ಶುಕ್ರವಾರ, ಮಾರ್ಚ್ 31, 2023
22 °C

ಆಸ್ಟ್ರೇಲಿಯಾ ಓಪನ್‌ ಟೆನಿಸ್: ಎರಡನೇ ಸುತ್ತಿಗೆ ಗಾರ್ಸಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌ (ಎಎಫ್‌ಪಿ): ಬ್ರಿಟನ್‌ನ ಆ್ಯಂಡಿ ಮರೆ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಯಾಸದ ಗೆಲುವಿನೊಂದಿಗೆ ಎರಡನೇ ಸುತ್ತಿಗೆ ಮುನ್ನಡೆದರು.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿ ಪಂದ್ಯದಲ್ಲಿ ಮರೆ 6-3, 6-3, 4-6, 6-7 (7/9), 7-6 (10/6) ರಲ್ಲಿ ಇಟಲಿಯ ಮಟೆಯೊ ಬೆರೆಟಿನಿ ಅವರನ್ನು ಮಣಿಸಿದರು.

35 ವರ್ಷದ ಮರೆ, ಈ ಪಂದ್ಯ ಗೆಲ್ಲಲು 4 ಗಂಟೆ 49 ನಿಮಿಷ ಆಡಬೇಕಾಯಿತು. ಎದುರಾಳಿಗೆ ಕೇವಲ ಆರು ಗೇಮ್‌ಗಳನ್ನು ಬಿಟ್ಟುಕೊಟ್ಟು ಮೊದಲ ಎರಡು ಸೆಟ್‌ಗಳನ್ನು ಜಯಿಸಿದ್ದ ಬ್ರಿಟನ್‌ನ ಆಟಗಾರ ಸುಲಭ ಜಯದ ನಿರೀಕ್ಷೆಯಲ್ಲಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸೆಟ್‌ ಗೆದ್ದ ಬೆರೆಟಿನಿ ಪಂದ್ಯದಲ್ಲಿ ಸಮಬಲ ಸಾಧಿಸಿದರು.

ಮಾತ್ರವಲ್ಲ, ನಿರ್ಣಾಯಕ ಸೆಟ್‌ಅನ್ನು ಟೈಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತ ಮರೆ ಟೈಬ್ರೇಕರ್‌ನಲ್ಲಿ ಗೆದ್ದು ಸೋಲಿನಿಂದ ಪಾರಾದರು.

ಐದನೇ ಶ್ರೇಯಾಂಕದ ಆಟಗಾರ ರಷ್ಯಾದ ಆಂಡ್ರೆ ರುಬ್ಲೆವ್ 6–3, 6–4, 6–2 ರಲ್ಲಿ 2020ರ ರನ್ನರ್ಸ್‌ ಅಪ್‌ ಡಾಮಿನಿಕ್‌ ಥಿಯೆಮ್‌ ವಿರುದ್ಧ ಗೆದ್ದರು. ಮಣಿಕಟ್ಟಿನ ಗಾಯದಿಂದ ಬಳಲಿದ್ದ ಥಿಯೆಮ್‌ ಅವರು 2021 ಮತ್ತು 2022ರ ಋತುವಿನಲ್ಲಿ ಒಟ್ಟು ಒಂಬತ್ತು ತಿಂಗಳು ಅಂಗಳದಿಂದ ದೂರವುಳಿದಿದ್ದರು.

ಎಂಟನೇ ಶ್ರೇಯಾಂಕದ ಆಟಗಾರ ಅಮೆರಿಕದ ಟೇಲರ್‌ ಫ್ರಿಟ್ಜ್‌ 6–4, 6–2, 4–6, 7–5 ರಲ್ಲಿ ಜಾರ್ಜಿಯದ ನಿಕೊಲಸ್ ಬಸಿಲಾಶ್ವಿಲಿ ವಿರುದ್ಧ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕ್ರಮವಾಗಿ ನಾಲ್ಕು ಹಾಗೂ ಐದನೇ ಶ್ರೇಯಾಂಕ ಹೊಂದಿರುವ ಕರೊಲಿನಾ ಗಾರ್ಸಿಯಾ ಮತ್ತು ಅರ್ಯಾನ ಸಬಲೆಂಕಾ ಅವರು ಎರಡನೇ ಸುತ್ತಿಗೆ ಮುನ್ನಡೆದರು.

ಫ್ರಾನ್ಸ್‌ನ ಗಾರ್ಸಿಯಾ 65 ನಿಮಿಷಗಳ ಹೋರಾಟದಲ್ಲಿ 6–3, 6–0 ರಲ್ಲಿ ಕೆನಡಾದ ಕ್ಯಾಥರಿನ್ ಸೆವೊವ್ ಅವರನ್ನು ಮಣಿಸಿದರೆ, ಸಬಲೆಂಕಾ 6–1, 6–4 ರಲ್ಲಿ ಥೆರೆಸಾ ಮಾರ್ಟಿನ್‌ಕೊವಾ ವಿರುದ್ಧ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಪ್ಲಿಸ್ಕೊವಾ 6–1, 6–3 ರಲ್ಲಿ ಚೀನಾದ ಕ್ಸಿಯು ವಾಂಗ್‌ ವಿರುದ್ಧ; ಕೆನಡಾದ ಲೈಲಾ ಫೆರ್ನಾಂಡಿಜ್‌ 7–5, 6–2 ರಲ್ಲಿ ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ ವಿರುದ್ಧ ಜಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು