ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಸೆಹ್ರಾವತ್ ಛಲಕ್ಕೆ ಒಲಿದ ಕಂಚು

ಬಾಲ್ಯದಲ್ಲಿ ಅಪ್ಪ, ಅಮ್ಮನ ಅಗಲಿಕೆಯ ದುಃಖ ಅನುಭವಿಸಿದ್ದ ಕುಸ್ತಿಪಟು l ಪ್ಯಾರಿಸ್‌ನಲ್ಲಿ ಭಾರತಕ್ಕೆ ಒಲಿದ ಆರನೇ ಪದಕ
ಸಿಡ್ನಿ ಕಿರಣ್
Published : 9 ಆಗಸ್ಟ್ 2024, 23:32 IST
Last Updated : 9 ಆಗಸ್ಟ್ 2024, 23:32 IST
ಫಾಲೋ ಮಾಡಿ
Comments

ಪ್ಯಾರಿಸ್: ಉತ್ತರ ದೆಹಲಿಯಲ್ಲಿರುವ ಛತ್ರಸಾಲ  ಒಳಾಂಗಣ ಕ್ರೀಡಾಂಗಣವು ವಿಶ್ವದರ್ಜೆಯ ಪೈಲ್ವಾನರನ್ನು ಸಿದ್ಧಗೊಳಿಸುವ ಕಾರ್ಖಾನೆ. ಇದೀಗ ಅಲ್ಲಿಂದ ಬಂದಿರುವ ಶ್ರೇಷ್ಠ ದರ್ಜೆಯ ಕುಸ್ತಿಪಟು ಅಮನ್ ಸೆಹ್ರಾವತ್. 

21 ವರ್ಷದ ಅಮನ್ ಹನ್ನೊಂದು ವರ್ಷದ ಬಾಲಕನಾಗಿದ್ದಾಗ ಅನಾಥರಾಗಿದ್ದರು. ಇದೀಗ ಅವರು ಒಲಿಂಪಿಕ್ ಕೂಟದ ಕುಸ್ತಿಯಲ್ಲಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ರವಿಕುಮಾರ್ ದಹಿಯಾ ಮತ್ತು ಬಜರಂಗ್ ಪೂನಿಯಾ ಅವರಂತಹ ಖ್ಯಾತನಾಮರ ಸಾಲಿಗೆ ಸೇರಿದರು. 

ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ) ಚಾಂಪ್‌ ಡಿ ಮಾರ್ಸ್‌ ಅರೆನಾದಲ್ಲಿ ನಡೆದ ಕಂಚಿನ ಪದಕಕ್ಕಾಗಿ ನಡೆದ 57 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯ ಬೌಟ್‌ನಲ್ಲಿ ಅಮನ್ ಅವರು 13–5ರಿಂದ ಪೋರ್ಟ್‌ರಿಕೊದ ಟಾಯ್ ಡೆರಿಯನ್ ಕ್ರೂಜ್ ವಿರುದ್ಧ ಗೆದ್ದರು. 29 ವರ್ಷದ ಅನುಭವಿ ಕ್ರೂಜ್ ಅವರು ಆಕ್ರಮಣಕಾರಿ ಶೈಲಿಯಲ್ಲಿ ಅಮನ್ ಅವರನ್ನು ಚಿತ್ ಮಾಡುವ ವಿಶ್ವಾಸದಲ್ಲಿ ಮ್ಯಾಟ್‌ಗೆ ಬಂದಿದ್ದರು. ಆದರೆ ಯುವ ಕುಸ್ತಿಪಟು ಚಾಣಾಕ್ಷತೆ ಮತ್ತು ಏಕಾಗ್ರತೆ ಮೇಳೈಸಿಕೊಂಡು ಪಟ್ಟುಗಳನ್ನು ಪ್ರಯೋಗಿಸಿದರು. ಗೆಲುವು ಸಾಧಿಸಿದ ನಂತರ ಕೈಯೆತ್ತಿ ವಿಜಯದ ಸಂಕೇತ ತೋರಿಸಿದರು. ಹಿನ್ನೆಲೆಯಲ್ಲಿ ಮೈಕೆಲ್ ಜಾಕ್ಸನ್ ಅವರ ‘ಬೀಟ್ ಇಟ್’ ಸಂಗೀತ ಮೊಳಗುತ್ತಿತ್ತು. 

ಈ ಒಲಿಂಪಿಕ್ಸ್‌ನಲ್ಲಿ ಬಹಳಷ್ಟು ನಿರಾಶೆಯ ಕ್ಷಣಗಳನ್ನು ಕಂಡಿರುವ ಭಾರತದ ಕುಸ್ತಿ ತಂಡದಲ್ಲಿ ಸಂತಸ ಮೂಡಲು ಕೂಡ ಅಮನ್ ಕಾರಣರಾದರು. ಮಹಿಳೆಯರ ವಿಭಾಗದ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಅವರು ದೇಹತೂಕ ಹೆಚ್ಚಳದ ಕಾರಣದಿಂದ ಅನರ್ಹಗೊಂಡಿದ್ದರು. 53 ಕೆ.ಜಿ. ವಿಭಾಗದಲ್ಲಿ ಅಂತಿಮ್ ಪಂಘಾಲ್ ಅವರು ಸೋತರು. ನಂತರ ನಿಯಮ ಉಲ್ಲಂಘನೆಯ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. 

ಸಂಕಷ್ಟಗಳ ಜೀವನ: 

ಛತ್ರಸಾಲದಲ್ಲಿರುವ ಬಹಳಷ್ಟು ಕುಸ್ತಿಪಟುಗಳಂತೆಯೇ ಅಮನ್ ಅವರ ಜೀವನವೂ ಕಷ್ಟದ ಹಾದಿಯಲ್ಲಿ ಬೆಳೆದುಬಂದಿತು. 8ನೇ ವಯಸ್ಸಿನಲ್ಲಿಯೇ ತಾಯಿಯ ನಿಧನದ ದುಃಖ ಕಾಡಿತು. ಸುಶೀಲ್ ಕುಮಾರ್ ಅವರು 2012ರಲ್ಲಿ ಬೆಳ್ಳಿ ಪದಕ ಜಯಿಸಿದ್ದನ್ನು ನೋಡಿ ಅಮನ್‌ ಕುಸ್ತಿಯತ್ತ ಆಕರ್ಷಿತರಾಗಿದ್ದನ್ನು ತಂದೆ ಗಮನಿಸಿದರು. ಛತ್ರಸಾಲದಲ್ಲಿ ಕುಸ್ತಿ ಕಲಿಕೆಗೆ ಸೇರಿಸಿದರು. ತರಬೇತಿ ಆರಂಭವಾಯಿತು. ಕೆಲ ದಿನಗಳ ನಂತರ ಅನಾರೋಗ್ಯದ ಕಾರಣದಿಂದ ತಂದೆ ಮರಣ ಹೊಂದಿದ ಸುದ್ದಿ   11 ವರ್ಷದ ಬಾಲಕನನ್ನು ಘಾಸಿಗೊಳಿಸಿತು. ಇದರಿಂದಾಗಿ ಅಮನ್ ನಿರ್ಗತಿಕನಾಗಬೇಕಾದ ಪರಿಸ್ಥಿತಿ ಎದುರಾಯಿತು.  

‘10–11 ವರ್ಷದ ವಯಸ್ಸಿನಲ್ಲಿ ಅಮ್ಮ, ಅಪ್ಪನನ್ನು ಕಳೆದುಕೊಂಡ ಅಮನ್ ಸ್ಥಿತಿ ಗಂಭೀರವಾಗಿತ್ತು. ಹಬ್ಬಗಳ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಊರುಗಳಿಗೆ ಹೋಗುತ್ತಿದ್ದೆವು. ಕುಟುಂಬದೊಂದಿಗೆ ಹಬ್ಬ ಆಚರಿಸುತ್ತಿದ್ದೆವು. ಆದರೆ ಅಮನ್‌ಗೆ ಕುಟುಂಬವೇ ಇರಲಿಲ್ಲ. ಆಗೆಲ್ಲ  ಆತ ಛತ್ರಸಾಲದಲ್ಲಿಯೇ ಉಳಿದುಬಿಡುತ್ತಿದ್ದ’ ಎಂದು ಅಮನ್ ಅವರ ಬಾಲ್ಯದ ಕೋಚ್ ಜೈವೀರ್ ಸಿಂಗ್ ಹೇಳಿದರು. 

