ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್ ಟೂರ್ನಿ: ಕರುವಾನಾ ಜೊತೆ ‘ಡ್ರಾ‘ ಮಾಡಿಕೊಂಡ ಗುಕೇಶ್

Published 4 ಜುಲೈ 2024, 14:14 IST
Last Updated 4 ಜುಲೈ 2024, 14:14 IST
ಅಕ್ಷರ ಗಾತ್ರ

ಬುಖಾರೆಸ್ಟ್ (ರೊಮೇನಿಯಾ): ವಿಶ್ವ ಚಾಂಪಿಯನ್‌ಗೆ ಪಟ್ಟಕ್ಕೆ ಸವಾಲು ಹಾಕುವ ಅರ್ಹತೆ ಪಡೆದಿರುವ ಡಿ.ಗುಕೇಶ್‌, ಸೂಪರ್‌ಬೆಟ್‌ ಕ್ಲಾಸಿಕ್ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರ ಜೊತೆ ‘ಡ್ರಾ’ ಮಾಡಿಕೊಂಡರು. ಬುಧವಾರ ಏಳನೇ ಸುತ್ತಿನ ಇತರ ಪಂದ್ಯಗಳೂ ಡ್ರಾ ಆದವು.

ಕರುವಾನಾ (4.5) ಈ ಡ್ರಾ ನಂತರವೂ ಅರ್ಧ ಪಾಯಿಂಟ್‌ ಅಂತರದಿಂದ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರು ಇದುವರೆಗೆ ಎರಡು ಗೆದ್ದು, ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ ಆರ್‌.ಪ್ರಜ್ಞಾನಂದ (4) ಇನ್ನೊಂದು ಪಂದ್ಯದಲ್ಲಿ ರಷ್ಯಾದ ಇಯಾನ್‌ ನಿಪೊಮ್‌ನಿಷಿ (3.5) ಜೊತೆ ಪಾಯಿಂಟ್‌ ಹಂಚಿಕೊಂಡರು.

ಇನ್ನು ಎರಡು ಸುತ್ತಿನ ಆಟಗಳು ಉಳಿದಿರುವಂತೆ ಗುಕೇಶ್‌, ಪ್ರಜ್ಞಾನಂದ, ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರು ತಲಾ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ನಿಪೊಮ್‌ನಿಷಿ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್‌ ವೇಷಿಯರ್‌ ಲಗ್ರಾವ್ (ತಲಾ 3.5) ಮೂರನೇ ಸ್ಥಾನವನ್ನು ಜಂಟಿಯಾಗಿ ಹೊಂದಿದ್ದಾರೆ. ಅಮೆರಿಕದ ವೆಸ್ಲಿ ಸೊ, ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಮತ್ತು ಹಾಲೆಂಡ್‌ನ ಅನಿಷ್‌ ಗಿರಿ (ತಲಾ 3) ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಬೊಗ್ಡಾನ್ ಡಿಯಾಕ್ ಡೇನಿಯಲ್ (2.5) ಅವರು ಹತ್ತು ಆಟಗಾರರ ಈ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಕರುವಾನಾ ಮತ್ತು ಗುಕೇಶ್‌ ನಡುವಣ ಪಂದ್ಯದ ಮಧ್ಯಮ ಹಂತದ ನಂತರ ಯಾರೊಬ್ಬರಿಗೂ ಸ್ಪಷ್ಟ ಮೇಲುಗೈ ದೊರೆಯಲಿಲ್ಲ. ಪಂದ್ಯ ಕ್ವೀನ್‌–ರೂಕ್‌ ‘ಎಂಡ್‌ಗೇಮ್‌’ ಹಂತ ತಲುಪಿದ ನಂತರ ಏನೂ ಉಳಿದಿರಲಿಲ್ಲ. 62 ನಡೆಗಳ ನಂತರ ಇಬ್ಬರೂ ಡ್ರಾಕ್ಕೆ ಸಮ್ಮತಿಸಿದರು.

ಪ್ರಜ್ಞಾನಂದ ಅವರಿಗೆ ನಿಪೊಮ್‌ನಿಷಿ ಜೊತೆ ‘ಡ್ರಾ’ ಮಾಡಿಕೊಳ್ಳಲು ಅಷ್ಟೇನೂ ಪ್ರಯಾಸಪಡಬೇಕಾಗಿ ಬರಲಿಲ್ಲ. ಆದರೆ ನಿಪೊಮ್‌ನಿಷಿ ಅವರಿಗೆ ಪ್ರಜ್ಞಾನಂದ ಅವರ ಸಿದ್ಧತೆ ಬೆರಗು ಮೂಡಿಸಿತು.

ಎಂಟನೇ ಸುತ್ತಿನಲ್ಲಿ ಕರುವಾನಾ ಅವರು ಪ್ರಜ್ಞಾನಂದ ಅವರನ್ನು; ಗುಕೇಶ್‌, ಅನಿಶ್‌ ಗಿರಿ ಅವರನ್ನು ಎದುರಿಸಲಿದ್ದಾರೆ. ಯಂತ್ರದ ರೀತಿ ನಿಖರ  ನಡೆಗಳನ್ನಿರಿಸುವ ನಿಪೊಮ್‌ನಿಷಿ ಅವರನ್ನು ಮಣಿಸಿದಲ್ಲಿ ಅಲಿರೇಝಾ ಅವರಿಗೂ ಪ್ರಶಸ್ತಿಗೆ ಪ್ರಯತ್ನಿಸಲು ಅವಕಾಶ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT