ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯ ಸಾಧಕರ ಮನದ ಅಲೆಗಳು..

Last Updated 26 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಏಷ್ಯನ್ ಕ್ರೀಡಾಕೂಟಕ್ಕೆ ನನ್ನೊಂದಿಗೆ ಬರದಂತೆ ಅಪ್ಪ ಅಮ್ಮನಿಗೆ ಹೇಳಿದ್ದೇನೆ. ಅವರು ಬಂದರೆ ದಿನನಿತ್ಯದ ಜೀವನಶೈಲಿಗೆ ಸಂಬಂಧಿಸಿದಂತೆ ಕೆಲವು ಮಿತಿಗಳಲ್ಲಿ ಇರಬೇಕಾಗುತ್ತದೆ. ಅದು ನನಗೆ ಸರಿ ಬರುವುದಿಲ್ಲ’

ಹೀಗೆ, ಹೇಳಿದ್ದು ಹದಿನಾರು ವರ್ಷದ ಭಾರತದ ಉದಯೋನ್ಮುಖ ಶೂಟರ್‌ ಮನು ಭಾಕರ್. ಸದ್ಯ ಇಂಡೊನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಮನು ಭಾಗವಹಿಸಿದ್ದಾರೆ. ಇತ್ತೀಚೆಗೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು.

ಮನು ಏಕೆ ಹೀಗೆ ಹೇಳಿರಬಹುದು? ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವರಿಗೆ ತಾವು ಎದುರಿಸಬೇಕಾದ ಒತ್ತಡ,ನಿಭಾಯಿಸಬೇಕಾದ ಜವಾಬ್ದಾರಿ ಕಿರಿ ಕಿರಿ ಉಂಟು ಮಾಡುತ್ತಿದೆಯೇ?ದಿನವೂ ತರಬೇತಿ,ಫಿಟ್‌ನೆಸ್,ಪಾಲಿಸಬೇಕಾದ ಡಯಟ್ ಅವರಿಗೆ ಕಷ್ಟವಾಗುತ್ತಿದೆಯೇ? ಹಾಗಿದ್ದರೆ ಮಕ್ಕಳನ್ನು ಬಾಲ್ಯದಲ್ಲಿಯೇ ವೃತ್ತಿಪರ ಕ್ರೀಡೆಯತ್ತ ಕಳುಹಿಸುವುದು ಸೂಕ್ತವೇ? ಹಾಗಿಲ್ಲದಿದ್ದರೆ ದೇಶಕ್ಕೆ ಪದಕ ಗೆದ್ದು ತರುವ ಆಟಗಾರರನ್ನು ರೂಪಿಸುವುದು ಹೇಗೆ? ‘ಟೀನ್ ಏಜ್ ಫೇಮ್‌’ ನಿರ್ವಹಿಸುವುದು ಹೇಗೆ? ಆಡ್‌ ಆಡ್ತಾ ಬೆಳೆಯುವ ಮಕ್ಕಳು ಈ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಯುರೋಪ್, ಚೀನಾ, ಅಮೆರಿಕಗಳಲ್ಲಿ ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಮಕ್ಕಳು ಸಾಧನೆ ಮಾಡುವುದು ಸಾಮಾನ್ಯ. ಆದರೆ ಭಾರತದಲ್ಲಿ ಅದು ಅಪರೂಪ. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ 1989ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ಅವರು 16 ವರ್ಷದವರಾಗಿದ್ದರು. ಆಟದಲ್ಲಿ ಬೆಳೆಯಲು ತಾವು ಬಾಲ್ಯದಲ್ಲಿ ಪಟ್ಟ ಶ್ರಮ ಮತ್ತು ಮಾಡಿದ ತ್ಯಾಗಗಳನ್ನು ಸಚಿನ್‌ ಹಲವು ಸಲ ನೆನಪಿಸಿಕೊಂಡಿದ್ದಿದೆ.

‘ಬಾಲ್ಯದ ದಿನಗಳಿಂದಲೇ ಅವರು ಅನೇಕ ಮಿತಿಗಳಲ್ಲಿ ತಮ್ಮ ದಿನನಿತ್ಯದ ಬದುಕಿನ ಶಿಸ್ತು ರೂಪಿಸಿ ಕೊಳ್ಳಬೇಕಾಗುತ್ತದೆ. ವಯೋಸಹಜ ಆಕಾಂಕ್ಷೆಗಳನ್ನು ಹತ್ತಿಕ್ಕಬೇಕಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಈ ಅಂಶಗಳೆಲ್ಲ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಈ ವಿಷಯಗಳನ್ನು ವೈಜ್ಞಾನಿಕ ತಳಹದಿಯಲ್ಲಿ ವಿಶ್ಲೇಷಿಸುವುದು ಮುಖ್ಯ’ ಎನ್ನುತ್ತಾರೆ ಕ್ರೀಡಾ ಮನೋವಿಜ್ಞಾನಿ ದೇಚಮ್ಮಾ ಮುದ್ದಪ್ಪ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ಒತ್ತಡ ಸಹಜ. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ಅತಿಯಾದ ನಿರೀಕ್ಷೆ,ಖ್ಯಾತಿ ಕೆಲವೊಮ್ಮೆ ಭಾರವಾಗಬಹುದು. ಜೀವನ ಶೈಲಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ,ಸ್ಪರ್ಧಾತ್ಮಕ ಜಗತ್ತಿನ ತೀವ್ರತೆ ಇದಕ್ಕೆ ಕಾರಣ. ಆದರೆ ಅದು ಅವರೇ ಮಾಡಿಕೊಂಡ ಆಯ್ಕೆ ಎಂಬುದನ್ನು ಅವರು ಮನಗಾಣಬೇಕು’ಎಂದು ಹೇಳುತ್ತಾರೆ.

‘ಪಾಲಕರು,ಕೋಚ್,ಡಯೆಟಿಷಿಯನ್ ಹೀಗೆ ಎಲ್ಲರೂ ಈ ಸಂಗತಿಯನ್ನು ಅವರಿಗೆ ಮನಗಾಣಿಸಲು ನೆರವಾಗಬೇಕು. ಯಾವುದೇ ಕ್ರೀಡೆಯಿರಲಿ,ಅದಕ್ಕೆ ದೈಹಿಕ ಸಿದ್ಧತೆಗಿಂತ ದುಪ್ಪಟ್ಟು ಮಾನಸಿಕ ಸದೃಢತೆ ಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಭಿನ್ನ ಸಾಮರ್ಥ್ಯವಿರುತ್ತದೆ. ಅದನ್ನು ಮೊದಲು ಗುರುತಿಸಬೇಕು. ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು. ಹಾಗಾದಾಗ ಮಾತ್ರ ಎಷ್ಟೇ ಒತ್ತಡ ಇದ್ದರೂ ತಾವು ರೂಢಿಸಿಕೊಂಡ ಶಿಸ್ತು ಕ್ರೀಡಾಪಟುಗಳಿಗೆ ಸಹ್ಯವಾಗುತ್ತದೆ. ಇಲ್ಲದಿದ್ದರೆ,ಅದೇ ಅಂಶ ತಡೆಗೋಡೆಯಾಗಿ ಅವರ ವೈಫಲ್ಯಕ್ಕೆ ಕಾರಣವಾಗುತ್ತದೆ’ಎಂದು ಹೇಳುತ್ತಾರೆ.

‘ತರಬೇತಿ ನೀಡುವ ಶೈಲಿ,ಪಠ್ಯ ಕ್ರಮ,ಪ್ರಾಯೋಗಿಕ ತಿಳಿವಳಿಕೆ ನಮ್ಮ ದೇಶದ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಬರಬೇಕಿದೆ. ಪ್ರತಿಭೆಯನ್ನು ಹೊರತರಲು ಯಾವೆಲ್ಲ ಮಾನದಂಡಗಳನ್ನು ಬಳಸುತ್ತೇವೆ ಎಂಬುದು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಜ ಸಾಮರ್ಥ್ಯ ನಮಗೆ ಮುಖ್ಯವಾಗಬೇಕು. ಪಾಲಕರ ಅಥವಾ ಇನ್ಯಾವುದೋ ಬಾಹ್ಯ ಒತ್ತಡದಿಂದ ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬಾರದು’ ಎಂದು ದೇಚಮ್ಮಾ ಹೇಳುತ್ತಾರೆ.

‘ತಂದೆ-ತಾಯಿ,ಕೋಚ್‌ಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮನುಷ್ಯರನ್ನು ಯಂತ್ರದಂತೆ ಕಾಣುವ ದೃಷ್ಟಿಕೋನ ನಿಲ್ಲಿಸಬೇಕು. ಸೋಲಿಗೆ ಕುಗ್ಗದ,ಗೆಲುವಿಗೆ ಹಿಗ್ಗದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಕ್ರೀಡಾಪಟುಗಳಿಗೆ ಅನುವು ಮಾಡಿಕೊಡಬೇಕು. ಹಾಗಾದಾಗ ಮಾತ್ರ ಮಾನಸಿಕ ಸಬಲತೆ ಇರುವ ಚಾಂಪಿಯನ್ ಆಟಗಾರರಾಗಲು ಸಾಧ್ಯ’ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಅಪ್ಪನ ಸಲಹೆಗೆ ಕಿವಿಗೊಟ್ಟ ಮನು ಭಾಕರ್, ಪ್ರತಿದಿನ 200 ಕಿಲೋಮೀಟರ್ಸ್‌ ದೂರ ಪ್ರಯಾಣಿಸಿ ತರಬೇತಿ ಪಡೆಯುತ್ತಿದ್ದ ಶಾರ್ದೂಲ್ ವಿಹಾನ್, ಬಾಲ್ಯದಿಂದಲೂ ಅಪ್ಪನ ಕಠಿಣ ತರಬೇತಿಯಲ್ಲಿ ಪಳಗಿ ಒಲಿಂಪಿಯನ್ ಕುಸ್ತಿಪಟುಗಳಾಗಿರುವ ಪೋಗಟ್ ಸಹೋದರಿಯರು ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ. ಪಿ.ವಿ. ಸಿಂಧು ಕೂಡ ಬಾಲ್ಯದಿಂದಲೇ ಕಠಿಣ ಶ್ರಮ ಪಟ್ಟಿದ್ದರಿಂದ ಒಲಿಂಪಿಕ್ಸ್‌ ಪದಕ ಗೆದ್ದಿದ್ದಾರೆ. 23ನೇ ವಯಸ್ಸಿಗೇ ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಟದೊಂದಿಗೆ ಓದು ಮತ್ತು ಬದುಕಿನ ಕಲೆಯನ್ನು ನಿಭಾಯಿಸುವುದನ್ನೂ ಮಕ್ಕಳಿಗೆ ಹೇಳಿಕೊಡುವುದು ಇವತ್ತಿನ ಅಗತ್ಯ.

*
ಬಹಳ ಸಲ ಒಬ್ಬ ಕ್ರೀಡಾಪಟುವಿನ ಯಶಸ್ಸು ನಮಗೆ ಮುಖ್ಯವಾಗುತ್ತದೆ. ಆದರೆ, ಅದರ ಹಿಂದಿನ ಶ್ರಮ ಮತ್ತು ಶಿಸ್ತು ಕಾಣಿಸುವುದಿಲ್ಲ. ಗೆಲುವು ಹಾಗೂ ಸೋಲನ್ನು ಸಮಾನವಾಗಿ ಕಾಣುವ ಪ್ರಭುದ್ಧತೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮಿಷ್ಟದ ಕ್ರೀಡೆಯು ಹಿಂಸೆಯ ಅನುಭವ ನೀಡುತ್ತದೆ.
-ದೇಚಮ್ಮಾ ಮುದ್ದಪ್ಪ, ಮನೋವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT