವಿನಿಂದ ಪಂದ್ಯದಲ್ಲಿ ಉರುಗ್ವೆ ಮುನ್ನಡೆ ಗಳಿಸಿತು. 79ನೇ ನಿಮಿಷದಲ್ಲಿ ಮಿಂಚಿನ ವೇಗದಲ್ಲಿ ಗೋಲು ಗಳಿಸಿದ ಎಡಿನ್ಸನ್ ಕವಾನಿ ಮುನ್ನಡೆಯನ್ನು ಹೆಚ್ಚಿಸಿದರು.

ಪರಾಗ್ವೆ ತಂಡದ ಮೊದಲ ಗೋಲು 33ನೇ ನಿಮಿಷದಲ್ಲಿ ಬ್ರಯಾನ್ ಸಮುಡಿಯೊ ಅವರ ಹೆಡರ್ ಮೂಲಕ ಬಂತು. 58ನೇ ನಿಮಿಷದಲ್ಲಿ ಮಿಗ್ಯುಯೆಲ್ ಅಲ್ಮಿರಾನ್ ಎರಡನೇ ಗೋಲು ತಂದುಕೊಟ್ಟರು. ಉರುಗ್ವೆ ಮತ್ತು ಪರಾಗ್ವೆ ಸೋಮವಾರ ಮುಖಾಮುಖಿಯಾಗಲಿದ್ದು ಹಾಲಿ ಚಾಂಪಿಯನ್ ಬ್ರೆಜಿಲ್ ತಂಡವನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಿಸುವ ತಂಡ ಯಾವುದು ಎಂಬುದು ಈ ಪಂದ್ಯದ ನಂತರ ನಿರ್ಧಾರವಾಗಲಿದೆ.

ಯೂರೊ ಕಪ್‌: ವೇಲ್ಸ್‌–ಡೆನ್ಮಾರ್ಕ್ ಮುಖಾಮುಖಿ

ಆ್ಯಮ್‌ಸ್ಟರ್‌ಡ್ಯಾಂ (ಎಪಿ): ಯೂರೊ ಕಪ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯಗಳು ಶನಿವಾರ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ವೇಲ್ಸ್ ಮತ್ತು ಡೆನ್ಮಾರ್ಕ್‌ ಮುಖಾಮುಖಿಯಾಗಲಿವೆ. 

ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಫಿನ್ಲೆಂಡ್ ಮತ್ತು ಬೆಲ್ಜಿಯಂ ವಿರುದ್ಧ ಸೋತಿದ್ದ ಡೆನ್ಮಾರ್ಕ್‌ ನಂತರ ರಷ್ಯಾವನ್ನು 4–1ರಲ್ಲಿ ಮಣಿಸಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ತಲುಪಿತ್ತು.  

ಟರ್ಕಿ ವಿರುದ್ಧ ಜಯ ಗಳಿಸಿದ ನಂತರ ಸ್ವಿಟ್ಜರ್ಲೆಂಡ್‌ ಎದುರು ಡ್ರಾ ಸಾಧಿಸಿದ ವೇಲ್ಸ್‌ ನಂತರ ಇಟಲಿ ವಿರುದ್ಧ 0–1ರಲ್ಲಿ ಸೋತಿತ್ತು. ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿ ನಾಕೌಟ್ ಹಂತಕ್ಕೇರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು