ಪ್ಯಾರಿಸ್: ಮೊರಾಕ್ಕೊ ತಂಡ ಅಮೋಘ ಪ್ರದರ್ಶನ ನೀಡಿ, ಒಲಿಂಪಿಕ್ಸ್ ಫುಟ್‌ಬಾಲ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಶುಕ್ರವಾರ 4–0 ಗೋಲುಗಳಿಂದ ಸೋಲಿಸಿತು.
ಸಿಡ್ನಿ ಒಲಿಂಪಿಕ್ಸ್ (2000) ನಂತರ ಇದೇ ಮೊದಲ ಬಾರಿ ಅಮೆರಿಕ ನಾಕೌಟ್ ತಲುಪಿತ್ತು. ಆದರೆ ಮೊರಾಕ್ಕೊ ತಂಡದ ಸ್ಫೂರ್ತಿಯುತ ಪ್ರದರ್ಶನದ ಎದುರು ಅಮೆರಿಕದ ಆಟ ಹೆಚ್ಚೇನೂ ನಡೆಯಲಿಲ್ಲ. ಮೊರಾಕ್ಕೊ ಗುಂಪು ಹಂತದಲ್ಲಿ ಪ್ರಬಲ ಅರ್ಜೆಂಟೀನಾ ತಂಡವನ್ನು ಸೋಲಿಸಿತ್ತು.
ಮೊರಾಕೊ ಸೋಮವಾರ ಮಾರ್ಸೆಯಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ಸ್ಪೇನ್ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.
ಪಾರ್ಕ್ ದೆ ಪ್ರಾಸ್ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಸೌಫಿಯಾನ್ ರಹಿಮಿ, ಇಲಿಯಾಸ್ ಅಖೊಮಾಚ್, ಅಚ್ರಫ್ ಹಕಿಮಿ ಮತ್ತು ಮೆಹ್ದಿ ಮಹೋಬ್ ಗೋಲು ಗಳಿಸಿದರು.
ಮೊರಾಕ್ಕೊ ಇದೇ ಮೊದಲ ಬಾರಿ ಒಲಿಂಪಿಕ್ಸ್ ಸೆಮಿಫೈನಲ್ ತಲುಪಿದೆ. 2022ರಲ್ಲಿ ಮೊದಲ ಬಾರಿ ಈ ತಂಡ ವಿಶ್ವಕಪ್ ಸೆಮಿಫೈನಲ್ ತಲುಪಿದ್ದು, ಆ ಸಾಧನೆ ಮಾಡಿದ ಆಫ್ರಿಕಾದ ಮೊದಲ ದೇಶವೆನಿಸಿತ್ತು.
‘ಇದು ನಮಗೆಲ್ಲಾ ಚಾರಿತ್ರಿಕ ದಿನ. ನಮಗೆ ಹೆಮ್ಮೆಯೆನಿಸಿದೆ’ ಎಂದು ತಂಡದ ನಾಯಕ ಹಕಿಮಿ ಹೇಳಿದರು. ‘ನನ್ನ ಗುರಿ ಒಂದೇ, ಪದಕ ಗೆಲುವುದು’ ಎಂದರು. ಪ್ಯಾರಿಸ್‌ನಲ್ಲಿ ಮೊರಾಕೊ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ಸೆಮಿಫೈನಲ್‌ನಲ್ಲಿ ಮಾರ್ಸೆಗೆ ಹೋಗಿ ತಂಡವನ್ನು ಬೆಂಬಲಿಸುವ ನಿರೀಕ್ಷೆಯಿದೆ.