ಆದರೆ ಛತ್ರಸಾಲದಲ್ಲಿರುವ ಎಲ್ಲರೂ ಅಮನ್ ಬಗ್ಗೆ ಪ್ರೀತಿ ಮತ್ತು ಕಾಳಜಿ ತೋರಿದರು. ಅಮನ್‌ಗೆ ಆಪ್ತಮಿತ್ರನಾಗಿದ್ದ ಸಾಗರ್ ಊಟ, ವಸತಿ ಮತ್ತು ಬಟ್ಟೆಯನ್ನು ಕೊಡುತ್ತಿದ್ದ. ಅಮನ್ ಅವರ ಚಿಕ್ಕಪ್ಪ ಕೂಡ ಬಂದು ನೋಡಿಕೊಂಡು ಹೋಗುತ್ತಿದ್ದರು. ಸತತ ಸಂಪರ್ಕದಲ್ಲಿದ್ದರು.  ಇದರಿಂದಾಗಿ ದುಃಖದಿಂದ ನಿಧಾನವಾಗಿ ಹೊರಬಂದ ಅಮನ್ ಕುಸ್ತಿ ತಮ್ಮ ಜೀವನದ ಪರಮೋಚ್ಛ ಗುರಿ ಎಂದು ನಿರ್ಧರಿಸಿದರು. ಕಠಿಣ ಅಭ್ಯಾಸದಿಂದ ಪಟ್ಟುಗಳನ್ನು ಕರಗತ ಮಾಡಿಕೊಂಡರು. 2021ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. 2022ರಲ್ಲಿ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಗೆದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಕುಸ್ತಿಪಟುವಾದರು.

ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆ.ಜಿ. ವಿಭಾಗದಲ್ಲಿ  ಭಾರತದ ಅಮನ್ ಸೆಹ್ರಾವತ್ (ನೀಲಿ ಪೋಷಾಕು) ಮತ್ತು ಪೋರ್ಟ್‌ರಿಕೊದ ಟಾಯ್ ಡೆರಿಯನ್ ಕ್ರೂಜ್ ಅವರ ಸೆಣಸಾಟ  –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್ 
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆ.ಜಿ. ವಿಭಾಗದಲ್ಲಿ  ಭಾರತದ ಅಮನ್ ಸೆಹ್ರಾವತ್ (ನೀಲಿ ಪೋಷಾಕು) ಮತ್ತು ಪೋರ್ಟ್‌ರಿಕೊದ ಟಾಯ್ ಡೆರಿಯನ್ ಕ್ರೂಜ್ ಅವರ ಸೆಣಸಾಟ  –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್ 

ಇದರಿಂದಗಿ ಅವರು ಹಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದರು. ಅಲ್ಲಿಕಂಚು ಜಯಿಸಿದರು. ಇದರಿಂದಾಗಿ ಅವರಿಗೆ ಪ್ರತ್ಯೇಕ ವಸತಿ ಕೋಣೆ ಲಭಿಸಿತು. 

‘ಏಷ್ಯನ್ ಗೇಮ್ಸ್ ಪದಕ ಜಯಿಸುವವರೆಗೂ ಅವರು ತಮ್ಮ ಮಿತ್ರ ಸಾಗರ್ ಜೊತೆಗೆ ಕೋಣೆಯಲ್ಲಿದ್ದರು. ಹಾಂಗ್‌ಝೌನಿಂದ ಬಂದ ನಂತರ ಒಂದಿಷ್ಟು ಹಣ ಲಭಿಸಿತು. ಅದರಿಂದಾಗಿ ಪ್ರತ್ಯೇಕ ಕೋಣೆ ಪಡೆದರು. ಅಮನ್ ಕಠಿಣ ಪರಿಶ್ರಮಿ ಮತ್ತು ಶ್ರದ್ಧಾವಂತ ಕುಸ್ತಿಪಟುವಾಗಿದ್ದಾರೆ. ಒಲಿಂಪಿಕ್ ಪದಕವು ಅವರ ಜೀವನವನ್ನೇ ಬದಲಿಸುವುದು ಖಚಿತ. 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಇನ್ನೂ ದೊಡ್ಡಮಟ್ಟದ ಸಾಧನೆ ಮಾಡುವುದು ಅಮನ್ ಗುರಿಯಾಗಿದೆ’ ಎಂದು ಜೈವೀರ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT