ಲಾಹೋರ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಗೆದ್ದ ಸಾಧನೆಗಾಗಿ ಪಾಕಿಸ್ತಾನದ ಜಾವೆಲಿನ್ ಥ್ರೋ ತಾರೆ ಅರ್ಷದ್ ನದೀಮ್ ಅವರಿಗೆ ಮಂಗಳವಾರ ಪಂಜಾಬ್ ಪ್ರಾಂತ್ಯ ಸರ್ಕಾರವು ₹1 ಕೋಟಿ ಮತ್ತು ವಿಶೇಷ ನಂಬರ್ ಪ್ಲೇಟ್‌ನ ಹೊಸ ಕಾರನ್ನು ಬಹುಮಾನವಾಗಿ ನೀಡಿದೆ.
ನದೀಂ ಮತ್ತು ಅವರ ಕುಟುಂಬವು ಪಂಜಾಬ್ ಪ್ರಾಂತ್ಯದ ಖಾನೆವಾಲ್ ಜಿಲ್ಲೆಯ ಮಿಯಾನ್ ಚಾನು ಗ್ರಾಮದಲ್ಲಿ ವಾಸಿಸುತ್ತಿದ್ದು, ಅಲ್ಲಿಗೆ ಭೇಟಿ ನೀಡಿದ ಪಂಜಾಬ್ ಪಾಂತ್ಯ ಮುಖ್ಯಮಂತ್ರಿ ಮರಿಯಮ್ ನವಾಜ್ ನಗದು ಬಹುಮಾನದ ಚೆಕ್ ಮತ್ತು ಕಾರಿನ ಕೀ ಅನ್ನು ಅರ್ಷದ್ ಅವರಿಗೆ ಹಸ್ತಾಂತರಿಸಿದರು.
ಆಗಸ್ಟ್ 8ರಂದು ಪ್ಯಾರಿಸ್‌ನಲ್ಲಿ ನದೀಂ ಅವರು 92.97 ಮೀಟರ್ ದೂರ ಜಾವೆಲಿನ್ ಎಸೆದು, ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಹೀಗಾಗಿ, ‘92.97’ ವಿಶೇಷ ನಂಬರ್ ಪ್ಲೇಟ್‌ನ ಕಾರನ್ನೇ ಅವರಿಗೆ ನೀಡಲಾಯಿತು.
‘ಅರ್ಷದ್ ನಮ್ಮ ರಾಷ್ಟ್ರದ ಹೆಮ್ಮೆ. ಅವರು ಪಾಕಿಸ್ತಾನದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಆದ್ದರಿಂದ ಎಲ್ಲಾ ರೀತಿಯ ಬಹುಮಾನ ಪಡೆಯಲು ಅವರು ಅರ್ಹರು’ ಎಂದು ಮರಿಯಮ್ ಹೇಳಿದರು.
ಮುಖ್ಯಮಂತ್ರಿಯ ಸೂಚನೆಯ ಮೇರೆಗೆ ಹೊಸ ಕಾರಿಗೆ ವಿಶೇಷ ನಂಬರ್‌ನ ಪ್ಲೇಟ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮರಿಯಮ್ ಅವರು ಇದೇ ವೇಳೆ ನದೀಮ್ ಅವರ ಕೋಚ್ ಸಲ್ಮಾನ್ ಇಕ್ಬಾಲ್ ಭಟ್ ಅವರಿಗೆ ₹ 50 ಲಕ್ಷದ ಚೆಕ್ ಅನ್ನು ಬಹುಮಾನವಾಗಿ ನೀಡಿದರು.
27 ವರ್ಷ ವಯಸ್ಸಿನ ನದೀಂ ಅವರು ಒಲಿಂಪಿಕ್ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ. ಪ್ಯಾರಿಸ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರು ಋತುವಿನ ಅತ್ಯುತ್ತಮ ಸಾಧನೆಯೊಂದಿಗೆ (89.45 ಮೀಟರ್) ಬೆಳ್ಳಿ ಗೆದ್ದಿದ್ದರು.
ನದೀಮ್ ಅವರ ಮೂಲಕ ಪಾಕಿಸ್ತಾನಕ್ಕೆ 40 ವರ್ಷಗಳ ಬಳಿಕ ಚಿನ್ನದ ಪದಕ ದಕ್ಕಿದೆ. 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಾಕ್ ಪುರುಷರ ಹಾಕಿ ತಂಡ ಚಿನ್ನ ಗೆದ್ದಿತ್ತು.
ಅರ್ಷದ್ ನದೀಮ್ ಅವರಿಗೆ ನೀಡಲಾದ ಕಾರಿನ ನಂಬರ್ ಪ್ಲೇಟ್ –ಎಕ್ಸ್ ಚಿತ್ರ